ಬೆಂಗಳೂರು(Bengaluru): ಪಿಎಸ್‌ಐ ನೇಮಕಾತಿ ಹಗರಣ ಮಾಸುವ ಮುನ್ನವೇ ಕೆಪಿಟಿಸಿಎಲ್ ಕಿರಿಯ ಸಹಾಯಕ ಹುದ್ದೆ ಪರೀಕ್ಷೆಯಲ್ಲಿ ನಡೆದ ಹಗರಣ ಬಯಲಿಗೆ ಬಂದಿದೆ. ಇದು ಸರ್ಕಾರದ ವೈಫಲ್ಯವೋ ಅಥವಾ ಹಗರಣಗಳ ಸಾಧನೆಯೋ ತಿಳಿಯುತ್ತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಕೆಪಿಟಿಸಿಎಲ್ ನೇಮಕಾತಿ ಹಗರಣ ಬಯಲಿಗೆ ಬಂದಿರುವ ಕುರಿತು ಟ್ವೀಟ್ ಮಾಡಿರುವ ಅವರು, ತಂದೆ-ಮಗ ಪರೀಕ್ಷಾ ಕೇಂದ್ರಕ್ಕೆ ಬಂದು ಪ್ರಶ್ನೆ ಪತ್ರಿಕೆಯನ್ನು ಸೋರಿಕೆ ಮಾಡಿದ್ದಾರೆ ಎನ್ನಲಾಗುತ್ತಿದ್ದು, ಇದು ಸರ್ಕಾರದ ವೈಫಲ್ಯವೋ ಅಥವಾ ಹಗರಣಗಳ ಸಾಧನೆಯೋ ತಿಳಿಯುತ್ತಿಲ್ಲ ಎಂದಿದ್ದಾರೆ.
ಬಿಜೆಪಿ ಸರ್ಕಾರದ ಆಡಳಿತಾವಧಿಯಲ್ಲಿ ಹಗರಣಗಳ ಸಂಖ್ಯೆ ಆಕಾಶದತ್ತ ಮುಖ ಮಾಡುತ್ತಲೇ ಇದೆ. ಪ್ರತಿಯೊಂದು ವಿಚಾರಕ್ಕೂ ‘ಕಠಿಣ ಕ್ರಮ’ ಕೈಗೊಳ್ಳುವ ಸರ್ಕಾರ ಈ ವಿಚಾರಗಳಲ್ಲಿ ಮೌನವ್ರತ ಆಚರಿಸುತ್ತಿದೆಯೇ? ನಿರುದ್ಯೋಗ ಸಮಸ್ಯೆ ಎಲ್ಲರ ಊಹೆಗೂ ಮೀರಿ ಬೆಳೆಯುತ್ತಿದೆ. ಹೀಗಿದ್ದಾಗ ಇಂತಹ ಹಗರಣಗಳು ಪದೇ ಪದೇ ನಡೆಯುತ್ತಿದ್ದರೆ ಉದ್ಯೋಗಾಕಾಂಕ್ಷಿಗಳ ಗತಿಯೇನು? ಎಂದು ಕೇಳಿದರು.
ಕಠಿಣ ಕ್ರಮ ಎನ್ನುವುದು ಬಿಜೆಪಿ ಸರ್ಕಾರದ ಮಾತಿಗೆ ಸೀಮಿತವಾಗಿರದೆ ಅದು ಅನುಷ್ಠಾನಕ್ಕೆ ಬರಬೇಕು. ಈ ಹಗರಣದಲ್ಲಿ ಭಾಗಿಯಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ನಡೆದ ಪ್ರಮಾದವನ್ನು ಸರಿ ಮಾಡುವುದಕ್ಕೆ ಬೇಕಾದ ಸೂಕ್ತ ಕ್ರಮಗಳನ್ನು ರಾಜ್ಯ ಸರ್ಕಾರ ಕೈಗೊಳ್ಳಬೇಕೆಂದು ನಾನು ಆಗ್ರಹಿಸುತ್ತೇನೆ ಎಂದು ಹೇಳಿದ್ದಾರೆ.