ನವದೆಹಲಿ: ಮಥುರಾ ಶ್ರೀಕೃಷ್ಣ ಜನ್ಮಭೂಮಿ ಮತ್ತು ಶಾಹಿ ಈದ್ಗಾ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ ಹಿಂದೂ ಪರ ಅರ್ಜಿಯನ್ನು ಗುರುವಾರ (ಡಿ.14) ಸ್ವೀಕರಿಸಿದ್ದು, ಇದರೊಂದಿಗೆ ಮಸೀದಿ ಆವರಣದಲ್ಲಿ ನ್ಯಾಯಾಲಯದ ಆಯೋಗದ ಸಮೀಕ್ಷೆಗೆ ಅನುವು ಮಾಡಿಕೊಟ್ಟಂತಾಗಿದೆ.
ಏತನ್ಮಧ್ಯೆ ಮಸೀದಿಯನ್ನು ಖಾಲಿ ಜಾಗದಲ್ಲಿ ನಿರ್ಮಿಸಿದ್ದು, ಸಮೀಕ್ಷೆಗೆ ಅವಕಾಶ ನೀಡಬಾರದು ಎಂಬ ಈದ್ಗಾ ಸಮಿತಿ ಮತ್ತು ವಕ್ಫ್ ಬೋರ್ಡ್ ನ ವಾದವನ್ನು ಹೈಕೋರ್ಟ್ ತಳ್ಳಿಹಾಕಿದೆ.
ಭಗವಾನ್ ಶ್ರೀಕೃಷ್ಣನ ದೇವಾಲಯವನ್ನು ನಾಶಗೊಳಿಸಿ, ಆ ಜಾಗದಲ್ಲಿ ಶಾಹಿ ಈದ್ಗಾ ಮಸೀದಿಯನ್ನು ನಿರ್ಮಿಸಲಾಗಿದೆ. ಮಥುರಾ ಶ್ರೀಕೃಷ್ಣನ ಜನ್ಮಸ್ಥಳವಾಗಿದೆ ಎಂದು ಹಿಂದು ಪರ ಕಕ್ಷಿದಾರರು ಪ್ರತಿಪಾದಿಸಿದ್ದಾರೆ.
2020ರಲ್ಲಿ ಹಿಂದು ಪರ ಕಕ್ಷಿದಾರರು ಮಥುರಾ ಜಿಲ್ಲಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದು, ಈದ್ಗಾ ಶಾಹಿ ಮಸೀದಿಯನ್ನು ತೆರವುಗೊಳಿಸಿ, ದೇವಸ್ಥಾನವನ್ನು ಪುನರ್ ನಿರ್ಮಿಸಲು ಅವಕಾಶ ನೀಡಬೇಕೆಂದು ಅರ್ಜಿಯಲ್ಲಿ ಕೋರಿದ್ದರು. ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ಪ್ರಕರಣದಲ್ಲಿ ರಾಮಮಂದಿರ ನಿರ್ಮಿಸಲು ಸುಪ್ರೀಂಕೋರ್ಟ್ 2019ರಲ್ಲಿ ತೀರ್ಪು ನೀಡಿದ್ದ ಹಿನ್ನೆಲೆಯನ್ನು ಆಧಾರವಾಗಿಟ್ಟುಕೊಂಡು ಮಥುರಾ ಶ್ರೀಕೃಷ್ಣ ಜನ್ಮಸ್ಥಾನದ ವಿಚಾರದಲ್ಲಿ ತಕರಾರು ಅರ್ಜಿ ಸಲ್ಲಿಸಲಾಗಿತ್ತು.
ಮಥುರಾದಲ್ಲಿ ಶಾಹಿ ಈದ್ಗಾ ಮಸೀದಿಯನ್ನು ತೆರವುಗೊಳಿಸಬೇಕೆಂಬ ಅರ್ಜಿಯನ್ನು ಜಿಲ್ಲಾ ಕೋರ್ಟ್ ವಜಾಗೊಳಿಸಿತ್ತು. 1991ರ ಪೂಜಾ ಸ್ಥಳ ಮತ್ತು 1947ರ ಆಗಸ್ಟ್ 15ರ ಯಾವುದೇ ಧಾರ್ಮಿಕ ಪೂಜಾ ಸ್ಥಳದಲ್ಲಿ ಯಾವುದೇ ಬದಲಾವಣೆಗೆ ಅವಕಾಶ ಇಲ್ಲ ಎಂಬ ಕಾಯ್ದೆಯನ್ವಯ ಕೋರ್ಟ್ ಅರ್ಜಿಯನ್ನು ತಿರಸ್ಕರಿಸಿತ್ತು.