ಮಂಡ್ಯ (Mandya): ಕೃಷ್ಣರಾಜಸಾಗರ ಜಲಾಶಯದ (ಕೆಆರ್‌ಎಸ್) ಅಮೃತ ಮಹೋತ್ಸವವನ್ನು 4 ತಿಂಗಳಲ್ಲಿ ಆಚರಿಸಲಾಗುವುದು. ಅಮೃತ ಮಹೋತ್ಸವ ಕಾರ್ಯಕ್ರಮಕ್ಕಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ವೇದಿಕೆ ನಿರ್ಮಿಸಲು ಕ್ರಮ ವಹಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ ಹೇಳಿದ್ದಾರೆ.
ನಗರದ ಮಂಡ್ಯ ವಿಶ್ವವಿದ್ಯಾನಿಲಯದ ಆವರಣದಲ್ಲಿ ನಡೆದ ಮಂಡ್ಯ ವಿವಿ ವಿಧ್ಯುಕ್ತ ಉದ್ಘಾಟನೆ, ಸಂಜೀವಿನಿ ಸಾಮರ್ಥ್ಯ – ಜೀವನೋಪಾಯ ವರ್ಷ – 2022 ಕಾರ‍್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೆಆರ್‌ಎಸ್ ಜಲಾಶಯದಲ್ಲಿ ಗೇಟ್‌ಗಳ ಬದಲಾವಣೆ ಕಾರ್ಯ ಪ್ರಗತಿಯಲ್ಲಿದೆ. ತ್ವರಿತವಾಗಿ ಪೂರ್ಣಗೊಳಿಸಿ, ಅಮೃತ ಮಹೋತ್ಸವ ಸಂಭ್ರಮವನ್ನು ಜಿಲ್ಲೆಯ ಜನರೊಂದಿಗೆ ಹಂಚಿಕೊಳ್ಳಲಾಗುವುದು ಎಂದು ಹೇಳಿದರು.
ಕೆ.ಎನ್.ನಾಗೇಗೌಡರು ನೀರಾವರಿ ಸಚಿವರಾಗಿದ್ದಾಗ ವಿಶ್ವೇಶ್ವರಯ್ಯ ನಾಲೆಯನ್ನು ಆಧುನೀಕರಣಗೊಳಿಸಿದ್ದರು. ಬಳಿಕ ನಾನು ನೀರಾವರಿ ಸಚಿವನಾದಾಗ ವಿತರಣಾ ನಾಲೆಗಳ ಅಭಿವೃದ್ಧಿಗೆ ಆದ್ಯತೆ ನೀಡಿದ್ದೆ. ನಾನು ಸಚಿವನಾಗಿದ್ದಾಗಲೇ ಮಂಡ್ಯದಲ್ಲಿ ಕಾವೇರಿ ನೀರಾವರಿ ನಿಗಮದ ಕಚೇರಿಯನ್ನೂ ಸ್ಥಾಪಿಸಲಾಯಿತು. ಕಾವೇರಿ ಭವನವನ್ನು ಉದ್ಘಾಟಿಸಲಾಗಿದೆ ಎಂದು ತಿಳಿಸಿದರು.
ವಿಸಿ ನಾಲೆಯ ಸಮಗ್ರ ಅಭಿವೃದ್ಧಿಗೆ 500 ಕೋಟಿ ರೂ. ವ್ಯಯಿಸಲಾಗಿದೆ. ಜಿಲ್ಲೆಯ ಹೆಬ್ಬಕವಾಡಿ, ತುರುಗನೂರು, ಮದ್ದೂರು ಹಾಗೂ ಸೂಳೆಕೆರೆ ವಿತರಣಾ ನಾಲೆಗಳ ಅಭಿವೃದ್ಧಿಗೆ 500 ಕೋಟಿ ಒದಗಿಸಿ ರೈತರ ಜಮೀನುಗಳಿಗೆ ನೀರೊದಗಿಸಲು ಬಿಜೆಪಿ ಸರ್ಕಾರ ಮುಂದಾಗಿದೆ ಎಂದರು.
ಮೈಷುಗರ್ ಕಾರ್ಖಾನೆಯನ್ನು ಸರ್ಕಾರಿ ಸ್ವಾಮ್ಯದಲ್ಲೇ ನಡೆಸುವ ನಿರ್ಧಾರ ಪ್ರಕಟಿಸಿದ್ದೆ. ಇಂದು ಕಾರ್ಖಾನೆಯ ಬಾಯ್ಲರ್‌ಗೆ ಅಗ್ನಿಸ್ಪರ್ಶ ಮಾಡಲಾಗಿದೆ. ಸದ್ಯದಲ್ಲೇ ಕಬ್ಬು ನುರಿಸುವ ಕಾರ‍್ಯಕ್ಕೆ ಚಾಲನೆ ನೀಡಲು ನಾನೇ ಬರುತ್ತೇನೆ. ಮೈಶುಗರ್‌ಗೆ ಅಗತ್ಯ ಅನುದಾನ ನೀಡಲಾಗುವುದು ಎಂದು ಹೇಳಿದರು.
ಈ ವೇಳೆ ನಾನಾ ಯೋಜನೆಗಳ ಫಲಾನುಭವಿಗಳಿಗೆ ಚೆಕ್‌ಗಳು, ಕೈಪಿಡಿ ವಿತರಣೆ, ಸ್ವಸಹಾಯ ಗುಂಪಿನ ಉತ್ಪನ್ನಗಳನ್ನು ವಿತರಿಸಲಾಯಿತು. ಸ್ವಸಹಾಯ ಗುಂಪು ಉತ್ಪಾದಿಸಿರುವ ತಿರಂಗವನ್ನು ಗಣ್ಯರು ಸ್ವೀಕರಿಸಿದರು. ಸಂಜೀವಿನಿ ಸಾಮರ್ಥ್ಯ – ಜೀವನೋಪಾಯ ವರ್ಷದ ಹಿನ್ನೆಲೆ ಕರಪತ್ರವನ್ನು ಬಿಡುಗಡೆ ಮಾಡಿ ಸಾಮರ್ಥ್ಯ ಮಳಿಗೆಯನ್ನು ಉದ್ಘಾಟಿಸಲಾಯಿತು.
ಶಾಸಕ ಎಂ. ಶ್ರೀನಿವಾಸ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ, ಸಚಿವರಾದ ಕೆ. ಸಿ. ನಾರಾಯಣಗೌಡ, ಡಾ. ಸಿ. ಎನ್. ಅಶ್ವತ್ಥ ನಾರಾಯಣ, ಸಂಸದೆ ಸುಮಲತಾ ಅಂಬರೀಶ್, ಶಾಸಕ ಕೆ. ಸುರೇಶ್ ಗೌಡ, ನಗರಸಭೆ ಅಧ್ಯಕ್ಷ ಎಚ್. ಎಸ್. ಮಂಜು, ಮುಡಾ ಅಧ್ಯಕ್ಷ ಕೆ. ಶ್ರೀನಿವಾಸ್, ಜೀವನೋಪಾಯ ಇಲಾಖೆಯ ನಿರ್ದೇಶಕಿ ಎಂ. ಮಂಜುಶ್ರೀ, ಕಾರ‍್ಯದರ್ಶಿ ಡಾ. ಎಸ್. ಸೆಲ್ವ ಕುಮಾರ್, ಜಿಲ್ಲಾಧಿಕಾರಿ ಎಸ್. ಅಶ್ವತಿ, ಜಿಪಂ ಸಿಇಒ ಶಾಂತ ಎಂ. ಹುಲ್ಮನಿ, ಎಸ್‌ಪಿ ಎನ್. ಯತೀಶ್, ಮಂಡ್ಯ ವಿ. ವಿ. ಉಪ ಕುಲಪತಿ ಡಾ. ಪುಟ್ಟರಾಜು, ಎಡಿಸಿ ಡಾ. ಎಚ್. ಎಲ್. ನಾಗರಾಜು ಇತರರು ಭಾಗವಹಿಸಿದ್ದರು.