ಶಿವಮೊಗ್ಗ: ಮುಖ್ಯಮಂತ್ರಿ ಸಿದ್ದರಾಮಯ್ಯನವರು ನನ್ನ ಹೆಣ ಕೂಡ ಬಿಜೆಪಿ ಹೋಗಲ್ಲವೆಂದು ಹೇಳಿದ್ದಾರೆ. ಆದರೆ ಅವರು ಬೇಗ ಸಾಯಬಾರದು ಎನ್ನುವುದು ನನ್ನ ಆಸೆ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಹಳ ವರ್ಷ ಬದುಕಿರಬೇಕು, ಜನರು ಪರವಾಗಿ ಹಿಂದುಳಿದವರ ಪರವಾಗಿ ಹೋರಾಟ ಮಾಡಲಿ, ಬೇಡ ಅನ್ನಲ್ಲ ಆದರೆ ಯಾವ ಕಾರಣಕ್ಕೂ ನೀವು ಸಾಯುವುದು ಬೇಡ. ನಿಮ್ಮ ಹೆಣ ಬಿಜೆಪಿ ಕಚೇರಿಗೆ ಬರುವುದು ಬೇಡ. ಆದರೆ ನೀವು ಮೊದಲನೇ ಸರ್ಕಾರಿ ಕಾರು ಹತ್ತಿದ್ದು ಬಿಜೆಪಿಯ ಬೆಂಬಲದ ಸರ್ಕಾರದಿಂದ. ರಾಮಕೃಷ್ಣ ಹೆಗಡೆ ನೇತೃತ್ವದಲ್ಲಿ ಕಾವಲು ಸಮಿತಿಯ ಅಧ್ಯಕ್ಷರಾದಿರಿ. ಬಿಜೆಪಿಯ 19 ಜನ ಎಂಎಲ್ ಎ ಗಳು ಯಾವುದೇ ಷರತ್ತು ಇಲ್ಲದೆ ಬೆಂಬಲ ಕೊಟ್ಟಿದ್ದರು. ಕಾಂಗ್ರೆಸ್ಸೇತರ ಸರ್ಕಾರ ಕರ್ನಾಟಕದಲ್ಲಿ ಬರಬೇಕೆಂದು ಎಂದು ಬೆಂಬಲ ನೀಡಿದ್ದರು. ಆಗ ನೀವು ಮೊದಲನೇ ಸರ್ಕಾರದ ಕಾರು ಹತ್ತಿದಿರಿ. ಆಗ ಭಾರತೀಯ ಜನತಾ ಪಾರ್ಟಿ ಕೋಮುವಾದಿ ಪಕ್ಷ ಅಂತ ಗೊತ್ತಾಗಲಿಲ್ಲವಾ? ಸರ್ಕಾರಿ ಕಾರು ಹತ್ತಬೇಕಾದರೆ ಮಜಾ ಮಾತ್ರ ಬೇಕಿತ್ತಾ ನಿಮಗೆ? ಬಿಜೆಪಿ ಬೆಂಬಲ ತಗೊಂಡು ಸಮಾಜವಾದಿಯಾದವರಿಗೆ ಕೋಮುವಾದಿ ಬಿಜೆಪಿಯೆಂದು ಗೊತ್ತಾಗಿದ್ದು ಯಾವಾಗ? ಅವತ್ತು ಕೋಮುವಾದಿ ಬಿಜೆಪಿಯೆಂದು ಗೊತ್ತಾಗದೆ ಇವತ್ತು ಯಾಕೇ ಕೋಮುವಾದಿಯೆಂದು ಗೊತ್ತಾಗಿದೆ ಎಂದು ತೀವ್ರ ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ಅವಕಾಶವಾದಿ ರಾಜಕಾರಣಿ. ಮಜಾ ಮಾಡಲು ಸಮಾಜವಾದಿ. ರಾಷ್ಟ್ರವಾದಿಗಳ ಬಗ್ಗೆ ನಿಮಗೆ ಟೀಕೆ ಮಾಡಲು ಬಾಯಲ್ಲಿ ಏನು ಇಟ್ಟುಕೊಂಡು ಟೀಕೆ ಮಾಡುತ್ತಾರೆ ಗೊತ್ತಿಲ್ಲ. ಸಿದ್ದರಾಮಯ್ಯ ರಾಜ್ಯದ ಜನರ ಕ್ಷಮೆ ಕೇಳಬೇಕು. ಬಿಜೆಪಿ ಬೆಂಬಲ ತಗೆದುಕೊಂಡು ಸರ್ಕಾರಿ ಕಾರು ಹತ್ತಿದ್ದು ನಿಜ ನಾನು ಕ್ಷಮೆ ಕೇಳುತ್ತೇನೆ ಎಂದು ಹೇಳಬೇಕು ಎಂದು ಈಶ್ವರಪ್ಪ ಆಗ್ರಹಿಸಿದರು.