ಹಾಸನ: ಸರ್ಕಾರಿ ಬಸ್ಸೊಂದು ಬೈಕ್ ಗೆ ಡಿಕ್ಕಿ ಹೊಡೆದು ಸವಾರರಿಬ್ಬರು ಮೃತಪಟ್ಟು, ಬಸ್ ಹೊತ್ತಿ ಉರಿದಿರುವ ಘಟನೆ ಮಂಗಳವಾರ ಚನ್ನರಾಯಪಟ್ಟಣ ತಾಲೂಕಿನ ಬೇಡಿಗನಹಳ್ಳಿ ಸರ್ಕಲ್ ಬಳಿ ನಡೆದಿದೆ.
ತಿಪಟೂರು ತಾಲೂಕಿನ ಬಿದರೆಕೆರೆ ಗ್ರಾಮದ ರೇಣುಕಪ್ಪ (42) ಮತ್ತು ಇದೇ ಗ್ರಾಮದ ರವೀಶ್ (25) ಮೃತ ದುರ್ದೈವಿಗಳು.
ಚಿಕ್ಕಮಗಳೂರು ಘಟಕದ ಕೆಎಸ್ ಆರ್ ಟಿಸಿ ಬಸ್ ಬೆಂಗಳೂರು ಕಡೆಯಿಂದ ಬರುತ್ತಿದ್ದು, ಬೇಡಿಗನಹಳ್ಳಿ ಸರ್ಕಲ್ ಬಳಿ ಮುಂದಿದ್ದ ಬೈಕ್ ಗೆ ಡಿಕ್ಕಿ ಹೊಡೆದಿದೆ. ಭೀಕರ ಅಪಘಾತದಲ್ಲಿ ಬೈಕ್ ನಲ್ಲಿದ್ದ ಸವಾರರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಬೈಕ್ ನ ಭಾಗಗಳು ಬೇರೆ ಬೇರೆಯಾಗಿವೆ.
ಬಸ್ ಮತ್ತು ಬೈಕ್ ಡಿಕ್ಕಿ ಹೊಡೆದ ತಕ್ಷಣವೇ ಬಸ್ನ ಇಂಧನ ಟ್ಯಾಂಕ್ ಸೋರಿಕೆಯಾಗಿದೆ. ಪರಿಣಾಮ ಬಸ್ಗೆ ಬೆಂಕಿ ಹೊತ್ತಿಕೊಂಡಿದೆ. ಕೂಡಲೇ ಬಸ್ ಚಾಲಕ ಪ್ರಯಾಣಿಕರನ್ನು ತುರ್ತಾಗಿ ಕೆಳಗೆ ಇಳಿಸಿ ಪ್ರಾಣ ಉಳಿಸಿದ್ದಾರೆ. ನೋಡ ನೋಡುತ್ತಲೇ ರಸ್ತೆ ಮಧ್ಯೆ ಬಸ್ ಸಂಪೂರ್ಣ ಬೆಂಕಿ ಕೆನ್ನಾಲಿಗೆಗೆ ಸಿಲುಕಿ ಸುಟ್ಟಿದೆ.
ಘಟನೆಯ ಮಾಹಿತಿ ಪಡೆದು ಅಗ್ನಿಶಾಮಕ ದಳದ ಸಿಬ್ಭಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಚನ್ನರಾಯಪಟ್ಟಣ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.