ಮನೆ ರಾಜ್ಯ ಕಾರ್ಮಿಕರ ದಿನವೇ ಸಾರಿಗೆ ನೌಕರರಿಗೆ ಸಿಹಿ ಸುದ್ದಿ: ಪ್ರಥಮ ಬಾರಿಗೆ 7200 ನೌಕರರ ವಿರುದ್ಧದ ಪ್ರಕರಣ...

ಕಾರ್ಮಿಕರ ದಿನವೇ ಸಾರಿಗೆ ನೌಕರರಿಗೆ ಸಿಹಿ ಸುದ್ದಿ: ಪ್ರಥಮ ಬಾರಿಗೆ 7200 ನೌಕರರ ವಿರುದ್ಧದ ಪ್ರಕರಣ ರದ್ದು

0

ಬೆಂಗಳೂರು (Bengaluru)-ಕಾರ್ಮಿಕರ ದಿನಾಚರಣೆ ದಿನವೇ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ತನ್ನ ಕಾರ್ಮಿಕರಿಗೆ ಸಿಹಿ ಸುದ್ದಿ ನೀಡಿದೆ. ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ 7,200 ನೌಕರರ ವಿರುದ್ಧದ ಶಿಸ್ತು ಪ್ರಕರಣಗಳನ್ನು ಒಂದೇ ಬಾರಿಗೆ ಅನ್ವಯಿಸುವಂತೆ ರದ್ದು ಮಾಡಲಾಗಿದೆ.

ನಿಗಮದ ಬೆಂಗಳೂರು ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಮಿಕ ದಿನಾಚರಣೆ ಕಾರ್ಯಕ್ರಮದಲ್ಲಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬು ಕುಮಾರ್‌ ಈ ನಿರ್ಧಾರ ಪ್ರಕಟಿಸಿದರು. 10 ತಿಂಗಳ ಅವಧಿಗಿಂತ ಕಡಿಮೆ ಅವಧಿಯ ಒಳಗಿನ ಗೈರು ಹಾಜರಿಯನ್ನು ಮನ್ನಿಸಿ, ಕೂಡಲೇ ಕರ್ತವ್ಯಕ್ಕೆ ಹಾಜರಾದ ನೌಕರರ ವಿಚಾರಣೆಯನ್ನು ರದ್ದುಗೊಳಿಸಿರುವುದಾಗಿ ತಿಳಿಸಿದ ಅವರು, ಬಸ್‌ ಅನ್ನು ನೀಡಿ ಚಾಲನೆಗೆ ಅವಕಾಶ ಮಾಡಿಕೊಟ್ಟರು. ಶಿಸ್ತು ಪ್ರಕರಣ ಮುಕ್ತಾಯಗೊಂಡಿರುವ ನೌಕರರಿಗೆ ಆದೇಶ ಪ್ರತಿಯನ್ನು ಸಿಹಿಯೊಂದಿಗೆ ವಿತರಿಸಿ ಶುಭ ಕೋರಿದರು.

ಅದರಂತೆ ಗೈರುಹಾಜರಾಗಿದ್ದ 110 ನೌಕರರು ಕಳೆದ ಮೂರು ದಿನಗಳಿಂದ ಕರ್ತವ್ಯ ಹಾಜರಾಗಿದ್ದು, ನಿಗಮದ ಸಮಸ್ತ ಸಿಬ್ಬಂದಿಗಳು 35000, ಅದರಲ್ಲಿ ಒಟ್ಟು 8414 ಶಿಸ್ತು ಪ್ರಕರಣಗಳಿವೆ. ಕಳೆದ‌ ಮೂರು ದಿನಗಳಿಂದ 7200 ಶಿಸ್ತು ಪ್ರಕರಣಗಳನ್ನು ಅತೀ ಕಡಿಮೆ ಮೊತ್ತ ದಂಡ ಅಂದರೆ, ರೂ 100,  ರೂ 200,  ಗರಿಷ್ಠ ರೂ500 ಅನ್ನು ವಿಧಿಸಿ ಪ್ರಕರಣಗಳನ್ನು ಮುಕ್ತಾಯಗೊಳಿಸಲಾಗಿದೆ. ಈ ಪ್ರಕರಣಗಳಿಗೆ ಕನಿಷ್ಠವೆಂದರೆ ರೂ.25000 ದಂಡ ವಿಧಿಸಬಹುದಾದ ಪ್ರಕರಣಗಳಾಗಿವೆ ಎಂದು ತಿಳಿದುಬಂದಿದೆ.

ಕಾರ್ಮಿಕರನ್ನು ಉದ್ದೇಶಿಸಿ ಮಾತನಾಡಿದ ಅನ್ಬುಕುಮಾರ್‌, ನಮ್ಮ ಸಾರಿಗೆ ಸಂಸ್ಥೆಯ ಬೆನ್ನುಲುಬು ಕಾರ್ಮಿಕರು. ಅವರ ಕ್ಷೇಮ, ಲಾಭವೇ ನಮ್ಮ ಪ್ರಮುಖ ಆದ್ಯತೆ. ನಮ್ಮ ಸಂಸ್ಥೆ ನಡೆಯುತ್ತಿರುವುದು ಚಾಲಕ, ನಿರ್ವಾಹಕ, ತಾಂತ್ರಿಕ ಸಿಬ್ಬಂದಿಯಿಂದಲೇ ಹೊರತು ವ್ಯವಸ್ಥಾಪಕ ನಿರ್ದೇಶಕರಿಂದಲ್ಲ. ವ್ಯವಸ್ಥಾಪಕ ನಿರ್ದೇಶಕರು ಬಸ್ಸನ್ನು ಚಾಲನೆ ಮಾಡಲು ಸಾಧ್ಯವಿಲ್ಲ. ಅಧಿಕಾರಿ ಅಥವಾ ನೌಕರರ ಬಾಂಧವ್ಯ ಚೆನ್ನಾಗಿದ್ದರೆ ಮಾತ್ರ ಸಂಸ್ಥೆ ಚೆನ್ನಾಗಿರುತ್ತದೆ ಎಂದರು.

ಈ ಸಂದರ್ಭದಲ್ಲಿ ಮುಖ್ಯ ಯಾಂತ್ರಿಕ ಶಿಲ್ಪಿ ರಮೇಶ್‌, ಮುಖ್ಯ ಸಂಚಾರ ವ್ಯವಸ್ಥಾಪಕ ಆಂಥೋನಿ ಜಾರ್ಜ್‌, ಮುಖ್ಯ ಕಾರ್ಮಿಕ ಕಲ್ಯಾಣಾಧಿಕಾರಿ ಗೌರಾಂಭ, ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಿ.ಎಸ್‌.ಲತಾ, ವಿಭಾಗೀಯ ನಿಯಂತ್ರಣಾಧಿಕಾರಿ ಲಕ್ಷ್ಮಣ ಮತ್ತಿತರರು ಇದ್ದರು.



ಹಿಂದಿನ ಲೇಖನಉಕ್ರೇನ್‌ನ ಮರಿಯುಪೋಲ್‌ ಉಕ್ಕಿನ ಘಟಕದ ಮೇಲೆ ರಷ್ಯಾ ಶೆಲ್‌ ದಾಳಿ ಆರಂಭ
ಮುಂದಿನ ಲೇಖನಶಾಲೆಗಳಲ್ಲಿ ವೇದ, ರಾಮಾಯಣ ಕಲಿಸಬೇಕು: ಉತ್ತರಾಖಂಡ ಶಿಕ್ಷಣ ಸಚಿವ ಧನ ಸಿಂಗ್‌ ರಾವತ್‌