ಮನೆ ರಾಜಕೀಯ ದೇವೇಗೌಡರು ಕಟ್ಟಿದ ಜೆಡಿಎಸ್ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ

ದೇವೇಗೌಡರು ಕಟ್ಟಿದ ಜೆಡಿಎಸ್ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ

0

ಮೈಸೂರು: ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಕಟ್ಟಿದ ಜೆಡಿಎಸ್‌ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡುತ್ತಿದ್ದಾರೆ ಎಂದು ಜೆಡಿಎಸ್‌ ಕೋರ್‌ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ ಬೇಸರ ವ್ಯಕ್ತಪಡಿಸಿದರು.

Join Our Whatsapp Group

ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಕುಮಾರಸ್ವಾಮಿ ಈಗ ಬಿಜೆಪಿಯನ್ನು ತಬ್ಬಿಕೊಂಡಿದ್ದಾರೆ. ಬಿಜೆಪಿ ಜೊತೆ ಹೋಗದೆ ಇದ್ದರೆ ಜೆಡಿಎಸ್‌ ಕಥೆ ಏನಾಗುತ್ತಿತ್ತು? ದೇವೇಗೌಡರು ದೇವರು, ಅವರ ಶ್ರಮದಿಂದ ಪಕ್ಷ ಉಳಿಯುತ್ತಿದೆ. ಈ ಮೊದಲು ಮುನಿಸು ಇದ್ದಾಗಲೂ ದೇವೇಗೌಡರು ನನ್ನ ಜತೆ ಮಾತನಾಡುತ್ತಿದ್ದರು. ಆದರೆ ಇತ್ತೀಚೆಗೆ ಸಾ.ರಾ.ಮಹೇಶ್‌ ತೋಟಕ್ಕೆ ಬಂದಾಗ ನನ್ನ ಜತೆ ಅವರು ಮಾತನಾಡಲಿಲ್ಲ. ಅವರಿಗೂ ನಾನು ಬೇಕಾಗಿಲ್ಲ ಅನಿಸುತ್ತದೆ. ಕುಮಾರಸ್ವಾಮಿ ಜೊತೆ ಇದ್ದವರೆ ಅವರಿಗೆ ಬೇಕಾಗಿತ್ತು. ಪಕ್ಷ ಉಳಿಸೋರೆ ಅವರ ಸರ್ಕಲ್‌ನಲ್ಲಿ ಇರೋರು. ಪಕ್ಷ ಉಳಿಸೋರೆ ಅವರ ಸರ್ಕಲ್‌ನಲ್ಲಿ ಆಪ್ತಮಿತ್ರರಾಗಿ ಇರಬೇಕು ಎಂದು ಮಾರ್ಮಿಕವಾಗಿ ಮಾತನಾಡಿದರು.

ಕೋರ್‌ ಕಮಿಟ್‌ ಅಧ್ಯಕ್ಷನಾಗಿ ಮಾಡಿದ ತಕ್ಷಣ ರಾಜ್ಯವನ್ನು ಸುತ್ತಿದೆ. ನನ್ನನ್ನು ಶಾಸಕಾಂಗ ಪಕ್ಷದ ಉಪ ನಾಯಕನ್ನಾಗಿ ಮಾಡಲಿಲ್ಲ. ಏಕೆಂದರೆ ಉಪನಾಯಕನನ್ನಾಗಿ ಮಾಡಿದರೇ ಪಕ್ಕದಲ್ಲಿ ಕೂರಿಸಿಕೊಳ್ಳಬೇಕಾಗುತ್ತದೆ. ಸಿದ್ದರಾಮಯ್ಯ ಇದೇ ವಿಚಾರವಾಗಿ ನನ್ನನ್ನು ಅಣುಕಿಸಿದರು ಎಂದು ತಮ್ಮ ಅಸಮಾಧಾನ ಹೊರಹಾಕಿದರು.

“ನನ್ನ ಹಾಗೂ ಕುಮಾರಸ್ವಾಮಿ ನಡುವೆ ಸಾಕಷ್ಟು ಬಾರಿ ಮುನಿಸಾಗಿದೆ. ಮುನಿಸಿಕೊಂಡಿದ್ದರೂ, ಮನಸ್ಸಿನಲ್ಲಿ ನೊಂದಿದ್ದರೂ ನಾನೇ ಮಾತನಾಡಿದ್ದೇನೆ. ನಾನು ಬಿಜೆಪಿಯಲ್ಲಿ ಇದ್ದಾಗ, ಜೆಡಿಎಸ್‌ನಲ್ಲಿ ಇದ್ದಿದ್ದರೇ 5 ಸ್ಥಾನ ಗೆಲ್ಲುತ್ತಿದ್ದೆವು ಎಂದು ಹೇಳಿ ವಾಪಸ್‌ ಕರೆದುಕೊಂಡವರು ಅವರೆ. ಆದರೆ, ಅಧಿಕಾರ ಕೊಡುವ ಸಮಯ ಬಂದಾಗ ದೂರ ಮಾಡುತ್ತಾರೆ. ಹಿರಿಯ ಎಂದು ನನ್ನನ್ನು ಯಾವತ್ತೂ ಪರಿಗಣಿಸಿಯೇ ಇಲ್ಲ. ಜ್ಯೂನಿಯರ್‌ ಟೀಮ್‌ ಕಟ್ಟಿಕೊಂಡಿದ್ದಾರೆ. ಅವರ ಮನಸ್ಸಿನಲ್ಲಿ ಏನಿದೆ ಎಂದು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದರು.

ನಾನು ಕಾಂಗ್ರೆಸ್‌ ಪಕ್ಷಕ್ಕೆ ಹೋಗುವ ಕುರಿತು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಜನ ತೀರ್ಮಾನ ಮಾಡುತ್ತಾರೆ ಎಂದು ಜೆಡಿಎಸ್‌ ಕೋರ್‌ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ ತಿಳಿಸಿದರು. ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ ಚುನಾವಣೆ ವೇಳೆ ಕಾಂಗ್ರೆಸ್‌ನಿಂದ ಆಫ‌ರ್‌ ಬಂದಿತ್ತು. ಸಿದ್ದರಾಮಯ್ಯ, ಕೆ.ಸಿ.ವೇಣುಗೋಪಾಲ್‌ ಮಂತ್ರಿ ಮಾಡುವುದಾಗಿ ಹೇಳಿದ್ದರು.

ಖುದ್ದು ರಾಹುಲ್‌ ಗಾಂಧಿ ಮನೆಗೆ ಬರಲು ತಯಾರಿ ಮಾಡಿಕೊಂಡಿದ್ದರು. ಆದರೆ ತಂದೆ ಸ್ಥಾನದಲ್ಲಿರುವ ದೇವೇಗೌಡರ ಮಾತಿಗೆ ಮಣಿದು ಜೆಡಿಎಸ್‌ನಲ್ಲಿಯೇ ಉಳಿದುಕೊಂಡೆ. ಮುಂದಿನ 3 ವರ್ಷ ಜೆಡಿಎಸ್‌ ಪಕ್ಷದಲ್ಲೇ ಇರುತ್ತೇನೆ. ಮುಂದೆ ಕಾಂಗ್ರೆಸ್‌ ಸೇರಬೇಕೋ ಬೇಡವೋ ಎಂದು ಜನ ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು.