ಮನೆ ಪೌರಾಣಿಕ ಕುರುಕ್ಷೇತ್ರ ಮಹಾತ್ಮೆ

ಕುರುಕ್ಷೇತ್ರ ಮಹಾತ್ಮೆ

0

ಈ ಕಥೆಯನ್ನು ವೈಶಂಪಾಯನನು ಜನಮೇಜಯನಿಗೆ ಶಲ್ಯ ಪರ್ವದ ಸಾರಸ್ವತಪರ್ವದ ಅಧ್ಯಾಯ 52ರಲ್ಲಿ ಹೇಳುತ್ತಾನೆ.

ಸನಾತನ ಸಮಂತಪಂಚಕವನ್ನು ಪ್ರಜಾಪತಿಯ ಉತ್ತರವೇದಿಯೆಂದು ಕರೆಯುತ್ತಾರೆ. ಮಹಾವರಪ್ರದ ದಿವೌಕಸರೇ ಹಿಂದೆ ಇಲ್ಲಿ ಶ್ರೇಷ್ಠ ಸತ್ರಗಳನ್ನು ಯಾಜಿಸಿದ್ದರು. ಹಿಂದೆ ರಾಜರ್ಷಿಶ್ರೇಷ್ಠ ಧೀಮತ ಅಮಿತ ತೇಜಸ್ವಿ ಮಹಾತ್ಮ ಕುರುವು ಅನೇಕ ವರ್ಷಗಳು ಹೂಳುತ್ತಿದ್ದುದರಿಂದ ಈ ಪ್ರದೇಶವು ಕುರುಕ್ಷೇತ್ರವೆಂದು ಪ್ರಸಿದ್ಧವಾಯಿತು.

ಹಿಂದೆ ಸತತವೂ ನಿಂತು ಉಳುತ್ತಿದ್ದ ಕುರುವನ್ನು ಶಕ್ರನು ತ್ರಿದಿವದಿಂದ ಬಂದು ಭೇಟಿಮಾಡಿ ಇದರ ಕಾರಣವನ್ನು ಕೇಳಿದ್ದನು: “ರಾಜನ್! ಯಾವ ಕಾರಣದಿಂದ ಈ ಮಹಾಪ್ರಯತ್ನವನ್ನು ಮಾಡುತ್ತಿದ್ದೀಯೆ? ಈ ಭೂಮಿಯನ್ನು ಸತತವಾಗಿ ಉಳುತ್ತಿರುವ ಉದ್ದೇಶವಾದರೂ ಏನು?”

ಕುರುವು ಹೇಳಿದನು: “ಶತಕ್ರತೋ! ಈ ಕ್ಷೇತ್ರದಲ್ಲಿ ಯಾರು ಮರಣಹೊಂದುತ್ತಾರೋ ಅವರು ಪಾಪಗಳನ್ನು ಕಳೆದುಕೊಂಡು ಸುಕೃತ ಲೋಕಗಳಿಗೆ ಹೋಗುತ್ತಾರೆ.”

ಆಗ ಪ್ರಭು ಶಕ್ರನು ಅಪಹಾಸ್ಯಮಾಡಿ ತ್ರಿದಿವಕ್ಕೆ ತೆರಳಿದನು. ರಾಜರ್ಷಿಯಾದರೋ ಸ್ವಲ್ಪವೂ ನಿರ್ವಿಣ್ಣನಾಗದೇ ಭೂಮಿಯನ್ನು ಉಳುತ್ತಲೇ ಇದ್ದನು. ಶತಕ್ರತುವು ಪುನಃ ಪುನಃ ಬಂದು ಅವನನ್ನು ಅಪಹಾಸ್ಯಮಾಡಿ ಕೇಳುತ್ತಿದ್ದನು. ಅವನು ನಿರ್ವಿಣ್ಣನಾಗದೇ ಮತ್ತೆ ಮತ್ತೆ ಅದೇ ಉತ್ತರವನ್ನು ನೀಡುತ್ತಿದ್ದನು. ನೃಪನಾದರೋ ಉಗ್ರ ತಪಸ್ಸಿನಂತೆ ಭೂಮಿಯನ್ನು ಉಳುತ್ತಿದ್ದನು. ಆಗ ಶಕ್ರವು ರಾಜರ್ಷಿಯ ಉದ್ದೇಶವನ್ನು ದೇವತೆಗಳಿಗೆ ತಿಳಿಸಿದನು. ಅದನ್ನು ಕೇಳಿ ದೇವತೆಗಳು ಸಹಸ್ರಾಕ್ಷನಿಗೆ ಈ ಮಾತನ್ನಾಡಿದರು: “ಶಕ್ರ! ಸಾಧ್ಯವಾದರೆ ರಾಜರ್ಷಿಗೆ ವರದಾನವನ್ನಿತ್ತು ಅವನನ್ನು ಒಲಿಸಿಕೋ! ಒಂದುವೇಳೆ ಮಾನವರು ಇಲ್ಲಿ ಮರಣಹೊಂದಿ ಸ್ವರ್ಗಕ್ಕೆ ಹೋಗುತ್ತಾರೆಂದಾದರೆ ನಮಗೆ ಕ್ರತುಗಳಲ್ಲಿ ಭಾಗವು ದೊರೆಯದಂತಾಗುತ್ತದೆ.”

ಆಗ ಶಕ್ರನು ರಾಜರ್ಷಿಯಲ್ಲಿಗೆ ಬಂದು ಹೇಳಿದನು: “ಇನ್ನು ನೀನು ಕಷ್ಟಪಡಬೇಡ! ನನ್ನ ಮಾತಿನಂತೆ ಮಾಡು! ನೃಪ! ಇಲ್ಲಿ ಮಾನವರು ನಿರಾಹಾರರಾಗಿ ಅತಂದ್ರಿತರಾಗಿ ದೇಹತ್ಯಾಗಮಾಡುತ್ತಾರೋ ಅಥವಾ ಯುದ್ಧದಲ್ಲಿ ಹತರಾಗುತ್ತಾರೋ ಅವರೆಲ್ಲರೂ ಸ್ವರ್ಗಕ್ಕೆ ಹೋಗುತ್ತಾರೆ. ಅವರೆಲ್ಲರೂ ಸ್ವರ್ಗಕ್ಕೆ ಭಾಗಿಗಳಾಗುತ್ತಾರೆ.”

ಅನಂತರ ಹಾಗೆಯೇ ಆಗಲೆಂದು ರಾಜ ಕುರುವು ಶಕ್ರನಿಗೆ ಹೇಳಿದನು. ಆಗ ಅವನಿಂದ ಅನುಮತಿಯನ್ನು ಪಡೆದು ಒಳಗಿಂದೊಳಗೇ ಪ್ರಹೃಷ್ಟನಾಗಿ ಬಲನಿಷೂದನನು ಬೇಗನೆ ತ್ರಿದಿವಕ್ಕೆ ತೆರಳಿದನು. ಹೀಗೆ ಹಿಂದೆ ಉಳುತ್ತಿದ್ದ ರಾಜರ್ಷಿಯು ಶಕ್ರನಿಂದ ಅನುಜ್ಞಾತನಾಗಿ ಪುಣ್ಯ ಪ್ರಾಣಗಳನ್ನು ತೊರೆದನು. ಕುರುಕ್ಷೇತ್ರಕ್ಕೆ ಸಂಬಂಧಿಸಿದಂತೆ ಸ್ವಯಂ ಸುರಾಧಿಪನೇ ಹಾಡಿದ ಈ ಶ್ಲೋಕಗಳಿವೆ!

 “ಗಾಳಿಯಿಂದ ತೂರಿಕೊಂಡೊಯ್ಯಲ್ಪಟ್ಟ ಕುರುಕ್ಷೇತ್ರದ ಧೂಳು ಕೂಡ ದುಷ್ಕರ್ಮಿಗಳಾಗಿದ್ದವರನ್ನು ಪರಮ ಗತಿಗೆ ಕೊಂಡೊಯ್ಯುತ್ತದೆ. ನರಸಿಂಹರಾದ ಬ್ರಾಹ್ಮಣಸತ್ತಮರೂ ಮತ್ತು ನೃಗಾದಿ ನರದೇವಮುಖ್ಯರೂ ಮಹಾವೆಚ್ಚದ ಇಷ್ಟಿ ಕ್ರತುಗಳನ್ನು ಮಾಡಿ ದೇಹಗಳನ್ನು ತೊರೆದು ಸರ್ಗವನ್ನು ಪಡೆದರು. ತರಂತುಕ, ಕಾರಂತುಕ, ರಾಮಹ್ರದ ಮತ್ತು ಮಚಕ್ರುಕಗಳ ಮಧ್ಯದಲ್ಲಿರುವ ಇದೇ ಕುರುಕ್ಷೇತ್ರ ಸಮಂತಪಂಚಕವನ್ನು ಪ್ರಜಾಪತಿಯ ಉತ್ತರವೇದಿ ಎಂದು ಕರೆಯಲ್ಪಡುತ್ತದೆ. ಮಹಾಪುಣ್ಯವೂ ಮಂಗಳಕರವೂ ಆಗಿರುವ ಇದು ಸ್ವರ್ಗದ ಗುಣಗಳನ್ನು ಹೊಂದಿದ್ದು ದಿವೌಕಸರಿಗೆ ಸುಸಮ್ಮತವಾಗಿದೆ. ಆದುದರಿಂದ ಅಲ್ಲಿ ಹತರಾದ ಸರ್ವ ರಾಜರೂ ಮಹಾತ್ಮರ ಗತಿಯನ್ನು ಹೊಂದುತ್ತಾರೆ.”

ಹಿಂದಿನ ಲೇಖನ57 ಸಿವಿಲ್ ನ್ಯಾಯಾಧೀಶರ ನೇರ ನೇಮಕಕ್ಕೆ ಆನ್’ಲೈನ್’ನಲ್ಲಿ ಅರ್ಜಿ ಆಹ್ವಾನಿಸಿದ ಹೈಕೋರ್ಟ್; ಏಪ್ರಿಲ್ 10ರ ಗಡುವು
ಮುಂದಿನ ಲೇಖನಬಿಆರ್’ಟಿ: ಸಫಾರಿಗೆ ಹೋದವರಿಗೆ ಮೂರು ಹುಲಿಗಳ ದರ್ಶನ