ಬೆಂಗಳೂರು: ರಾಜ್ಯದ ರೈತರಿಗೆ ಹಗಲು ವೇಳೆ ಗುಣಮಟ್ಟದ ವಿದ್ಯುತ್ ಪೂರೈಕೆಗೆ ನೂತನ ಉನ್ನತ ಯೋಜನೆಯಾದ ಕುಸುಮ್-ಸಿ ಯೋಜನೆಯನ್ನು ಜೂನ್ 11ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕೃತವಾಗಿ ಲೋಕಾರ್ಪಣೆ ಮಾಡಲಿದ್ದಾರೆ. ಈ ಮಹತ್ವದ ಯೋಜನೆಗೆ ಚಾಲನೆ ನೀಡುವ ಕಾರ್ಯಕ್ರಮ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನ ನೇತಾಜಿ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಪ್ರಕಟಿಸಿದ್ದಾರೆ.
ರೈತರಿಗೆ ನೀರಾವರಿಗೆ ಬೇಕಾದ ಕೃಷಿ ಪಂಪ್ಸೆಟ್ಗಳಿಗೆ ಹಗಲು ವೇಳೆ ವಿದ್ಯುತ್ ಪೂರೈಸುವುದು ಈ ಯೋಜನೆಯ ಮುಖ್ಯ ಉದ್ದೇಶ. ಕೃಷಿ ಫೀಡರ್ಗಳ ಬಳಿ ಸೌರ ವಿದ್ಯುತ್ ಘಟಕಗಳನ್ನು ಸ್ಥಾಪಿಸಿ, ಸ್ಥಳೀಯ ಮಟ್ಟದಲ್ಲೇ ವಿದ್ಯುತ್ ಉತ್ಪಾದಿಸಿ ಪಂಪ್ಸೆಟ್ಗಳಿಗೆ ಪೂರೈಕೆ ಮಾಡಲಾಗುತ್ತದೆ. ಇದರ ಪರಿಣಾಮವಾಗಿ ಟ್ರಾನ್ಸ್ಫಾರ್ಮರ್ಗಳ ಮೇಲಿನ ಒತ್ತಡ ಕಡಿಮೆಯಾಗಲಿದೆ ಮತ್ತು ಶಕ್ತಿಯ ಗುಣಮಟ್ಟ ಸುಧಾರಿತವಾಗಲಿದೆ.
ಈ ಯೋಜನೆಯಡಿಯಲ್ಲಿ ಸ್ಥಾಪಿತವಾಗಿರುವ ಅತಿದೊಡ್ಡ ಘಟಕವು 20 ಮೆಗಾವ್ಯಾಟ್ ಸಾಮರ್ಥ್ಯದದ್ದು, ಇದು ಸುಮಾರು 60 ಎಕರೆ ಖಾಸಗಿ ಜಮೀನಿನಲ್ಲಿ ಸ್ಥಾಪಿಸಲಾಗಿದೆ. ಈ ಜಾಗವನ್ನು 25 ವರ್ಷಗಳ ಕಾಲ ಗುತ್ತಿಗೆಗೆ ಪಡೆಯಲಾಗಿದೆ.
ರಾಜ್ಯದಲ್ಲಿ ಮೊದಲ ಹಂತದಲ್ಲಿ 2,400 ಮೆಗಾವ್ಯಾಟ್ ಸೌರ ವಿದ್ಯುತ್ ಉತ್ಪಾದನೆ ಗುರಿಯಾಗಿದ್ದು, ಸುಮಾರು 6,19,000 ಕೃಷಿ ಪಂಪ್ಸೆಟ್ಗಳಿಗೆ ಹಗಲು ವೇಳೆ ವಿದ್ಯುತ್ ಪೂರೈಕೆ ಕಲ್ಪಿಸಲಾಗುವುದು. ಈಗಾಗಲೇ 200 ಮೆಗಾವ್ಯಾಟ್ ಸಾಮರ್ಥ್ಯದ ಘಟಕಗಳ ನಿರ್ಮಾಣ ಪೂರ್ಣಗೊಂಡಿದ್ದು, ಮುಂದಿನ ತಿಂಗಳುಗಳಲ್ಲಿ 93 ಸ್ಥಳಗಳಲ್ಲಿ 545 ಮೆಗಾವ್ಯಾಟ್ ಘಟಕಗಳು ಕಾರ್ಯಚರಣೆಗೊಳ್ಳಲಿವೆ. 2025ರ ಡಿಸೆಂಬರ್ ಒಳಗಾಗಿ ಪೂರ್ಣ ಗುರಿ ಸಾಧಿಸುವ ಯೋಜನೆ ರೂಪಿಸಲಾಗಿದೆ.
1 ಮೆಗಾವ್ಯಾಟ್ ಸೌರ ವಿದ್ಯುತ್ ಸ್ಥಾಪನೆಗೆ ರೂ. 3.5 ರಿಂದ 4 ಕೋಟಿಯಷ್ಟು ವೆಚ್ಚವಾಗುತ್ತಿದ್ದು, ಕೇಂದ್ರ ಸರ್ಕಾರವು ಪ್ರತಿಯೊಂದು ಘಟಕಕ್ಕೆ ₹1 ಕೋಟಿ ಸಬ್ಸಿಡಿ ನೀಡುತ್ತಿದೆ. ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು ಯೂನಿಟ್ಗೆ ಗರಿಷ್ಠ ₹3.17 ದರ ನಿಗದಿಪಡಿಸಿದೆ.
ಒಂದು ಮೆಗಾವ್ಯಾಟ್ ವಿದ್ಯುತ್ ಘಟಕ ಸ್ಥಾಪನೆಗೆ 4 ಎಕರೆ ಭೂಮಿ ಅಗತ್ಯ. ಸರ್ಕಾರಿ ಭೂಮಿಯನ್ನು ಉಚಿತವಾಗಿ ನೀಡಲಾಗುವುದು, ಆದರೆ ಪ್ರತಿಯೊಂದು ಎಕರೆಗೆ ₹25,000 ಪಾವತಿಸಬೇಕಿದೆ. ಈ ಹಣವನ್ನು ಸ್ಥಳೀಯ ಅಭಿವೃದ್ಧಿಗೆ ಬಳಸಲಾಗುವುದು. ಖಾಸಗಿ ಭೂಮಿ ಬಳಕೆ ಮಾಡಿದರೆ, ಭೂಮಾಲೀಕರಿಗೆ ಪ್ರತಿಎಕರೆಗೆ ಕನಿಷ್ಠ ₹25,000 ಗುತ್ತಿಗೆ ಮೊತ್ತ ನೀಡಬೇಕಾಗುತ್ತದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ರಾಜ್ಯ ಸಚಿವ ಶ್ರೀಪಾದ್ ನಾಯಕ್, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರುಗಳಾದ ಕೃಷ್ಣ ಬೈರೇಗೌಡ, ಡಾ. ಎಂ.ಸಿ. ಸುಧಾಕರ್ ಹಾಗೂ ಇಂಧನ ಇಲಾಖೆಯ ಉನ್ನತ ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.














