ಮನೆ ಕಾನೂನು ಲಖಿಂಪುರ ಖೇರಿ ಪ್ರಕರಣ: ಆರೋಪಿ ಆಶೀಶ್ ಮಿಶ್ರಾಗೆ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು

ಲಖಿಂಪುರ ಖೇರಿ ಪ್ರಕರಣ: ಆರೋಪಿ ಆಶೀಶ್ ಮಿಶ್ರಾಗೆ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು

0

ನವದೆಹಲಿ: ಲಖಿಂಪುರ –ಖೇರಿ ಪ್ರಕರಣದ ಪ್ರಮುಖ ಆರೋಪಿ ಆಶಿಶ್ ಮಿಶ್ರಾಗೆ ಎಂಟು ವಾರಗಳ ಮಧ್ಯಂತರ ಜಾಮೀನು ನೀಡಿ ಸುಪ್ರೀಂ ಕೋರ್ಟ್ ಬುಧವಾರ ಆದೇಶ ಹೊರಡಿಸಿದೆ.

ದೆಹಲಿ, ಉತ್ತರ ಪ್ರದೇಶದಲ್ಲಿ ಉಳಿಯಬಾರದು ಮತ್ತು ಜಾಮೀನಿನ ಮೇಲೆ ಬಿಡುಗಡೆಯಾದ ಒಂದು ವಾರದೊಳಗೆ ಉತ್ತರ ಪ್ರದೇಶವನ್ನು ತೊರೆಯುವಂತೆ ಮಿಶ್ರಾಗೆ ಸುಪ್ರೀಂ ಕೋರ್ಟ್ ಷರತ್ತು ವಿಧಿಸಿದೆ.

 ಅಲ್ಲದೆ ತನ್ನ ಪಾಸ್’ಪೋರ್ಟ್ ಅನ್ನು ಒಪ್ಪಿಸಬೇಕು ಹಾಗೂ  ನ್ಯಾಯಾಲಯದ ವಿಚಾರಣೆಗೆ ಹಾಜರಾಗಲು ಮಾತ್ರ ಉತ್ತರಪ್ರದೇಶ ರಾಜ್ಯವನ್ನು ಪ್ರವೇಶಿಸಬಹುದು. ಸಾಕ್ಷಿಗಳ ಮೇಲೆ ಪ್ರಭಾವ ಬೀರಲು ಮಿಶ್ರಾ ಅವರ ಕುಟುಂಬದ ಸದಸ್ಯರು ಮಾಡುವ ಯಾವುದೇ ಪ್ರಯತ್ನವು ಜಾಮೀನು ರದ್ದತಿಗೆ ಕಾರಣವಾಗುತ್ತದೆ ಎಂದು ಸುಪ್ರೀಕೋರ್ಟ್ ತಿಳಿಸಿದೆ.

ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಹಾಗೂ  ಜೆ.ಕೆ. ಮಹೇಶ್ವರಿ ಅವರನ್ನೊಳಗೊಂಡ ಪೀಠವು ಮಿಶ್ರಾ ಸಲ್ಲಿಸಿದ ಖಾಯಂ ಜಾಮೀನು ಅರ್ಜಿಯನ್ನು ಬಾಕಿ ಇರಿಸಲು ನಿರ್ಧರಿಸಿತು ಹಾಗೂ  ಮಿಶ್ರಾಗೆ  ಮಧ್ಯಂತರ ಜಾಮೀನು ನೀಡಿತು.

ಲಖಿಂಪುರ– ಖೇರಿ ಪ್ರಕರಣಕ್ಕೆ ಸಂಬಂಧಿಸಿ ಕೇಂದ್ರ ಸಚಿವ ಅಜಯ್‌ ಮಿಶ್ರಾ ಅವರ ಮಗ ಆಶಿಶ್‌ ಮಿಶ್ರಾ ಮತ್ತು ಇತರ 12 ಮಂದಿಯ ವಿರುದ್ಧ ಲಖನೌ ಜಿಲ್ಲಾ ನ್ಯಾಯಾಲಯ ದೋಷಾರೋಪ ಹೊರಿಸಿದೆ.

ಪ್ರಕರಣದ ಪ್ರಮುಖ ಆರೋಪಿ ಆಶಿಶ್‌ ಮಿಶ್ರಾ ಮತ್ತು ಉಳಿದ ಆರೋಪಿಗಳ ವಿರುದ್ಧ 302 (ಕೊಲೆ), 120 ಬಿ (ಕ್ರಿಮಿನಲ್‌ ಪಿತೂರಿ) ಸೇರಿದಂತೆ ಭಾರತೀಯ ದಂಡ ಸಂಹಿತೆಯ ವಿವಿಧ ಕಲಂಗಳಡಿ ಆರೋಪ ಹೊರಿಸಲಾಗಿದೆ.

ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಕೃಷಿ ಕಾಯ್ದೆ ರದ್ದಿಗೆ ಆಗ್ರಹಿಸಿ ಪ್ರತಿಭಟಿಸುತ್ತಿದ್ದವರ ಮೇಲೆ 2021ರ ಅಕ್ಟೋಬರ್‌ನಲ್ಲಿ ಕಾರು ಹರಿಸಿ ನಾಲ್ವರು ರೈತರು ಸೇರಿ ಒಟ್ಟು 8 ಮಂದಿಯನ್ನು ಹತ್ಯೆ ಮಾಡಿದ ಎಂಬ ಆರೋಪ ಆಶಿಶ್‌ ಮೇಲಿದೆ. ಪ್ರಕರಣ ಸಂಬಂಧ ಫೆಬ್ರುವರಿಯಲ್ಲಿ ಲಖನೌ ಪೀಠದ ಅಲಹಾಬಾದ್‌ ಹೈಕೋರ್ಟ್‌ ಅವರಿಗೆ ಜಾಮೀನು ಮಂಜೂರು ಮಾಡಿತ್ತು.