ಮನೆ ಕಾನೂನು ಲಖಿಂಪುರ್ ಖೇರಿ ಹಿಂಸಾಚಾರ: ವಿಚಾರಣೆಗೆ 5 ವರ್ಷ ಹಿಡಿಯಲಿದೆ ಎಂದು ವರದಿ, ನಿತ್ಯ ವಿಚಾರಣೆ ಕೋರಿದ...

ಲಖಿಂಪುರ್ ಖೇರಿ ಹಿಂಸಾಚಾರ: ವಿಚಾರಣೆಗೆ 5 ವರ್ಷ ಹಿಡಿಯಲಿದೆ ಎಂದು ವರದಿ, ನಿತ್ಯ ವಿಚಾರಣೆ ಕೋರಿದ ದೂರುದಾರರು

0

ಕೃಷಿ ಕಾಯಿದೆಗಳನ್ನು ರದ್ದುಪಡಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತರು ಸೇರಿದಂತೆ ಎಂಟು ಜನರ ಮೇಲೆ ವಾಹನ ಹರಿಸಿ ಅವರ ಸಾವಿಗೆ ಕಾರಣವಾಗಿದ್ದ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಟೇನಿ ಅವರ ಪುತ್ರ ಆಶಿಶ್ ಮಿಶ್ರಾ ಭಾಗಿಯಾಗಿದ್ದರು ಎನ್ನಲಾದ ಲಖಿಂಪುರ್ ಖೇರಿ ಪ್ರಕರಣದ ಸ್ಥಿತಿಗತಿ ವರದಿ ಗಮನಿಸಿದರೆ ಪ್ರಕರಣದ ವಿಚಾರಣೆ ಪೂರ್ಣಗೊಳ್ಳಲು ಐದು ವರ್ಷ ಹಿಡಿಯಬಹುದು ಎಂದು ಸುಪ್ರೀಂ ಕೋರ್ಟ್ ಬುಧವಾರ ಹೇಳಿದೆ.

ಸ್ಥಿತಿಗತಿ ವರದಿ ಪ್ರಕಾರ 200ಕ್ಕೂ ಹೆಚ್ಚು ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಬೇಕಿದ್ದು ವಿಚಾರಣೆ ಪೂರ್ಣಗೊಳ್ಳಲು ಕನಿಷ್ಠ 5 ವರ್ಷ ಬೇಕಾಗುತ್ತದೆ ಎಂದು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ವಿ ರಾಮಸುಬ್ರಮಣಿಯನ್ ಅವರಿದ್ದ ಪೀಠ ಮೌಖಿಕವಾಗಿ ತಿಳಿಸಿತು.

ವಿಚಾರಣೆ ಮುಕ್ತಾಯಗೊಳಿಸಲು ಇನ್ನು ಎಷ್ಟು ಸಮಯ ಬೇಕಾಗುತ್ತದೆ ಎಂದು ಲಖಿಂಪುರ್ ಖೇರಿಯಲ್ಲಿರುವ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದಿಂದ ಮಾಹಿತಿ ಪಡೆಯುವಂತೆ ಸುಪ್ರೀಂ ಕೋರ್ಟ್ ಕಳೆದ ತಿಂಗಳು ತನ್ನ ರಿಜಿಸ್ಟ್ರಾರ್’ಗೆ ಸೂಚಿಸಿತ್ತು. ಸುಮಿತ್ ಜೈಸ್ವಾಲ್ ಎಂಬುವವರು ಸಲ್ಲಿಸಿರುವ ದೂರಿನ ವಿಚಾರಣೆ, ಈ ಸಂಬಂಧ ನಡೆಯುತ್ತಿರುವ ತನಿಖೆ, ವಿಚಾರಣೆಯ ಪ್ರಗತಿ ಬಗ್ಗೆ ವಿವರ ನೀಡುವ ಹೆಚ್ಚುವರಿ ಅಫಿಡವಿಟ್ ಸಲ್ಲಿಸುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ನ್ಯಾಯಾಲಯ ಆದೇಶಿಸಿತ್ತು.

“ದೂರುದಾರರಿಗೆ ಬೆದರಿಕೆ ಒಡ್ಡಲಾಗುತ್ತಿದ್ದು ಅವರನ್ನು ಥಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರಕರಣದ ವಿಚಾರಣೆಯನ್ನು ದಿನ ನಿತ್ಯದ ಆಧಾರದಲ್ಲಿ ನಡೆಸಬೇಕು. ಸಚಿವರು (ಅಜಯ್ ಮಿಶ್ರಾ ಟೇನಿ) ಪಾಠ ಕಲಿಸುವುದಾಗಿ ಹೇಳಿದ್ದಾರೆ” ಎಂದು ಇಂದು ನಡೆದ ವಿಚಾರಣೆ ವೇಳೆ ವಕೀಲ ಪ್ರಶಾಂತ್ ಭೂಷಣ್ ನ್ಯಾಯಾಲಯವನ್ನು ಕೋರಿದರು.

“ಅದು ನಮಗೆ ತಿಳಿದಿದೆ ಎಂದು ಫೀಠ ಹೇಳಿದಾಗ ಮೂರು ಜನರ ಮೇಲೆ ಬರ್ಬರವಾಗಿ ದಾಳಿ ಮಾಡಲಾಗಿದೆ” ಎಂದು ಭೂಷಣ್ ಪ್ರತಿಕ್ರಿಯಿಸಿದರು. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಹಿರಿಯ ನ್ಯಾಯವಾದಿ ಮುಕುಲ್ ರೋಹಟ್ಗಿ  ಆರೋಪ ಸಂಪೂರ್ಣ ಸುಳ್ಳು ಎಂದರು. ಅಲ್ಲದೆ ಪ್ರತಿ ನಿತ್ಯ ವಿಚಾರಣೆ ನಡೆಸುವುದಕ್ಕೂ ವಿರೋಧ ವ್ಯಕ್ತಪಡಿಸಿದರು.

ಆದರೆ ʼಇದಕ್ಕೆ ಸಂಬಂಧಿಸಿದ ಎಫ್ಐಆರ್ಗಳಿವೆ ಎಂದು ಸುಪ್ರೀಂ ಕೋರ್ಟ್ ಹೇಳಿತು . ಸರ್ಕಾರ ಶಾಮೀಲಾಗಿದ. ಆದ್ದರಿಂದಲೇ ಎಸ್ಐಟಿ ರಚಿಸಲಾಗಿದೆ ಎಂದು ಭೂಷಣ್ ಪ್ರತಿಪಾದಿಸಿದರು. ಉತ್ತರ ಪ್ರದೇಶ ಸರ್ಕಾರದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಗರಿಮಾ ಪ್ರಸಾದ್ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.

ನ್ಯಾಯಾಲಯ “ನಿತ್ಯದ ಆಧಾರದಲ್ಲಿ ವಿಚಾರಣೆ ನಡೆಸುವುದರಿಂದ ಪ್ರಾಸಿಕ್ಯೂಷನ್’ನ ಪ್ರಕರಣಕ್ಕೆ ತೀವ್ರ ಧಕ್ಕೆಯಾಗಬಹುದು” ಎಂದಿತು. ಆದರೆ ನಿತ್ಯದ ವಿಚಾರಣೆ ನಡೆಸುವಂತೆ ಭೂಷಣ್ ಪಟ್ಟು ಹಿಡಿದರು.

ಪ್ರಕರಣದ ಸಹ-ಆರೋಪಿಗಳು ಇನ್ನೂ ಬಂಧನದಲ್ಲಿದ್ದಾರೆಯೇ ಎಂದು ಖಚಿತಪಡಿಸಲು ಎಎಜಿಗೆ ನಿರ್ದೇಶಿಸಿದ ನಂತರ ನ್ಯಾಯಾಲಯ ಜಾಮೀನು ಅರ್ಜಿಯನ್ನು ಜನವರಿ 19ರಂದು ವಿಚಾರಣೆಗೆ ಪಟ್ಟಿ ಮಾಡಿತು. ಇಂದಿನ ವಿಚಾರಣೆಯ ಸಂದರ್ಭದಲ್ಲಿ, ಈ ಪ್ರಕರಣದ ವಿಚಾರಣೆಯನ್ನು ಜನವರಿ 13ರಂದು ವಿಚಾರಣೆಗೆ ಪಟ್ಟಿ ಮಾಡಲಾಗಿದೆ ಎಂದು ಸುಪ್ರೀಂ ಕೋರ್ಟ್’ಗೆ ತಿಳಿಸಲಾಯಿತು.

ಹಿಂದಿನ ಲೇಖನಐಸಿಸಿ ಏಕದಿನ ರ್ಯಾಂಕಿಂಗ್: ವಿರಾಟ್ ಕೊಹ್ಲಿ, ರೋಹಿತ್ ಶರ್ಮಾಗೆ ಶ್ರೇಯಾಂಕದಲ್ಲಿ ಉನ್ನತಿ
ಮುಂದಿನ ಲೇಖನಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿಗೆ NAAC ನಿಂದ ಬಿ++ ಗ್ರೇಡ್