ಅಥಣಿ: ಅಥಣಿ ಬಿಜೆಪಿ ಟಿಕೆಟ್ ಕೈ ತಪ್ಪಿದ್ದಕ್ಕೆ ಮುನಿಸಿಕೊಂಡಿರುವ ವಿಧಾನ ಪರಿಷತ್ ಸದಸ್ಯ ಲಕ್ಷ್ಮಣ ಸವದಿ, ಬಿಜೆಪಿ ಪ್ರಾಥಮಿಕ ಸದಸ್ಯತ್ವ ಹಾಗೂ ವಿಧಾನ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ತಿಳಿಸಿದ್ದಾರೆ,.
ಅಥಣಿಯಲ್ಲಿ ನಡೆದ ಸುದ್ದಿಘೋಷ್ಠಿಯಲ್ಲಿ ಮಾತನಾಡಿದ ಅವರು, ಗುರುವಾರ ಸಂಜೆಗೆ ಮುರುಘೇಂದ್ರ ಶಿವಯೋಗಿಗಳ ಮಠದಲ್ಲಿ ಸಭೆ ಕರೆದಿದ್ದೇನೆ. ನನ್ನ ಜನರಿಂದ ಮಾರ್ಗದರ್ಶನ ಪಡೆದು ಮುಂದಿನ ಹೆಜ್ಜೆ ಇಡುತ್ತೇನೆ ಎಂದರು.
ನಾನು ಅಥಣಿ ಕ್ಷೇತ್ರದ ಮತದಾರರನ್ನು ನಂಬಿದವನು. ಪಕ್ಷ ನನಗೆ ಟಿಕೆಟ್ ನೀಡುವ ಭರವಸೆ ನೀಡಿತ್ತು. ಆದರೆ ನನಗೆ ಟಿಕೆಟ್ ನೀಡದೆ ಹೈಕಮಾಂಡ್ ದ್ರೋಹ ಮಾಡಿದೆ ಎಂದು ಹೇಳಿಕೆ ನೀಡಿದ್ದಾರೆ.
ಬಿಜೆಪಿಯಲ್ಲಿ ಮಾನವಂತರು, ನಿಷ್ಠಾವಂತರು, ಪಕ್ಷವನ್ನು ಅಧಿಕಾರಕ್ಕೆ ತರಲು ಹಂಬಲಿಸುವವರನ್ನು ದೂರ ಮಾಡುವ ಕೆಲಸ ನಡೆದಿದೆ. ಅವರಿಗೆ ಏನೋ ದೂರದೃಷ್ಟಿ ಇರಬಹುದು. ಅನೇಕರು ಹೊರಗಡೆಯಿಂದ ಬಂದವರಿದ್ದಾರೆ. ಅವರಿಗೆ ಭಗವಂತ ಒಳ್ಳೆಯದನ್ನು ಮಾಡಲಿ. ಆಯಸ್ಸು, ಆರೋಗ್ಯ, ಅಂತಸ್ತು, ನೆಮ್ಮದಿಯ ಜೀವನ ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸವದಿ ಹೇಳಿದರು.
ಕಾಗವಾಡ ಕಾಂಗ್ರೆಸ್ ಅಭ್ಯರ್ಥಿ, ರಾಜು ಕಾಗೆ ಅವರು ಅಥಣಿಯಲ್ಲಿರುವ ಲಕ್ಷ್ಮಣ ಸವದಿ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದರು. ರಾಜು ಕಾಗೆ -ಸವದಿ ಹಳೆಯ ಸ್ನೇಹಿತರು. ಸವದಿ ಕಾಂಗ್ರೆಸ್ ಸೇರ್ಪಡೆ ಆಗುತ್ತಾರಾ ಎಂಬ ಚರ್ಚೆ ಜೋರಾಗಿದೆ.