ಮನೆ ಸುದ್ದಿ ಜಾಲ ಮೈಸೂರಿನ 49 ಕೆರೆಗಳಿಗೆ ಲಕ್ಷ್ಮಣ ತೀರ್ಥ ನೀರು: ರಾಜ್ಯ ಸಚಿವ ಸಂಪುಟ ಅನುಮೋದನೆ

ಮೈಸೂರಿನ 49 ಕೆರೆಗಳಿಗೆ ಲಕ್ಷ್ಮಣ ತೀರ್ಥ ನೀರು: ರಾಜ್ಯ ಸಚಿವ ಸಂಪುಟ ಅನುಮೋದನೆ

0

ಮೈಸೂರು: ಲಕ್ಷ್ಮಣತೀರ್ಥ ನದಿಯಿಂದ ಹುಣಸೂರು ಹಾಗೂ ಎಚ್‌.ಡಿ.ಕೋಟೆ ತಾಲ್ಲೂಕಿನ 49 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ.

ಹುಣಸೂರು ತಾಲ್ಲೂಕಿನ ಮರದೂರಿನಿಂದ ನೀರು ಪೂರೈಸುವ ಈ ಯೋಜನೆಯ ಕ್ರಿಯಾ ಯೋಜನೆ (ಡಿಪಿಆರ್) ಅನ್ನು ಜಲ ಸಂಪನ್ಮೂಲ ಇಲಾಖೆಯು ತಯಾರಿಸಿತ್ತು. ಅದನ್ನು 2023ರ ಜ.9ರಂದು ನಡೆದ ಕಾವೇರಿ ನೀರಾವರಿ ನಿಗಮದ 79ನೇ ಮಂಡಳಿ ಸಭೆಯು ಅನುಮೋದಿಸಿತ್ತು. ಯೋಜನೆಗೆ ಸರ್ಕಾರವು ಮಾರ್ಚ್‌ 27ರಂದು ಅನುಮೋದನೆ ನೀಡಿ ಆದೇಶ ಹೊರಡಿಸಿದೆ ಎಂದು ಸಂಸದ ಪ್ರತಾಪ ಸಿಂಹ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಳೆಗಾಲದ 3 ತಿಂಗಳು ಮರದೂರಿನಲ್ಲಿ ಏತ ನೀರಾವರಿ ಮೂಲಕ ನೀರನ್ನು ಎತ್ತಿ 5.32 ಕಿ.ಮೀ ಉದ್ದದ ಪೈಪ್‌ ಮೂಲಕ 0.235 ಟಿಎಂಸಿ ನೀರನ್ನು ದೊಡ್ಡೇಗೌಡನಕೊಪ್ಪಲಿ ಗ್ರಾಮದಲ್ಲಿ ಜಲಸಂಗ್ರಹಗಾರಕ್ಕೆ ಪೂರೈಸಲಾಗುವುದು. ಅಲ್ಲಿಂದ 1.5 ಕಿ.ಮೀ ಉದ್ದ ಎಡ ಹಾಗೂ 14.7 ಗುರುತ್ವಾಕರ್ಷಣೆ ಬಲಭಾಗದಲ್ಲಿ ಪೈಪ್‌ಲೇನ್‌ ಮೂಲಕ 49 ಕೆರೆಗಳಿಗೆ ನೀರು ಪೂರೈಸಲಾಗುತ್ತಿದೆ ಎಂದು ಹೇಳಿದ್ದಾರೆ

ಹುಣಸೂರಿನ ರಾಯನಹಳ್ಳಿ, ಜಡಗನಹಳ್ಳಿ, ಬನ್ನಕುಪ್ಪೆ, ಹೊಸೂರು, ಮಾದಳ್ಳಿಮಠ, ಹೊಸಪುರ, ನಾಡಪ್ಪನಹಳ್ಳಿ, ದ್ಯಾತನಕೆರೆ ಕಾವಲ್, ಹಳೇಪುರ, ತಿಪ್ಪೂರು, ಗಾಗೇನಹಳ್ಳಿ, ಈರನದಾಸಿಕೊಪ್ಪಲು, ನಂಜಮ್ಮನಕೊಪ್ಪಲು, ಚಾಲಹಳ್ಳಿ, ಬೆಂಕಿ‍ಪುರ, ಅಣ್ಣರಾಯನಪುರ, ಹಳ್ಳಿಕೆರೆ, ಗೋಹಳ್ಳಿ, ಒಡೆಯರ ಹೊಸಹಳ್ಳಿ, ಶಂಖಹಳ್ಳಿ, ಹರದನಹಳ್ಳಿ, ಅಸ್ವಾಳು, ಎಚ್‌.ಡಿ.ಕೋಟೆ ತಾಲ್ಲೂಕಿನ ಕೊತ್ತೇಗಾಲ, ತೋಟದಹಳ್ಳಿಯ ಕೆರೆ–ಕಟ್ಟೆಗಳು ಜಲಸಮೃದ್ಧಿಯಾಗಲಿವೆ ಎಂದು ಮಾಹಿತಿ ನೀಡಿದ್ದಾರೆ.