ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್ ವಿರುದ್ಧ ಕೇಳಿ ಬಂದಿರುವ ಆರೋಪಗಳ ಬಗ್ಗೆ ವಿಚಾರಣೆ ನಡೆಸಿ ಪ್ರತಿ ವಿಷಯಕ್ಕೂ ನಮಗೆ ಮಾಹಿತಿ ನೀಡಿ ಎಂದು ವಿಶ್ವವಿದ್ಯಾಲಯಗಳ ಧನಸಹಾಯ ಆಯೋಗ ರಾಜ್ಯ ಸರಕಾರಕ್ಕೆ ಪತ್ರ ಬರೆದಿದೆ.
ಅವಶ್ಯಕತೆ ಇಲ್ಲದೆ ಇದ್ದರೂ ಕರಾಮುವಿವಿ ನೇಮಕಾತಿಗಳನ್ನು ಹೆಚ್ಚು ಮಾಡುತ್ತಿದೆ. ಪ್ರಾದೇಶಿಕ ಕೇಂದ್ರಗಳನ್ನು (ರೀಜನಲ್ ಸೆಂಟರ್) ಹೆಚ್ಚು ಸ್ಥಾಪನೆ ಮಾಡುತ್ತಿದೆ. ದೂರ ಶಿಕ್ಷಣವನ್ನು ಕರೆಸ್ಪಾಂಡೆಂಟ್ ಶಿಕ್ಷಣವನ್ನಾಗಿ ಮಾರ್ಪಡಿಸಲಾಗುತ್ತಿದೆ. ಯುಜಿಸಿ ನಿಯಮಗಳಿಗೆ ವಿರುದ್ಧವಾಗಿ ಆಡಳಿತ ಹಾಗೂ ಕೋರ್ಸ್‌ಗಳು ನಡೆಯುತ್ತಿದೆ ಎಂದು ವಿಶ್ರಾಂತಕುಲಪತಿ ಪ್ರೊ. ಎನ್.ಎಸ್.ರಾಮೇಗೌಡ ಅವರು ಆರೋಪಿಸಿದ್ದರು.
ಜೊತೆಗೆ ಈ ಸಂಬಂದ ಯುಜಿಸಿಗೆ ಸುದೀರ್ಘವಾದ ಪತ್ರವನ್ನೂ ಬರೆದು ಕ್ರಮ ವಹಿಸುವಂತೆ ಮನವಿ ಮಾಡಿದ್ದರು. ಈ ಪತ್ರವನ್ನು ಗಂಭೀರವಾಗಿ ಪರಿಗಣಿಸಿರುವ ಯುಜಿಸಿ ರಾಜ್ಯ ಸರಕಾರಕ್ಕೆ ಪತ್ರ ಬರೆದು ಶೀಘ್ರ ವಿಚಾರಣೆ ನಡೆಸುವಂತೆ ನಿರ್ದೇಶನ ನೀಡಿದೆ. ಜೊತೆಗೆ ಈ ಪತ್ರವನ್ನು ರಾಮೇಗೌಡ ಅವರಿಗೂ ಕಳುಹಿಸಿದೆ.
ಕರಾಮುವಿವಿ ಘನತೆ ಕುಂದಲು ನಾನು ಬಿಡುವುದಿಲ್ಲ. ವಿವಿಯಲ್ಲಿ ಅಕ್ರಮ ನೇಮಕಾತಿ ಹಾಗೂ ಅನಗತ್ಯ ಪ್ರಾದೇಶಿಕ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗುತ್ತಿದೆ. ಹಾಗಾಗಿ ಯುಜಿಸಿಗೆ ಪತ್ರ ಬರೆದಿದ್ದೆ. ಯುಜಿಸಿ ಸಕಾರಾತ್ಮಕ ಸ್ಪಂದಿಸಿ ರಾಜ್ಯ ಸರಕಾರಕ್ಕೆ ಪತ್ರ ಬರೆದು ವಿಚಾರಣೆ ನಡೆಸಲು ಸೂಚಿಸಿದೆ. ಸರಕಾರ ಏನಾದರೂ ವಿಚಾರಣೆ ವೇಳೆ ಮಾಹಿತಿ ಕೇಳಿದರೆ ಸಮಗ್ರ ದಾಖಲೆಯೊಂದಿಗೆ ಮಾಹಿತಿ ನೀಡುವೆ ಎಂದು ವಿಶ್ರಾಂತ ಕುಲಪತಿ ಪ್ರೊ.ಎನ್.ಎಸ್.ರಾಮೇಗೌಡ ತಿಳಿಸಿದ್ದಾರೆ.