ಬಾಗಲಕೋಟೆ(Bagalkote): ಕೇಂದ್ರ ಸರಕಾರದ ಉತ್ತಮ ಯೋಜನೆಯಾದ ‘ಲಕ್ಷ್ಯ’ ಕಾರ್ಯಕ್ರಮವನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಲ್ಲಿ ಶ್ರಮಿಸಿದ ಜಿಲ್ಲಾ ಸರಕಾರಿ ಆಸ್ಪತ್ರೆಯು ರಾಷ್ಟ್ರ ಮಟ್ಟದ ಲಕ್ಷ್ಯ ಪ್ರಶಸ್ತಿಗೆ ಭಾಜನವಾಗಿದೆ ಎಂದು ಬಾಗಲಕೋಟೆ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ ತಿಳಿಸಿದ್ದಾರೆ.
ಹೆರಿಗೆ ಹಾಗೂ ಶಸ್ತ್ರಚಿಕಿತ್ಸಾ ವಿಭಾಗದಲ್ಲಿ ತಾಯಿ ಹಾಗೂ ಶಿಶು ಮರಣ ಕಡಿಮೆಗೊಳಿಸುವಲ್ಲಿ ಉತ್ತಮ ಕಾರ್ಯನಿರ್ವಹಣೆ ಹಿನ್ನಲೆಯಲ್ಲಿ ರಾಷ್ಟ್ರ ಮಟ್ಟದಲ್ಲಿ ದೆಹಲಿ ಹಾಗೂ ಮಧ್ಯಪ್ರದೇಶದ ನುರಿತ ತಜ್ಞರ ಸಮಿತಿ ತಂಡವು ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಕೂಲಂಕುಶವಾಗಿ ಪರಿಶೀಲನೆ ನಡೆಸಿತ್ತು. ನಂತರ ತಂಡ ಒದಗಿಸಿದ ವರದಿಯನ್ವಯ ರಾಷ್ಟ್ರೀಯ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯು ಅಧಿಕೃತವಾಗಿ ಪ್ರಶಸ್ತಿಯನ್ನು ಘೋಷಿಸಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದ್ದಾರೆ.
ಶೀಘ್ರದಲ್ಲಿಯೇ ದೆಹಲಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಜಿಲ್ಲಾ ಶಸ್ತ್ರ ಚಿಕಿತ್ಸಕರು ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ.
ಪ್ರತಿ ವರ್ಷ 3 ಲಕ್ಷ ಅನುದಾನ; ಜಿಲ್ಲಾ ಆಸ್ಪತ್ರೆಗೆ ಲಕ್ಷ್ಯ ಪ್ರಶಸ್ತಿ ಲಭಿಸಿದ ಹಿನ್ನಲೆಯಲ್ಲಿ ಹೆರಿಗೆ ಹಾಗೂ ಶಸ್ತ್ರಚಿಕಿತ್ಸೆಯ ವಿಭಾಗಕ್ಕೆ ಪ್ರತಿ ವರ್ಷ 3 ಲಕ್ಷ ರೂ.ಗಳಂತೆ ಮೂರು ವರ್ಷಗಳ ಕಾಲ ವಿಶೇಷ ಅನುದಾನ ದೊರೆಯಲಿದೆ. ಆ ಅನುದಾನದಲ್ಲಿ ಶೇ.25 ರಷ್ಟು ಲಕ್ಷ್ಯ ಪ್ರಶಸ್ತಿಗೆ ಸಂಬಂಧಿಸಿದ ಗುಣಮಟ್ಟ ಕಾಯ್ದಿರಿಸುವಲ್ಲಿ ಶ್ರಮಿಸಿದ ವೈದ್ಯರು ಹಾಗೂ ಸಿಬ್ಬಂದಿಗಳಿಗೆ ಹಂಚಿಕೆ ಮಾಡಲಾಗುತ್ತದೆ. ಉಳಿದ ಶೇ.75 ರಷ್ಟು ಅನುದಾನವನ್ನು ಆಯಾ ವಿಭಾಗದ ಅಭಿವೃದ್ದಿ ಕಾರ್ಯಗಳಿಗೆ ಬಳಕೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಆಸ್ಪತ್ರೆಯನ್ನು ಅತ್ಯಾಧುನಿಕ ಉಪಕರಣಗಳನ್ನು ಅಳವಡಿಸುವ ಮೂಲಕ ಮೇಲ್ದರ್ಜೆಗೆ ಏರಿಸಲಾಗಿದೆ. ಪ್ರತಿ ದಿನ 700 ದಿಂದ 800 ವರೆಗೆ ರೋಗಿಗಳಿಗೆ ತಪಾಸಣೆ ನಡೆಸಿ ಚಿಕಿತ್ಸೆ ನೀಡಲಾಗುತ್ತಿದೆ. ಡಾ.ಪ್ರಕಾಶ ಬಿರಾದಾರ ನೇತೃತ್ವದಲ್ಲಿ 32 ವಿಭಾಗಗಲ್ಲಿ ಆಸ್ಪತ್ರೆಯು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅದರಲ್ಲಿ ಹೆರಿಗೆ, ಸರ್ಜರಿ ಹಾಗೂ ಮೆಡಿಸಿನ್ ವಿಭಾಗ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಪ್ರಕಾಶ ಬಿರಾದಾರ ತಿಳಿಸಿದ್ದಾರೆ.