ಮೈಸೂರು: ನಿವೇಶನ ಒತ್ತುವರಿ ಪ್ರಕರಣ ಎದುರಿಸುತ್ತಿರುವ ಪ್ರೊ.ಎನ್.ಕೆ.ಲೋಕನಾಥ್ ಅವರನ್ನು ಮೈಸೂರು ವಿಶ್ವವಿದ್ಯಾಲಯದ ಕುಲಪತಿಯನ್ನಾಗಿ ನೇಮಕ ಮಾಡಿರುವ ನಿರ್ಧಾರ ವಿವಾದಕ್ಕೆ ಆಸ್ಪದ ನೀಡಿದೆ.
ನಿವೇಶನ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಜಯಲಕ್ಷ್ಮಿಪುರಂನ ಡಿ.ವಿ.ಶಶಿಧರ ಎಂಬುವರು ಲೋಕನಾಥ್ (5ನೇ ಆರೋಪಿ) ಸೇರಿದಂತೆ 13 ಮಂದಿ ವಿರುದ್ಧ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ 2020ರ ನ.4ರಂದು ದೂರು ನೀಡಿದ್ದರು. ಇದಕ್ಕೆ ಸಂಬಂಧಿಸಿ ಪ್ರಕರಣ ದಾಖಲಾಗಿದೆ.
ಆಯಿಷ್ ಬಡಾವಣೆಯ 2ನೇ ಹಂತದಲ್ಲಿ 30×50 ನಿವೇಶನವನ್ನು ₹70 ಸಾವಿರ ನೀಡಿ 2003ರ ಸೆ.9ರಂದು ಹಕ್ಕುಪತ್ರ ಹಾಗೂ ಅದೇ ವರ್ಷ ನ.5ರಂದು ಸ್ವಾಧೀನ ಪತ್ರ ಪಡೆದಿದ್ದೆ. ಕಂದಾಯವನ್ನು ಪಾವತಿಸಿದ್ದೇನೆ. ಆದರೆ, ದೆಹಲಿಯಲ್ಲಿ ಇದ್ದುದರಿಂದ ನಿವೇಶನದ ಬಗ್ಗೆ ಗಮನ ಹರಿಸಿರಲಿಲ್ಲ. ಮರಳಿ ಬಂದು ನೋಡಿದಾಗ ಒತ್ತುವರಿಯಾಗಿತ್ತು. ಬಡಾವಣೆಯ ನಿವೇಶನ ಸಂಖ್ಯೆ ಎ2–8ರಿಂದ 20ರವರೆಗಿನ ಮಾಲೀಕರು ಸಂಚು ಮಾಡಿ ಒತ್ತುವರಿ ಮಾಡಿದ್ದಾರೆ ಎಂದು ಶಶಿಧರ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
13 ಮಂದಿ ನನ್ನ ಸ್ವತ್ತನ್ನು ತಮ್ಮ ಹೆಸರಿಗೆ ಮಾಡಿಕೊಂಡಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ವಹಿಸಬೇಕು ಎಂದು ಹೇಳಿದ್ದಾರೆ.
ಅರ್ಹರಲ್ಲ: ಕುಲಪತಿ ಹುದ್ದೆಗಾಗಿ ಅರ್ಜಿ ಸಲ್ಲಿಸಿದವರ ಪಟ್ಟಿಯನ್ನು ಉನ್ನತ ಶಿಕ್ಷಣ ಇಲಾಖೆಯು 2022ರ ನವೆಂಬರ್ ಅಂತ್ಯದಲ್ಲಿ ಬಿಡುಗಡೆ ಮಾಡಿದ್ದು, ಲೋಕನಾಥ್ ಅವರ ಹೆಸರಿನ ಮುಂದೆ– ಅವರ ಪ್ರಕರಣ ದಾಖಲಾಗಿದ್ದು, ಯುಜಿಸಿ ನಿಯಮಾವಳಿ ಪ್ರಕಾರ ಹುದ್ದೆಗೆ ಅರ್ಹರಲ್ಲ ಎಂದು ಷರಾ ಕೂಡ ಬರೆದಿತ್ತು.
ಉನ್ನತ ಶಿಕ್ಷಣ ಇಲಾಖೆಯು ನ.8ರಂದು ಹೊರಡಿಸಿದ್ದ ಅಧಿಸೂಚನೆಯಲ್ಲಿ ಕುಲಪತಿ ಹುದ್ದೆಗೆ 20 ದಿನದ ಒಳಗಾಗಿ ಅರ್ಜಿ ಸಲ್ಲಿಸಬೇಕು ಎಂದು ಹೇಳಿತ್ತು. ಯಾವುದೇ ತನಿಖೆಯನ್ನು ಎದುರಿಸುತ್ತಿರುವ ಸೇವಾನಿರತರು ಅರ್ಜಿ ಸಲ್ಲಿಸುವಂತಿಲ್ಲ ಎಂದು ಅಧಿಸೂಚನೆಯಲ್ಲಿ ಹೇಳಲಾಗಿತ್ತು. ಆದರೆ, ಲೋಕನಾಥ್ ಒಂದು ದಿನ ತಡವಾಗಿ ಅರ್ಜಿ ಸಲ್ಲಿಸಿದ್ದರ ಎಂದು ಮೂಲಗಳು ತಿಳಿಸಿವೆ.
ಎಂ.ಎಸ್.ಶಿವಕುಮಾರ್ ನೇತೃತ್ವದ ಕುಲಪತಿಗಳ ಶೋಧನಾ ಸಮಿತಿಯು ಜಿ.ವೆಂಕಟೇಶ ಕುಮಾರ್, ಡಿ.ಎಸ್.ಗುರು, ಶರತ್ ಅನಂತಮೂರ್ತಿ ಅವರ ಹೆಸರನ್ನು ರಾಜ್ಯಪಾಲರಿಗೆ ಶಿಫಾರಸು ಮಾಡಿತ್ತು. ಜಿ.ವೆಂಕಟೇಶ ಕುಮಾರ್ ಹೆಸರನ್ನು ಕೈಬಿಟ್ಟು ಲೋಕನಾಥ್ ಹೆಸರನ್ನು ಮಾರ್ಚ್ 16ರಂದು ಸೇರಿಸಲಾಯಿತು ಎನ್ನಲಾಗಿದೆ. ಲೋಕನಾಥ್ ಮಾರ್ಚ್ 23ರಂದು ಅಧಿಕಾರ ಸ್ವೀಕರಿಸಿದ್ದಾರೆ.