ಮನೆ ರಾಜ್ಯ ಸುಸ್ಥಿರ ಭವಿಷ್ಯದ ಆವಿಷ್ಕಾರಗಳ ಪ್ರೋತ್ಸಾಹಕ್ಕಾಗಿ ಇ-ಕೆಆರ್‌ಡಿಐಪಿ ಪ್ರಾರಂಭ: ಸಚಿವ ಎನ್‌ ಎಸ್‌ ಭೋಸರಾಜು

ಸುಸ್ಥಿರ ಭವಿಷ್ಯದ ಆವಿಷ್ಕಾರಗಳ ಪ್ರೋತ್ಸಾಹಕ್ಕಾಗಿ ಇ-ಕೆಆರ್‌ಡಿಐಪಿ ಪ್ರಾರಂಭ: ಸಚಿವ ಎನ್‌ ಎಸ್‌ ಭೋಸರಾಜು

0

ಬೆಂಗಳೂರು: ಸುಸ್ಥಿರ ಭವಿಷ್ಯದ ಸಂಶೋಧನೆ ಮತ್ತು ಆವಿಷ್ಕಾರಗಳ ಪ್ರೋತ್ಸಾಹ ಹಾಗೂ ಅವುಗಳ ಫಲವನ್ನು ಜನಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಇ-ಕೆಆರ್‌ಡಿಐಪಿ (e-KRDIP ಕರ್ನಾಟಕ ಆರ್‌&ಡಿ ಇನ್ನೋವೇಷನ್‌ ಫ್ಲಾಟ್‌ಫಾರಂ Karnataka R&D Innovation Platform e-KRDIP) ಅನ್ನು ಪ್ರಾರಂಭಿಸುವ ನಿಟ್ಟಿನಲ್ಲಿ ಆರ್ಥಿಕ ಇಲಾಖೆಯಿಂದ ಅಗತ್ಯ ಅನುಮೋದನೆಯನ್ನು ಪಡೆದುಕೊಳ್ಳಲಾಗಿದೆ. ಕರ್ನಾಟಕ ರಿಸರ್ಚ್‌ ಫೌಂಡೇಶನ್‌ ಸೇರಿದಂತೆ ಸಂಶೋಧನೆಗೆ ಒತ್ತು ನೀಡುವ ಈ ಎರಡೂ ಸಂಸ್ಥೆಗಳನ್ನ ಶೀಘ್ರದಲ್ಲೇ ಪ್ರಾರಂಭಿಸಲು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್‌ ಎಸ್‌ ಭೋಸರಾಜು ತಿಳಿಸಿದರು.

ಇಂದು ನಗರದಲ್ಲಿ ಶೆಲ್‌ ಇಂಡಿಯಾ “ಚೇಂಜ್‌ ಮೇಕರ್ಸ್‌ ಆಫ್‌ ಟುಮಾರೋ” ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕರ್ನಾಟಕ ರಾಜ್ಯ ಕೈಗಾರಿಕಾ ಸ್ನೇಹಿ ರಾಜ್ಯಗಳಲ್ಲಿ ಪ್ರಮಖವಾಗಿದೆ. ಸ್ಟಾರ್ಟ್‌ ಅಪ್‌ಗಳ ಪ್ರೋತ್ಸಾಹಕ್ಕೆ, ಹೊಸ ಉದ್ಯಮಗಳ ಸ್ಥಾಪನೆಗೂ ರಾಜ್ಯ ಸರಕಾರ ಉತ್ತಮ ಸಹಕಾರ ನೀಡುತ್ತಿದೆ. ರಾಜ್ಯ ಸರಕಾರದ ಕ್ರಾಂತಿಕಾರಿ ಯೋಜನೆಗಳ ಪರಿಣಾಮದಿಂದ ವಿಶ್ವದ ಪ್ರಮುಖ ಸಂಸ್ಥೆಗಳು ಕರ್ನಾಟಕ ರಾಜ್ಯದಲ್ಲಿ ತಮ್ಮ ಘಟಕಗಳನ್ನು ಪ್ರಾರಂಭಿಸಿವೆ. ರಾಜ್ಯದಲ್ಲಿ ಸಂಶೋಧನೆಗೆ ಉತ್ತಮ ಪರಿಸರವಿದ್ದು, ಉತ್ತಮ ಮಾನವ ಸಂಪನ್ಮೂಲ ಕೂಡಾ ಲಭ್ಯವಿದೆ. ಇದರಿಂದಾಗಿ ಶೆಲ್‌ ಕಂಪನಿ ತಮ್ಮ ಅತಿದೊಡ್ಡ ಸಂಶೋಧನಾ ಕೇಂದ್ರವನ್ನು ಇಲ್ಲಿ ಸ್ಥಾಪಿಸಿದೆ. ಹವಾಮಾನ ಬದಲಾವಣೆಯಿಂದ ಬಹಳಷ್ಟು ಸವಾಲುಗಳನ್ನು ಎದುರಿಸುತ್ತಿರುವ ಸಂಧರ್ಭದಲ್ಲಿ, ಹೊಸ ಆವಿಷ್ಕಾರಗಳಿಗೆ ಉತ್ತೇಜಿಸುವುದು ಅತ್ಯವಶ್ಯ. ನಮ್ಮ ಸರಕಾರ ಈ ನಿಟ್ಟಿನಲ್ಲಿ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದೆ ಎಂದು ಹೇಳಿದರು.

ರಾಜ್ಯದಲ್ಲಿ ಸ್ಟಾರ್ಟ್‌ ಅಪ್‌ಗಳು ಮತ್ತು ಉದ್ದಿಮೆಗಳು ನೂತನ ಉತ್ಪನ್ನಗಳ ಸಂಶೋಧನೆಗೆ ಮತ್ತು ಉತ್ಪಾದನೆಗೆ ಪೂರಕ ವಾತಾವರಣ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಸಂಶೋಧನಾ ಫೌಂಡೇಶನ್‌ ಸ್ಥಾಪಿಸಲು ಆಯವ್ಯಯದಲ್ಲಿ ಘೋಷಣೆಯಾಗಿತ್ತು. ಈಗ ಈ ಪ್ರಸ್ತಾವನೆಗೆ ಆರ್ಥಿಕ ಇಲಾಖೆಯಿಂದ ಅನುಮೋದನೆ ದೊರೆತಿದೆ. ರಾಜ್ಯವನ್ನು ಸಂಶೋಧನಾ ಹಬ್‌ ಆಗಿಸುವ ನಿಟ್ಟಿನಲ್ಲಿ ಇದೊಂದು ಕ್ರಾಂತಿಕಾರಿ ಹೆಜ್ಜೆಯಾಗಿದೆ. ಹೊಸ ಸಂಶೋಧನೆಗಳು ಫಲ ಜನ ಸಾಮಾನ್ಯರಿಗೆ, ಸ್ಟಾರ್ಟ್‌ ಅಪ್‌ಗಳಿಗೆ, ಉದ್ದಿಮೆಗಳಿಗೆ ತಲುಪಿಸುವ ನಿಟ್ಟಿನಲ್ಲಿ ಇ-ಕೆಆರ್‌ಡಿಐಪಿ (ಕರ್ನಾಟಕ ಆರ್‌&ಡಿ ಇನ್ನೋವೇಷನ್‌ ಫ್ಲಾಟ್‌ಫಾರಂ Karnataka R&D Innovation Platform e-KRDIP) ಯನ್ನು ಕೂಡಾ ಸ್ಥಾಪಿಸಲಾಗುತ್ತಿದೆ. ಇದಕ್ಕೂ ಕೂಡಾ ಆರ್ಥಿಕ ಇಲಾಖೆಯ ಅನುಮೋದನೆ ದೊರೆತಿದ್ದು, ಸಂಸ್ಥೆಗಳ ಪ್ರಾರಂಭಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು.

ಇ-ಕೆಆರ್‌ಡಿಐಪಿ (ಕರ್ನಾಟಕ ಆರ್‌&ಡಿ ಇನ್ನೋವೇಷನ್‌ ಫ್ಲಾಟ್‌ಫಾರಂ e-KRDIP):

ಎಂಎಸ್‌ಎಂಇ ಗಳು ಹಾಗೂ ಸ್ಟಾರ್ಟ್‌ ಅಪ್‌ಗಳು ಹೊರಗಿನ ಹೊಸ ಸಂಶೋಧನೆಗಳು, ತಂತ್ರಜ್ಞಾನ, ಸಂಶೋಧನಾ ಪಾಲುದಾರಿಕೆ ಮತ್ತು ಜ್ಞಾನದ ಆಧಾರದ ಮೇಲೆ ತಮ್ಮ ನೂತನ ಉತ್ಪನ್ನಗಳನ್ನ ಹಾಗೂ ಸೇವೆಗಳನ್ನ ಮಾರುಕಟ್ಟೆಗೆ ಪರಿಚಯಿಸುತ್ತಾರೆ. ಹೊಸ ಸಂಶೋಧನೆಗಳು ಮತ್ತು ರಿಸರ್ಚ ಹಾಗೂ ಡೆವಲಪ್‌ಮೆಂಟ್‌ಗಳ ಆಧಾರದ ಮೇಲೆ ಜನರಿಗೆ ಅನುಕೂಲ ಮಾಡಿಕೊಡುವಂತಹ ಉಪಯುಕ್ತ ತಂತ್ರಜ್ಞಾನ ಮತ್ತು ಉತ್ಪನ್ನಗಳನ್ನಾಗಿಸುವ ನಿಟ್ಟಿನಲ್ಲಿ ಇನ್ನೋವೇಷನ್‌ ಫ್ಲಾಟ್‌ಫಾರಂ ಸಹಾಯ ಮಾಡಲಿದೆ. ಉದ್ದಿಮೆಗಳು ಮತ್ತು ರಾಜ್ಯದ ಆರ್ಥಿಕತೆಗೆ ಇಂಬು ನೀಡುವ ನಿಟ್ಟಿನಲ್ಲಿ ಎಂಎಸ್‌ಎಂಇ, ಉದ್ದಿಮೆಗಳು, ಸ್ಟಾರ್ಟ್‌ ಅಪ್‌ಗಳು ಹಾಗೂ ಶೈಕ್ಷಣಿಕ ಸಂಸ್ಥೆಗಳ ಮಧ್ಯೆ ಸಮನ್ವಯ ಸಾಧಿಸುವುದು ಸಂಸ್ಥೆಯ ಮೂಲ ಉದ್ದೇಶವಾಗಿದೆ. ಅಲ್ಲದೇ, ಆರ್‌&ಡಿ ಕಾರ್ಯಕ್ರಮಗಳ ಪರಿಣಾಮಗಳನ್ನ ಮೇಲ್ವಿಚಾರಣೆಯನ್ನು ಈ ಸಂಸ್ಥೆ ಮಾಡಲಿದೆ. ಒಟ್ಟಾರೆಯಾಗಿ, ಇ-ಕೆಆರ್‌ಡಿಐಪಿ ಪ್ಲಾಟ್‌ಫಾರಂ ಸಂಶೋಧನೆ, ಶೈಕ್ಷಣಿಕ ಹಾಗೂ ಉದ್ದಿಮೆಗಳ ಪ್ರಮುಖರನ್ನ ಒಂದೆಡೆ ಸೇರಿಸುವ ಮೂಲಕ ರಿಸರ್ಚ್‌ ಮತ್ತು ಡೆವಲಪ್‌ಮೆಂಟ್‌ಗಳ ಉಪಯುಕ್ತತೆಯನ್ನು ಜನಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರವಹಿಸಲಿದೆ ಎಂದು ಹೇಳಿದರು. 

ಸುಸ್ಥಿರ ಇಂಧನ ಕ್ಷೇತ್ರದಲ್ಲಿ ಶೆಲ್‌ ಕಂಪನಿ ನಡೆಸುತ್ತಿರುವ ಸಂಶೋಧನೆಗಳು ಶ್ಲಾಘನೀಯ. ಸುಸ್ಥಿರ ಇಂಧನಗಳನ್ನು ಹೆಚ್ಚು ಹೆಚ್ಚು ಬಳಸುವುದರಿಂದ ಪರಿಸರದ ಮೇಲಿನ ಹೊರೆಯನ್ನು ತಗ್ಗಿಸಬಹುದಾಗಿದೆ. ಇಂತಹ ಯೋಜನೆಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಸಮ್ಮೇಳನದಲ್ಲಿ ಸೇರಿರುವವರ ಪಾತ್ರವೂ ಹಿರಿದಾಗಿದೆ. ನಮ್ಮ ಮುಂದಿನ ಪೀಳಿಗೆಯ ಹಿತದೃಷ್ಟಿಯಿಂದ ಪರಿಸರ ಮತ್ತು ಹವಾಮಾನದ ಮೇಲಿನ ಒತ್ತಡವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಇನ್ನೂ ಹೆಚ್ಚಿನ ಆವಿಷ್ಕಾರಗಳನ್ನು ಮಾಡಿ ಎಂದು ಸಚಿವರು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಕಂದಾಯ ಸಚಿವರಾದ ಕೃಷ್ಣ ಭೈರೇಗೌಡ, ಶೆಲ್‌ ಇಂಡಿಯಾ ಅಧ್ಯಕ್ಷರಾದ ಮಾನ್ಸಿ ಮದನ್‌ ತ್ರಿಪಾಠಿ ಸೇರಿದಂತೆ ದೇಶ ವಿದೇಶಗಳಿಂದ ಆಗಮಿಸಿದ್ದ ನೂರಾರು ಪ್ರತಿನಿಧಿಗಳು ಉಪಸ್ಥಿತರಿದ್ದರು.