ಮನೆ ರಾಜಕೀಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಮುಚ್ಚುವುದಿಲ್ಲ: ಗೋವಿಂದ ಎಂ.ಕಾರಜೋಳ

ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಮುಚ್ಚುವುದಿಲ್ಲ: ಗೋವಿಂದ ಎಂ.ಕಾರಜೋಳ

0

ಬೆಂಗಳೂರು: ವಿಜಯಪುರದ ಮಹಿಳಾ ವಿಶ್ವ ವಿದ್ಯಾಲಯವನ್ನು ಮುಚ್ಚಲಾಗುವುದು ಎಂಬ ಸುಳ್ಳು ವದಂತಿಯನ್ನು ಯಾರೂ ಹರಡಬಾರದು. ಇಂಥ ವದಂತಿಗಳಿಗೆ ಕಿವಿಗೊಡಬಾರದು. ಮಹಿಳಾ ವಿಶ್ವವಿದ್ಯಾಲಯವನ್ನು ಮುಚ್ಚುವ ಪ್ರಶ್ನೆಯೇ ಇಲ್ಲ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಎಂ.ಕಾರಜೋಳ ಸ್ಪಷ್ಟಪಡಿಸಿದ್ದಾರೆ.

ಈ ಬಗ್ಗೆ ಮಾಧ್ಯಮ ಪ್ರಕಟಣೆ ನೀಡಿರುವ ಅವರು, ‘ಉತ್ತರ ಕರ್ನಾಟಕದ ಅಭಿವೃದ್ಧಿಗೆ ಪೂರಕ ಆಗುವಂತೆ ಆ ಭಾಗದ ಹೆಣ್ಣು ಮಕ್ಕಳು ಹೆಚ್ಚು, ಹೆಚ್ಚು ವಿದ್ಯಾವಂತರಾಗುವಂತೆ ಶೈಕ್ಷಣಿಕ ವ್ಯವಸ್ಥೆಯನ್ನು ಉನ್ನತೀಕರಿಸಲು ಮತ್ತು ಆ ಮೂಲಕ ಸುಸಂಸ್ಕೃತ, ಸುಶಿಕ್ಷಿತ ಸಮಾಜವನ್ನು ನಿರ್ಮಿಸಿ ಸ್ವಾವಲಂಬಿ ಮಹಿಳೆಯರನ್ನು ಉತ್ತೇಜಿಸುವ ಉದ್ದೇಶದಿಂದ ಈ ವಿಶ್ವವಿದ್ಯಾಲಯವನ್ನು ಆರಂಭಿಸಲಾಗಿದೆ‘ ಎಂದಿದ್ದಾರೆ.

‘ಈ ವಿಶ್ವವಿದ್ಯಾಲಯದ ಅಭಿವೃದ್ಧಿಗೆ ಆ ಭಾಗದ ಜನಪ್ರತಿನಿಧಿಯಾಗಿ ಮತ್ತು ಜನಸಮುದಾಯದ ಆಶೋತ್ತರಗಳನ್ನು ಈಡೇರಿಸುವ ಮತ್ತು ಜನರ ಅಪೇಕ್ಷೆ, ನಿರೀಕ್ಷೆಗಳಿಗೆ ತಕ್ಕಂತೆ ಕಾರ್ಯನಿರ್ವಹಿಸುವ ಅಳಿಲುಸೇವೆಯ ಮೂಲಕ ವಿಶ್ವ ವಿದ್ಯಾಲಯದ ಅಭಿವೃದ್ಧಿಗೆ ಕೊಡುಗೆ ನೀಡುವ ಸೌಭಾಗ್ಯ ನನ್ನದಾಗಿದೆ. ಈ ವಿಶ್ವವಿದ್ಯಾಲಯ ಕೇವಲ ಒಂದು ಜಿಲ್ಲೆಯಲ್ಲ, ಹದಿಮೂರು ಜಿಲ್ಲೆಗಳು ಈ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿವೆ’ ಎಂದೂ ತಿಳಿಸಿದ್ದಾರೆ.

‘ಈ ಮಹಿಳಾ ವಿಶ್ವವಿದ್ಯಾಲಯವನ್ನು ಅಕ್ಕಮಹಾದೇವಿ ಮಹಿಳಾ ವಿಶ್ವ ವಿದ್ಯಾಲಯ ಎಂದು ಮರು ನಾಮಕರಣ ಮಾಡಿ, ವಚನ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದ ಅಕ್ಕ ಮಹಾದೇವಿಯಗೆ ಗೌರವ ಸಲ್ಲಿಸಿದ ಕೀರ್ತಿ ಬಿಜೆಪಿ ಸರ್ಕಾರಕ್ಕೆ ಸಲ್ಲುತ್ತದೆ’ ಎಂದಿದ್ದಾರೆ.