ಹುಬ್ಬಳ್ಳಿ: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ. ರೌಡಿಗಳಿಗೆ ಪೊಲೀಸರ ಮೇಲೆ ಭಯ ಇಲ್ಲದಂತಾಗಿದೆ. ರೌಡಿಗಳಿಗೆ, ಗೂಂಡಾಗಳಿಗೆ ರಾಜ ಮರ್ಯಾದೆ ಸಿಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಿಡಿ ಕಾರಿದರು.
ಹುಬ್ಬಳ್ಳಿ ಬಿವಿಬಿ ಕಾಲೇಜಿನಲ್ಲಿ ಸಂಭವಿಸಿದ ನೇಹಾ ಹಿರೇಮಠ ಕೊಲೆ ಪ್ರಕರಣದ ವಿಚಾರವಾಗಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಒಂದು ಟ್ವೀಟ್ ಮಾಡಿದರೆ ಜವಾಬ್ದಾರಿ ಮುಗಿಯಲ್ಲ. ನೇಹಾ ಕೊಲೆ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು. ಆದರೆ, ಇಲ್ಲಿಯ ಪೊಲೀಸರಿಂದ ಸರಿಯಾಗಿ ತನಿಖೆ ಆಗುವುದಿಲ್ಲ. ಏಕೆಂದರೆ ಪೊಲೀಸರು ನಿಷ್ಕ್ರಿಯರಾಗಿದ್ದಾರೆ. ಹೀಗಾಗಿ ಎಸ್ ಐಟಿ ರಚಿಸಬೇಕು ಎಂದರು.
ಎಲ್ಲ ಕಡೆ ಕೊಲೆಗಳು ಸಾಮಾನ್ಯ ಆಗಿದೆ. ಗದಗನಲ್ಲಿ ಗುರುವಾರ ನಾಲ್ವರ ಕೊಲೆ ಆಗಿದೆ. ಬೆಂಗಳೂರಿನಲ್ಲಿಯೂ ಇಬ್ಬರ ಕೊಲೆಯಾಗಿದೆ. ಹಲವಾರು ತಿಂಗಳಿನಿಂದ ಇಂಥಹ ಘಟನೆಗಳು ನಡೆಯುತ್ತಿವೆ ಎಂದು ಕಿಡಿಕಾರಿದರು.
ಹೀಗೆ ಬಿಟ್ಟರೆ ನಮ್ಮ ರಾಜ್ಯ ಮತ್ತೊಂದು ಬಿಹಾರ ಆಗುತ್ತೆ. ತಮ್ಮ ಮಕ್ಕಳು ಎಷ್ಟು ಸುರಕ್ಷಿತರಿದ್ದಾರೆ ಅನ್ನೋ ಆತಂಕ ಪಾಲಕರಿಗೆ ಶುರುವಾಗಿದೆ. ರಾಜ್ಯದಲ್ಲಿ ರಾತ್ರೋರಾತ್ರಿ ನಾಲ್ಕಾರು ಜನರು ಕೊಲೆಯಾಗುತ್ತಾರೆ ಅಂದರೆ ಏನು? ಪೊಲೀಸರು ಸರಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.