ಶಿರಸಿ: ರಾಜ್ಯದಲ್ಲಿ ಕಾನೂನು ಪಾಲನೆ ಹದಗೆಟ್ಟಿದೆ. ಈ ಬಗ್ಗೆ ಗೃಹ ಸಚಿವರು ಅಸಹಾಯಕರಾಗಿದ್ದಾರೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ ಅವರು ಪರಮೇಶ್ವರ ಅವರಿಗೆ ಕೆಟ್ಟ ಹೆಸರು ತರಲು ಪ್ರಯತ್ನಿಸಿದ್ದಾರೆ ಎಂದು ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಆರೋಪಿಸಿದರು.
ಶಿರಸಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಕರ್ನಾಟಕ ಅಪರಾಧಿಗಳ ರಾಜ್ಯವಾಗಿದೆ. ಸಂವಿಧಾನ ಬದ್ಧವಾಗಿ ಆಯ್ಕೆ ಆದ ಸರಕಾರದ ಜವಬ್ದಾರಿ ಎಂದರೆ ಜನರ ಜೀವ, ಆಸ್ತಿ ಪಾಸ್ತಿ ರಕ್ಷಣೆ. ಆದರೆ, ಕಾಂಗ್ರೆಸ್ ಸರಕಾರಕ್ಕೆ ಇದನ್ನೂ ಮಾಡಲಾಗುತ್ತಿಲ್ಲ. ಸಿಎಂ, ಗೃಹ ಸಚಿವರು ಇದ್ದಾರ? ಎಂಬ ಪ್ರಶ್ನೆ ಎದ್ದಿದೆ ಎಂದರು.
ಆರ್ಥಿಕ ಕ್ಷೇತ್ರ ಕುಸಿದಿದೆ. ಅರ್ಹರಿಗೆ ಯೋಜನೆ ಲಾಭ ಸಿಗುತ್ತಿಲ್ಲ. ಗುತ್ತಿಗೆದಾರ ಬಿಲ್ ಇಲ್ಲ. ಹಾಲು ಉತ್ಪಾದಕರಿಗೆ ೫ ರೂ. ಪ್ರೋತ್ಸಾಹ ಧನ ಇಲ್ಲ. ಬದಲಿಗೆ ಅಪರಾಧಿಗಳಿಗೆ, ರಾಷ್ಟ್ರದ ದ್ರೋಹಿಗಳಿಗೆ ಪ್ರೋತ್ಸಾಹಿಸುತ್ತದೆ ಎಂಬ ಸ್ಪಷ್ಟ ಸಂದೇಶ ಇದೆ. ಎಸ್ ಡಿಪಿಐ, ಪಿಎಫ್ ಐ ಪ್ರಕರಣ ವಾಪಸ್ ಪಡೆಯುವ ಮೂಲಕ ಹಗುರ ಧೊರಣೆಗೆ ಕಾರಣವಾಗುತ್ತಿದೆ ಎಂದರು.
ಗ್ರೇಸ್ ಮಾರ್ಕ್ಸ್ ಕೊಟ್ಟರೂ ಪಾಸಾಗದ ಸ್ಥಿತಿ ಇದೆ. ಸಿದ್ದ ರಾಮಯ್ಯ, ಡಿಕೆ ಅವರ ನೇತೃತ್ವವೇ ಬೇಸರ ತಂದಿದೆ ಜನರಿಗೆ. ಭ್ರಮನಿರಸನ ಆಗಿದೆ. ಸಿಎಂಗೆ ಖುರ್ಚಿ ಉಳಿಸಿಕೊಳ್ಳಬೇಕು, ತಾನು ಹೇಗೆ ಸಿಎಂ ಖುರ್ಚಿಗೆ ಹೋಗೋದು ಎಂಬ ಪ್ರಶ್ನೆ ಅವರಿಗಾಗಿದೆ. ರಾಜ್ಯದ ಆಡಳಿತ ಕುಸಿದಿದೆ. ರಾಜ್ಯದೊಳಗೆ ತಲೆ ತಗ್ಗಿಸುವ ಕಾರ್ಯ ಆಗುತ್ತಿದೆ. ದೇಶದಲ್ಲೂ ಇಂಥದೊಂದು ಸಾಧನೆ ಎಂದು ಹೇಳುವಂತಿಲ್ಲ ಎಂದೂ ಹೇಳಿದರು.
ಶಿಕ್ಷಣ ಇಲಾಖೆಯಲ್ಲಿ ನಮ್ಮ ರಾಜ್ಯದ ಮಕ್ಕಳಿಗೆ ಯಾವುದು ರೀತಿಯ ಶಿಕ್ಷಣ ಕೊಡುತ್ತಿದ್ದೇವೆ ಎಂದು ಕೇಳುವಂತಿದೆ. ಈ ವರ್ಷ ಗ್ರೇಸ್ ಮಾರ್ಕ್ಸ್ ಕೊಡುವ ಸ್ಥಿತಿ ತಂದಿದ್ದಾರೆ. ಗೊಂದಲ ಸೃಷ್ಟಿಸಿದ್ದಾರೆ. ಅತಂತ್ರ ಮಾಡಿದ್ದಾರೆ. ನಮ್ಮ ಸಾಹಿತಿಗಳು ಪುಸ್ತಕ ಕೊಟ್ಟರೂ ಗ್ರಂಥಾಲಯ ಇಲಾಖೆ ಸಚಿವರಾದ ಮಧು ಅವರಿಗೆ ನೀಡಿದರೆ ಜಾಗ ಇಲ್ಲ ಎನ್ನುತ್ತಾರೆ ಎಂದೂ ವಾಗ್ದಾಳಿ ಮಾಡಿದರು.
ಈ ವೇಳೆ ಪ್ರಮುಖರಾದ ಉಷಾ ಹೆಗಡೆ, ಆನಂದ ಸಾಲೇರ, ಆರ್.ವಿ.ಹೆಗಡೆ, ಸುಬ್ರಾಯ ಹಲಸಿನಳ್ಳಿ ಇದ್ದರು.