ಮೈಸೂರು: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಕಾನೂನನ್ನು ಗಂಟು ಮೂಟೆ ಕಟ್ಟಿ ಬಿಸಾಕಲಾಗಿದೆ ಎಂದು ಮಾಜಿ ಸಚಿವ ಶ್ರೀರಾಮುಲು ಆಡಳಿತ ಪಕ್ಷದ ವಿರುದ್ಧ ಗುಡುಗಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಯಾವತ್ತು ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರುತ್ತದೆ ಅವತ್ತಿನಿಂದ ಹಿಂದೂ ಕಾರ್ಯಕರ್ತರ ಹತ್ಯೆಯಾಗುತ್ತದೆ ಎಂದು ಹರಿಹಾಯ್ದಿದ್ದಾರೆ.
ರಾಜ್ಯದ ಎಲ್ಲಾ ಕಡೆಗಳಲ್ಲೂ ಕೊಲೆ, ಹತ್ಯೆ, ದೌರ್ಜನ್ಯ ನಡೆಯುತ್ತಿವೆ. ಸಿಎಂ ಕ್ಷೇತ್ರದಲ್ಲೇ ಕಾನೂನು ಸುವ್ಯವಸ್ಥೆ ಹದೆಗಟ್ಟಿದೆ ಅಂದ ಮೇಲೆ ರಾಜ್ಯದ ಬೇರೆ ಭಾಗಗಳ ಪರಿಸ್ಥಿತಿ ಹೇಗಿರಬೇಡ ಯೋಚಿಸಿ ಎಂದು ಹೇಳಿದರು.
ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರಿಗೆ, ಸ್ವಾಮೀಜಿಗಳಿಗೆ, ಹಿರಿಯ ನಾಗರೀಕರಿಗೆ ರಕ್ಷಣೆಯೇ ಇಲ್ಲದಂತಾಗಿದೆ. ಕಾಂಗ್ರೆಸ್ ಸರಕಾರ ಬಂದಾಗಲೆಲ್ಲ ರಾಜ್ಯದ ಒಳಗಿನ ಜಿಹಾದಿ ಮನಃಸ್ಥಿತಿ ಇರೋ ಜನ ಎದ್ದು ಕೂರುತ್ತಾರೆ. ಹೀಗಾಗಿ ಕೊಲೆಗಳು ನಡೆಯುತ್ತವೆ ಎಂದು ಗುಡುಗಿದರು.
ವೇಣುಗೋಪಾಲ ನಾಯಕ ಕೊಲೆ ಪೂರ್ವ ನಿಯೋಜಿತ. ಜಿಹಾದಿ ಮನಃಸ್ಥಿತಿ ಜನ ಪ್ಲಾನ್ ಮಾಡಿಕೊಂಡು ಹಿಂದೂಗಳ ಕೊಲೆ ಮಾಡುತ್ತಿದ್ದಾರೆ. ಕಾಂಗ್ರೆಸ್ ಸರಕಾರಕ್ಕೆ ಈ ವಿಚಾರದಲ್ಲಿ ಗಂಭೀರತೆ ಇಲ್ಲ. ಕಾಂಗ್ರೆಸ್ ನವರಿಗೆ ಅಧಿಕಾರದ ಅಹಂ ಜಾಸ್ತಿಯಾಗಿದೆ ಎಂದರು.
ಸುಳ್ಳಿನ ಗ್ಯಾರಂಟಿ ಮೂಲಕ ಅಧಿಕಾರಕ್ಕೆ ಬಂದವರು ವೈಯಕ್ತಿಕ ವರ್ಚಸ್ಸಿನಿಂದ ಬಂದ ರೀತಿ ಮಾತಾನಾಡುತ್ತಿದ್ದಾರೆ. ವೇಣುಗೋಪಾಲ ನಾಯಕ ಹತ್ಯೆ ನಂತರ ಅವರ ಕುಟುಂಬಕ್ಕೆ ಸ್ಪಂದಿಸುವ ಕೆಲಸವನ್ನು ಜಿಲ್ಲಾ ಮಂತ್ರಿ ಮಾಡಿಲ್ಲ. ಸಿಎಂ ಸೇರಿದಂತೆ ಎಲ್ಲರು ಕಣ್ಣು ಮುಚ್ಚಿ ಕುಳಿತಿದ್ದಾರೆ ಎಂದಿದ್ದಾರೆ.
ಹಿಂದೂ ಕಾರ್ಯಕರ್ತರ ಮೇಲೆ ಈ ರೀತಿ ಘಟನಾವಳಿಗಳು ಮೇಲಿಂದ ಮೇಲೆ ನಡೆಯುತ್ತವೆ. ಸ್ವಲ್ಪ ಜಾಗರೂಕರಾಗಿರಿ. ಶವದ ಮೇಲೆ ಬಿಜೆಪಿ ಯಾವತ್ತೂ ರಾಜಕೀಯ ಮಾಡಿಲ್ಲ. ಹಿಂದೂ ಸಂಘಟನೆಯ ಕಾರ್ಯಕರ್ತರ ಹತ್ಯೆಯಾದಾಗ ಅವರ ವಿರುದ್ದ ಧ್ವನಿ ಎತ್ತುವುದು ನಮ್ಮ ಜವಾಬ್ದಾರಿ. ಪೋಲಿಸ್ ತನಿಖೆಗೆ ಒತ್ತಡಗಳು ಉಂಟಾಗುವ ಅನುಮಾನ ನಮಗೆ ಇದೆ. ಸಿಬಿಐ ತನಿಖೆ ಮಾಡಿದರೆ ಸತ್ಯ ಹೊರಬರುತ್ತದೆ ಎಂದು ಹೇಳಿದ್ದಾರೆ.