ಮನೆ ಕ್ರೀಡೆ ರಣಜಿ ಕ್ರಿಕೆಟ್: ಕರ್ನಾಟಕ ತಂಡಕ್ಕೆ 7 ವಿಕೆಟ್ ಜಯ

ರಣಜಿ ಕ್ರಿಕೆಟ್: ಕರ್ನಾಟಕ ತಂಡಕ್ಕೆ 7 ವಿಕೆಟ್ ಜಯ

0

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಕ್ತಾಯವಾದ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಸಿ ಗುಂಪಿನ ಪಂದ್ಯದಲ್ಲಿ ಛತ್ತೀಸಗಢ ತಂಡದ ಎದುರು ಕರ್ನಾಟಕ 7 ವಿಕೆಟ್‌ಗಳಿಂದ ಜಯಿಸಿತು.

55 ರನ್ನುಗಳ ಹಿನ್ನಡೆಗೆ ಸಿಲುಕಿದ ಛತ್ತೀಸ್’ಗಢ, 3ನೇ ದಿನದಾಟದ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 35 ರನ್ ಮಾಡಿತ್ತು. ಕೊನೆಯ ದಿನದ ಆಟ ಮುಂದುವರಿಸಿ 177ಕ್ಕೆ ಕುಸಿಯಿತು. ವಿಜಯ್ ಕುಮಾರ್ ವೈಶಾಖ್ 59 ರನ್ನಿತ್ತು 5 ವಿಕೆಟ್ ಉಡಾಯಿಸಿದರು. ಇದು ಪ್ರಥಮ ದರ್ಜೆ ಕ್ರಿಕೆಟ್’ನಲ್ಲಿ ವೈಶಾಖ್ ಅವರ ಮೊದಲ 5 ಪ್ಲಸ್ ವಿಕೆಟ್ ಸಾಧನೆಯಾಗಿದೆ.

123 ರನ್ನುಗಳ ಗೆಲುವಿನ ಗುರಿ ಪಡೆದ ಕರ್ನಾಟಕ 3 ವಿಕೆಟ್ ಕಳೆದುಕೊಂಡು 128 ರನ್ ಬಾರಿಸಿತು. ಇದು 4 ಪಂದ್ಯಗಳಲ್ಲಿ ಕರ್ನಾಟಕ ಸಾಧಿಸಿದ 2ನೇ ಗೆಲುವು. ಉಳಿದೆರಡು ಪಂದ್ಯಗಳು ಡ್ರಾಗೊಂಡಿವೆ. ಒಟ್ಟು 19 ಅಂಕ ಹೊಂದಿದೆ. ಇಷ್ಟೇ ಪಂದ್ಯಗಳಿಂದ 14 ಅಂಕ ಗಳಿಸಿರುವ ರಾಜಸ್ಥಾನ ದ್ವಿತೀಯ ಸ್ಥಾನಿಯಾಗಿದೆ. ಕರ್ನಾಟಕ-ರಾಜಸ್ಥಾನ ಮುಂದಿನ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.

ಮೊದಲ ಇನ್ನಿಂಗ್ಸ್’ನಲ್ಲಿ ಶತಕ ಬಾರಿಸಿದ ಅಶುತೋಷ್ ಸಿಂಗ್ (18) ಅವರನ್ನು ಮೊದಲು ಪೆವಿಲಿಯನ್’ಗೆ ರವಾನಿಸುವ ಮೂಲಕ ವೈಶಾಖ್ ಛತ್ತೀಸ್’ಗಢದ ಮೇಲೆರಗಿದರು. ನಾಯಕ ಹರ್ಪ್ರೀತ್ ಸಿಂಗ್ (8) ಕೆ. ಗೌತಮ್’ಗೆವಿಕೆಟ್ ಒಪ್ಪಿಸಿದರು. ಕರ್ನಾಟಕದ ಬೌಲಿಂಗ್ ದಾಳಿಯನ್ನು ತಡೆದು ನಿಂತವರು ಅಮನ್ದೀಪ್ ಖಾರೆ (50) ಮತ್ತು ವಿಕೆಟ್ ಕೀಪರ್ ಮಾಯಾಂಕ್ ವರ್ಮ (46) ಮಾತ್ರ.

ಚೇಸಿಂಗ್ ವೇಳೆ ಕರ್ನಾಟಕ ಆರ್. ಸಮರ್ಥ್ (24), ನಾಯಕ ಮಾಯಾಂಕ್ ಅಗರ್ವಾಲ್ (14) ಮತ್ತು ಮನೀಷ್ ಪಾಂಡೆ (27) ಅವರ ವಿಕೆಟ್ ಕಳೆದುಕೊಂಡಿತು. ನಿಕಿನ್ ಜೋಸ್ 44 ಮತ್ತು ಕೆ. ಗೌತಮ್ 2 ರನ್ ಮಾಡಿ ಅಜೇಯರಾಗಿ ಉಳಿದರು.

ಸಂಕ್ಷಿಪ್ತ ಸ್ಕೋರ್: ಛತ್ತೀಸ್’ಗಢ-311 ಮತ್ತು 177 (ಅಮನ್ದೀಪ್ ಖಾರೆ 50, ಮಾಯಾಂಕ್ ವರ್ಮ 46, ವಿ. ವೈಶಾಖ್ 59ಕ್ಕೆ 5, ಕೆ. ಗೌತಮ್ 41ಕ್ಕೆ 2). ಕರ್ನಾಟಕ-366 ಮತ್ತು 3 ವಿಕೆಟಿಗೆ 128 (ಜೋಸ್ ಔಟಾಗದೆ 44, ಸಮರ್ಥ್ 24, ಪಾಂಡೆ 27, ಅಗರ್ವಾಲ್ 14, ಸುಮಿತ್ ರುಯಿಕರ್ 35ಕ್ಕೆ 2).

ಹಿಂದಿನ ಲೇಖನಮರಕ್ಕೆ ಡಿಕ್ಕಿ ಹೊಡೆದ ಶಾಲಾ ಬಸ್: 7 ವಿದ್ಯಾರ್ಥಿಗಳಿಗೆ ಗಂಭೀರ ಗಾಯ
ಮುಂದಿನ ಲೇಖನಸ್ಯಾಂಟ್ರೊ ರವಿ ಮೇಲೆ ಕ್ರಮಕ್ಕೆ ಸೂಚನೆ: ಆರಗ ಜ್ಞಾನೇಂದ್ರ