ಮನೆ ಕಾನೂನು ವಕೀಲರ ನೋಂದಣಿಗೆ ಮಾನ್ಯತೆ ಪಡೆದ ಸಂಸ್ಥೆಯಿಂದ ಕಾನೂನು ಪದವಿ ಕಡ್ಡಾಯ: ಬಿಸಿಐ ನಿಯಮ ಎತ್ತಿಹಿಡಿದ ಸುಪ್ರೀಂ

ವಕೀಲರ ನೋಂದಣಿಗೆ ಮಾನ್ಯತೆ ಪಡೆದ ಸಂಸ್ಥೆಯಿಂದ ಕಾನೂನು ಪದವಿ ಕಡ್ಡಾಯ: ಬಿಸಿಐ ನಿಯಮ ಎತ್ತಿಹಿಡಿದ ಸುಪ್ರೀಂ

0

ರಾಜ್ಯ ವಕೀಲರ ಪರಿಷತ್ಗಳಲ್ಲಿ ನೋಂದಾಯಿಸಿಕೊಳ್ಳಲು ಬಯಸುವ ವಕೀಲರಿಗೆ ಇರಬೇಕಾದ ಅರ್ಹತೆ ಮತ್ತು ಅವಶ್ಯಕತೆಗಳನ್ನು ಸೂಚಿಸುವ ಅಧಿಕಾರ ಭಾರತೀಯ ವಕೀಲರ ಪರಿಷತ್ತಿಗೆ (ಬಿಸಿಐ) ಇದೆ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ.

Join Our Whatsapp Group

[ಬಾರ್ ಕೌನ್ಸಿಲ್ ಆಫ್ ಇಂಡಿಯಾ ಮತ್ತು ರಬಿ ಸಾಹು ಇನ್ನಿತರರ ನಡುವಣ ಪ್ರಕರಣ].

ಬಾರ್ ಕೌನ್ಸಿಲ್ ಆಫ್ ಇಂಡಿಯಾ ವರ್ಸಸ್ ಬೋನಿ ಫೊಯ್ ಲಾ ಕಾಲೇಜು ಇನ್ನಿತರರ ನಡುವಣ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಸಾಂವಿಧಾನಿಕ ಪೀಠ ಇತ್ತೀಚೆಗೆ ನೀಡಿದ್ದ ತೀರ್ಪಿನ ಅನುಸಾರ , ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಪಿ ವಿ ಸಂಜಯ್ ಕುಮಾರ್ ಅವರಿದ್ದ ಪೀಠ ವಕೀಲರಾಗಿ ನೋಂದಾಯಿಸಿಕೊಳ್ಳಲು ಮಾನ್ಯತೆ ಪಡೆದ ಸಂಸ್ಥೆಯಿಂದ ಕಾನೂನು ಪದವಿ ಕಡ್ಡಾಯ ಎಂದು ಬಿಸಿಐ ರೂಪಿಸಿದ್ದ ನಿಯಮವನ್ನು ಎತ್ತಿ ಹಿಡಿದಿದೆ.

ಮಾನ್ಯತೆ ಇಲ್ಲದ ಅಂಗುಲ್ನ ವಿವೇಕಾನಂದ ಕಾನೂನು ಕಾಲೇಜಿನಲ್ಲಿ ಪದವಿ ಪಡೆದಿದ್ದರೂ, ಪ್ರಕರಣದ ಪ್ರತಿವಾದಿಯನ್ನು ವಕೀಲರಾಗಿ ದಾಖಲಿಸಿಕೊಳ್ಳುವಂತೆ ಸೂಚಿಸಿದ್ದ  ಒಡಿಶಾ ಹೈಕೋರ್ಟ್ ಆದೇಶ ಪ್ರಶ್ನಿಸಿ ಬಿಸಿಐ ಸಲ್ಲಿಸಿದ್ದ ಮೇಲ್ಮನವಿಗೆ ಸಂಬಂಧಿಸಿದಂತೆ ಈ ತೀರ್ಪು ನೀಡಲಾಗಿದೆ.

ಪ್ರಕರಣದ ಪ್ರತಿವಾದಿ ಸಲ್ಲಿಸಿದ್ದ ಮನವಿಯನ್ನು ಸೆಪ್ಟೆಂಬರ್ 2012 ರಲ್ಲಿ ಅಂಗೀಕರಿಸಿದ್ದ ಹೈಕೋರ್ಟ್ ಅವರನ್ನು ವಕೀಲರಾಗಿ ನೋಂದಾಯಿಸಿಕೊಳ್ಳಲು ಯಾವುದೇ ಹೆಚ್ಚುವರಿ ಷರತ್ತು ವಿಧಿಸದಂತೆ ಬಿಸಿಐಗೆ ನಿರ್ಬಂಧ ವಿಧಿಸಿತ್ತು.

ದಾಖಲಾತಿಗೆ ಮುನ್ನ ವಕೀಲರ ಶೈಕ್ಷಣಿಕ ಅರ್ಹತೆಗಳಿಗೆ ಸಂಬಂಧಿಸಿದ ವಿಷಯಗಳನ್ನು ನಿಯಂತ್ರಿಸುವ ಅಧಿಕಾರ ಬಿಸಿಐಗೆ ಇದೆಯೇ ಎಂಬುದು ಸುಪ್ರೀಂ ಕೋರ್ಟ್ ಎದುರಿದ್ದ ಪ್ರಶ್ನೆಯಾಗಿತ್ತು. ಅಂತಹ ಅಧಿಕಾರ ಬಿಸಿಐಗೆ ಇದೆ ಎಂದು ಪೀಠ ಸ್ಪಷ್ಟಪಡಿಸಿದೆ. ಪ್ರಕರಣದ ತೀರ್ಪು ನೀಡುವ ಸಂಬಂಧ ವಿ ಸುಧೀರ್ ಮತ್ತು ಬಿಸಿಐ ಮತ್ತಿತರರ ನಡುವಣ ಪ್ರಕರಣವನ್ನು ಒಡಿಶಾ ಹೈಕೋರ್ಟ್ ಅವಲಂಬಿಸಿದೆಯಾದರೂ ಈ ವರ್ಷದ ಆರಂಭದಲ್ಲಿ ಸಾಂವಿಧಾನಿಕ ಪೀಠ ನೀಡಿದ್ದ ತೀರ್ಪಿನಲ್ಲಿ ವಿ ಸುಧೀರ್ ಪ್ರಕರಣದಲ್ಲಿ ನೀಡಲಾದ ತೀರ್ಪು ಉತ್ತಮ ಕಾನೂನಲ್ಲ ಎಂದು ಹೇಳಿರುವುದನ್ನು ನ್ಯಾಯಾಲಯ ಪ್ರಸ್ತಾಪಿಸಿತು.