ಮನೆ ಪೌರಾಣಿಕ ವೃದ್ಧಕನ್ಯೆ

ವೃದ್ಧಕನ್ಯೆ

0

ಈ ಕಥೆಯನ್ನು ವೈಶಂಪಾಯನನು ಜನಮೇಜಯನಿಗೆ ಶಲ್ಯ ಪರ್ವದ ಸಾರಸ್ವತಪರ್ವದ ಅಧ್ಯಾಯ 51ರಲ್ಲಿ ಹೇಳುತ್ತಾನೆ.

ಮಹಾವೀರ್ಯನಾದ ಮಹಾಯಶಸ್ವಿಯಾದ ಕುಣಿರ್ಗಾಗ್ಯ ಎಂಬ ಋಷಿಯಿದ್ದನು. ತಪಸ್ವಿಗಳಲ್ಲಿ ಶ್ರೇಷ್ಠನಾದ ಆ ವಿಭುವು ವಿಪುಲ ತಪಸ್ಸನ್ನು ತಪಿಸಿ ಸುಂದರ ಹುಬ್ಬಿನ ಮಗಳೋರ್ವಳನ್ನು ಮನಸ್ಸಿನಿಂದಲೇ ಸೃಷ್ಟಿಸಿದನು. ಅವಳನ್ನು ನೋಡಿ ಮಹಾಯಶಸ್ವಿ ಕುಣಿರ್ಗಾಗ್ಯನು ಪರಮ ಪ್ರೀತನಾದನು. ದೇಹವನ್ನು ತ್ಯಜಿಸಿ ಅವನು ಸ್ವರ್ಗಕ್ಕೆ ತೆರಳಿದನು. ಸುಂದರ ಹುಬ್ಬಿನ, ಕಮಲದ ಎಸಳುಗಳಂತಹ ಕಣ್ಣುಗಳಿದ್ದ ಆ ಕಲ್ಯಾಣೀ ಅನಿಂದಿತೆಯು ಒಂದು ಆಶ್ರಮವನ್ನು ಮಾಡಿಕೊಂಡು ಉಗ್ರ ತಪಸ್ಸಿನಲ್ಲಿ ತೊಡಗಿದಳು. ಮೊದಲು ಅವಳು ಉಪವಾಸಾದಿಗಳಿಂದ ಪಿತೃಗಳನ್ನೂ ದೇವತೆಗಳನ್ನೂ ಪೂಜಿಸಿದಳು. ಅವಳ ಉಗ್ರ ತಪಸ್ಸು ದೀರ್ಘ ಕಾಲದವರೆಗೆ ನಡೆಯಿತು. ಅವಳ ತಂದೆಯು ಕೊಡಲು ಬಯಸಿದ್ದರೂ ಆ ಅನಿಂದಿತೆಯು ಯಾರನ್ನೂ ಗಂಡನನ್ನಾಗಿ ಇಚ್ಛಿಸಿರಲಿಲ್ಲ. ತನ್ನ ಸದೃಶ ಪತಿಯನ್ನು ಅವಳು ಕಂಡಿರಲಿಲ್ಲ. ಹೀಗೆ ನಿರ್ಜನ ವನದಲ್ಲಿ ಪಿತೃ-ದೇವತೆಗಳ ಅರ್ಚನೆಯಲ್ಲಿ ನಿರತಳಾಗಿ ಆ ಉಗ್ರ ತಪಸ್ಸಿನಿಂದ ತನ್ನ ದೇಹವನ್ನು ಪೀಡಿಸಿಕೊಂಡಿರುತ್ತಿದ್ದಳು. ತನ್ನನ್ನು ಕೃತಕೃತ್ಯಳೆಂದು ಭಾವಿಸಿದ್ದರೂ ಶ್ರಮಾನ್ವಿತಳಾದ ಅವಳು ತಪಸ್ಸಿನಿಂದ ಮತ್ತು ವೃದ್ಧಾಪ್ಯದಿಂದ ಕೃಶಳಾದಳು. ಅವಳಿಗೆ ತಾನಾಗಿಯೇ ಹೆಜ್ಜೆ-ಹೆಜ್ಜೆ ಮುಂದೆಹೋಗಲೂ ಸಾಧ್ಯವಾಗುತ್ತಿರಲಿಲ್ಲ. ಆಗ ಅವಳು ಪರಲೋಕಕ್ಕೆ ಹೋಗಲು ಮನಸ್ಸುಮಾಡಿದಳು. ದೇಹತ್ಯಾಗಮಾಡಲು ಬಯಸಿದ ಅವಳನ್ನು ನೋಡಿ ನಾರದನು ಹೇಳಿದನು: “ಅನಘೇ! ಅಸಂಸ್ಕೃತೆಯಾದ ಕನ್ಯೆಯು ಹೇಗೆ ತಾನೇ ಪುಣ್ಯಲೋಕಗಳನ್ನು ಪಡೆಯುವಳು? ನೀನು ಪರಮ ತಪಸ್ಸನ್ನು ಸಾಧಿಸಿದ್ದೀಯೆ ಎಂದು ನಾವು ದೇವಲೋಕದಲ್ಲಿ ಕೇಳಿದ್ದೇವೆ. ಆದರೆ ನಿನಗೆ ಪುಣ್ಯಲೋಕಗಳು ದೊರೆಯಲಾರವು!”

ನಾರದನ ಆ ಮಾತನ್ನು ಕೇಳಿ ಅವಳು ಋಷಿಸಂಸದಿಯಲ್ಲಿ “ಸತ್ತಮರೇ! ನನ್ನ ಪಾಣಿಗ್ರಹಣಮಾಡಿಕೊಳ್ಳುವವನಿಗೆ ತಪಸ್ಸಿನ ಅರ್ಧಭಾಗವನ್ನು ಕೊಡುತ್ತೇನೆ” ಎಂದಳು. ಅವಳು ಹೀಗೆ ಹೇಳಲು ಗಾಲವನಲ್ಲಿ ಹುಟ್ಟಿದ್ದ ಶೃಂಗವಾನ್ ಎಂಬ ಹೆಸರಿನ ಋಷಿಯು ಅವಳ ಪಾಣಿಗ್ರಹಣ ಮಾಡಿ ಕರಾರಾಗಿ ಈ ಮಾತನ್ನಾಡಿದನು: “ಶೋಭನೇ! ಒಂದು ಒಪ್ಪಂದದ ಮೇರೆಗೆ ನಾನು ನಿನ್ನ ಪಾಣಿಗ್ರಹಣ ಮಾಡಿಕೊಳ್ಳುತ್ತೇನೆ. ನೀನು ನನ್ನೊಡನೆ ಒಂದೇ ಒಂದು ರಾತ್ರಿಯನ್ನು ಕಳೆಯಬೇಕು.” ಹಾಗೆಯೇ ಆಗಲೆಂದು ಹೇಳಲು ಅವಳು ಅವನಿಗೆ ತನ್ನ ಕೈಯನ್ನಿತ್ತಳು. ಗಾಲವಿಯೂ ಕೂಡ ಅವಳ ಕೈಯನ್ನು ಹಿಡಿದುಕೊಂಡನು. ರಾತ್ರಿಯಲ್ಲಿ ಅವಳು ದಿವ್ಯಾಭರಣ ವಸ್ತ್ರಗಳನ್ನು ಧರಿಸಿ, ದಿವ್ಯ ಗಂಧಗಳನ್ನು ಲೇಪಿಸಿಕೊಂಡು ತರುಣಿಯೂ, ದೇವವರ್ಣಿನಿಯೂ ಆದಳು. ತನ್ನನ್ನೇ ಬೆಳಗಿಸುವಂತಿದ್ದ ಅವಳನ್ನು ನೋಡಿ ಗಾಲವಿಯು ಪ್ರೀತನಾಗಿ ಅವಳೊಂದಿಗೆ ಏಕಾಂತ ವಾಸವನ್ನು ಮಾಡಿದನು. ಬೆಳಗಾಗುತ್ತಲೇ ಅವಳು ಅವನಿಗೆ ಹೇಳಿದಳು: “ವಿಪ್ರ! ನೀನೇ ಮಾಡಿಕೊಂಡ ಒಪ್ಪಂದದಂತೆ ನಾನು ನಿನ್ನೊಡನೆ ವಾಸಿಸಿದ್ದೇನೆ. ನಿನಗೆ ಮಂಗಳವಾಗಲಿ. ನಾನಿನ್ನು ಹೊರಡುತ್ತೇನೆ.”

ಬೀಳ್ಕೊಂಡ ಅವಳು ಪುನಃ ಹೇಳಿದಳು: “ಈ ತೀರ್ಥದಲ್ಲಿ ಸಮಾಹಿತರಾಗಿ ದಿವೌಕಸರಿಗೆ ತರ್ಪಣಗಳನ್ನಿತ್ತು ಒಂದು ರಾತ್ರಿ ವಾಸಿಸುವವರಿಗೆ ಐವತ್ತೆಂಟು ವರ್ಷಗಳವರೆಗೆ ಬ್ರಹ್ಮಚರ್ಯವನ್ನು ಪಾಲಿಸಿದ ಫಲವು ದೊರೆಯುತ್ತದೆ.” ಹೀಗೆ ಹೇಳಿ ಆ ಸಾಧ್ವಿಯು ದೇಹವನ್ನು ತ್ಯಜಿಸಿ ಸ್ವರ್ಗಕ್ಕೆ ಹೋದಳು. ಋಷಿಯಾದರೋ ಅವಳ ರೂಪವನ್ನೇ ಸ್ಮರಿಸಿಕೊಳ್ಳುತ್ತಾ ದೀನನಾದನು. ಒಪ್ಪಂದದಂತೆ ಬಹಳ ಕಷ್ಟದಿಂದ ಅವಳ ತಪಸ್ಸಿನ ಅರ್ಧಫಲವನ್ನು ಸ್ವೀಕರಿಸಿದನು. ಅವಳ ರೂಪಬಲ ಮತ್ತು ಆಕರ್ಷಣೆಯ ದುಃಖದಿಂದ ಅವನು ತನ್ನನ್ನು ಕೂಡ ಸಾಧನೆಗೆ ತೊಡಗಿಸಿಕೊಂಡು ಅವಳ ದಾರಿಯಲ್ಲಿಯೇ ಹೋದನು.