ಮನೆ ಕಾನೂನು ಮಾಲೆಗಾಂವ್ ಸ್ಫೋಟ: ಪ್ರಕರಣದಿಂದ ಮುಕ್ತಗೊಳಿಸಲು ಸೇನಾಧಿಕಾರಿ ಪುರೋಹಿತ್ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ ನ್ಯಾಯಾಲಯ

ಮಾಲೆಗಾಂವ್ ಸ್ಫೋಟ: ಪ್ರಕರಣದಿಂದ ಮುಕ್ತಗೊಳಿಸಲು ಸೇನಾಧಿಕಾರಿ ಪುರೋಹಿತ್ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ ನ್ಯಾಯಾಲಯ

0

ಮಾಲೆಗಾಂವ್ ಸ್ಫೋಟ ಪ್ರಕರಣದಿಂದ ತಮ್ಮನ್ನು ಮುಕ್ತಗೊಳಿಸುವಂತೆ ಕೋರಿ ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಪುರೋಹಿತ್ ಸಲ್ಲಿಸಿದ್ದ ಮನವಿಯನ್ನು ಬಾಂಬೆ ಹೈಕೋರ್ಟ್ ಸೋಮವಾರ ತಿರಸ್ಕರಿಸಿದೆ.

ಅರ್ಜಿ ತಿರಸ್ಕರಿಸಿದ ನ್ಯಾಯಮೂರ್ತಿಗಳಾದ ಎ ಎಸ್ ಗಡ್ಕರಿ ಮತ್ತು ಪಿ ಡಿ ನಾಯ್ಕ್ ಅವರಿದ್ದ ಪೀಠ ಸ್ಫೋಟದ ಸಂಚು ರೂಪಿಸಿದ ಅಭಿನವ್ ಭಾರತ್ ಸಂಘಟನೆಯ ಸಭೆಗಳಲ್ಲಿ ಭಾಗವಹಿಸುವಾಗ ಪುರೋಹಿತ್  ಕರ್ತವ್ಯದ ಮೇಲೆ ತೆರಳಿರಲಿಲ್ಲ ಎಂದು ಹೇಳಿತು.

“ಅವರು ಕರ್ತವ್ಯದಲ್ಲಿ ಇಲ್ಲದಿರುವುದನ್ನು ಗಮನಿಸಿದ್ದೇವೆ. ಬಾಂಬ್ ಸ್ಫೋಟಕ್ಕೆ ಸಂಚು ರೂಪಿಸಿದ ಸಭೆಗಳಿಗೆ ಹಾಜರಾಗುವಂತೆ ಅವರನ್ನು ನಿಯೋಜಿಸಿರಲಿಲ್ಲ” ಎಂದು ಪೀಠ ಹೇಳಿತು.

ಸೇವೆ ಸಲ್ಲಿಸುತ್ತಿರುವ ಸೇನಾಧಿಕಾರಿಯನ್ನು ವಿಚಾರಣೆಗೆ ಒಳಪಡಿಸಲು ಕೇಂದ್ರ ಸರ್ಕಾರ ಸೂಕ್ತ ಅನುಮತಿ ಪಡೆಯದ ಹಿನ್ನೆಲೆಯಲ್ಲಿ ತಮ್ಮನ್ನು ಪ್ರಕರಣದಿಂದ ಮುಕ್ತಗೊಳಿಸಬೇಕು ಎಂದು ಕೋರಿದ್ದ ಪುರೋಹಿತ್ ಅವರ ಅರ್ಜಿಯನ್ನು ಕೆಳ ನ್ಯಾಯಾಲಯ ತಿರಸ್ಕರಿಸಿತ್ತು. ಈ ಆದೇಶ ಪ್ರಶ್ನಿಸಿ ಪುರೋಹಿತ್ ಅವರು ಬಾಂಬೆ ಹೈಕೋರ್ಟ್’ಗೆ ಮೇಲ್ಮನವಿ ಸಲ್ಲಿಸಿದ್ದರು. 

ಸೇವೆ ಸಲ್ಲಿಸುತ್ತಿರುವ ಸೇನಾಧಿಕಾರಿಯಾಗಿರುವ ಪುರೋಹಿತ್ ಅವರು ಅಭಿನವ್ ಭಾರತ್ ಎಂಬ ಗುಂಪಿನ ಸಭೆಗಳಲ್ಲಿ ಭಾಗವಹಿಸಿದ್ದರು ಎಂಬುದು ಬಹಿರಂಗಗೊಂಡ ನಂತರ ಪ್ರಕರಣದಲ್ಲಿ ಆರೋಪಿ ಎಂದು ಹೇಳಲಾಗಿತ್ತು.

ಪುರೋಹಿತ್ ಅವರು ತಮ್ಮನ್ನು ಪ್ರಕರಣದಿಂದ ಮುಕ್ತಗೊಳಿಸಲು ಕೋರಿದ್ದ ಅರ್ಜಿಯಲ್ಲಿ ಪ್ರಮುಖವಾಗಿ ಎರಡು ಅಂಶಗಳನ್ನು ಆಧರಿಸಿದ್ದರು. ತಾನು ಮೇಲಧಿಕಾರಿಗಳಿಗೆ ತಿಳಿಸಿದ ನಂತರವೇ ಸಭೆಗಳಿಗೆ ಹಾಜರಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ ಎನ್ನುವುದು ಮೊದಲ ಕಾರಣವಾದರೆ, ಎರಡನೆಯದು ತಾನು ಸೇವಾನಿರತ ಅಧಿಕಾರಿಯಾಗಿದ್ದರಿಂದ ಪ್ರಾಸಿಕ್ಯೂಷನ್ ಸಂಬಂಧಪಟ್ಟ ಅಧಿಕಾರಿಗಳಿಂದ ಅನುಮತಿ ಪಡೆಯಬೇಕಿತ್ತು. ಆದರೆ ಅವರು ಹಾಗೆ ಮಾಡಿಲ್ಲ ಎನ್ನುವುದಾಗಿತ್ತು.

ಹಿಂದಿನ ಲೇಖನವೃದ್ಧಕನ್ಯೆ
ಮುಂದಿನ ಲೇಖನಬೂತ್ ವಿಜಯ ಅಭಿಯಾನಕ್ಕೆ ಸಚಿವ ಕೆ.ಗೋಪಾಲಯ್ಯ ಚಾಲನೆ