ಕೆ.ಆರ್.ನಗರ (K.R.Nagara)-ಜೂನ್ 21 ರಂದು ಅಂತಾರಾಷ್ಟ್ರೀಯ ಯೋಗ ದಿನದಂದು ಮೈಸೂರಿಗೆ ಆಗಮಿಸುತ್ತಿರುವ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರಿಗೆ ವಿಧಾನಪರಿಷತ್ ಚುನಾವಣೆಯ ಗೆಲುವಿನ ಉಡುಗೊರೆ ನೀಡಬೇಕು. ಇದಕ್ಕಾಗಿ ಎಲ್ಲಾ ಪದವೀಧರರು ಬಿಜೆಪಿಯನ್ನು ಬೆಂಬಲಿಸಬೇಕು ಎಂದು ಸಚಿವರಾದ ಎಸ್.ಟಿ.ಸೋಮಶೇಖರ್ ಹೇಳಿದರು.
ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣೆ ನಿಮಿತ್ತ ಕೆ.ಆರ್.ನಗರ ತಾಲೂಕಿನ ವಿವಿಧೆಡೆ ಪ್ರಚಾರ ಸಭೆ ನಡೆಸಿ ಮೈ.ವಿ. ರವಿಶಂಕರ್ ಪರ ಮತಯಾಚಿಸಿದರು.
ವಿಧಾನಪರಿಷತ್ ನಲ್ಲಿ ಬಿಜೆಪಿಗೆ ಬಹುಮತ ಇಲ್ಲ. ಹೀಗಾಗಿ ಮಹತ್ವದ ಬಿಲ್ ಗಳು ಮೇಲ್ಮನೆಯಲ್ಲಿ ಪಾಸ್ ಆಗುತ್ತಿಲ್ಲ. ಈಗ ನಾಲ್ಕು ಜನ ವಿಧಾನಪರಿಷತ್ ಗೆ ಆಯ್ಕೆ ಆಗಿದ್ದಾರೆ. ರವಿಶಂಕರ್ ಕೂಡ ಆಯ್ಕೆ ಆದರೆ ಮೇಲ್ಮನೆಯಲ್ಲಿ ಬಿಜೆಪಿಗೆ ಬಹುಮತ ಸಿಗಲಿದೆ. ಜೊತೆಗೆ ಶಿಕ್ಷಕರು, ಪದವೀಧರರ ಸಮಸ್ಯೆಗಳಿಗೆ ಪರಿಹಾರ ಕೂಡ ಸಿಗಲಿದೆ ಎಂದರು.
2023ಕ್ಕೆ ಕೆ.ಆರ್.ನಗರದಲ್ಲಿ ಬಿಜೆಪಿ ಶಾಸಕರು ಆಯ್ಕೆ ಆಗುತ್ತಾರೆ. ಕಾಂಗ್ರೆಸ್, ಜೆಡಿಎಸ್ ಬಗ್ಗೆ ಮಾತನಾಡುವುದಿಲ್ಲ. ಆ ಪಕ್ಷಗಳ ಅಭ್ಯರ್ಥಿಗಳು ಇನ್ನೂ ಟೇಕಾಪ್ ಆಗಿಲ್ಲ. ಜೆಡಿಎಸ್ ಅಭ್ಯರ್ಥಿ ಬಗ್ಗೆ ಅವರದ್ದೇ ಪಕ್ಷದ ವಿಧಾನಪರಿಷತ್ ಸದಸ್ಯರು ಬಹಿರಂಗವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.
ಬಿಜೆಪಿ ಎಲ್ಲಾ ವರ್ಗದವರನ್ನು ಒಟ್ಟಿಗೆ ಕೊಂಡೊಯ್ಯುತ್ತದೆ ಎಂಬುದಕ್ಕೆ ಈಗ ನಾಲ್ವರು ವಿಧಾನಪರಿಷತ್ ಗೆ ಆಯ್ಕೆ ಆಗಿರುವುದೇ ಸಾಕ್ಷಿ. ಕಾರ್ಯಕರ್ತರು ಆಯ್ಕೆ ಮಾಡಿದ ಅಭ್ಯರ್ಥಿಗೆ ಬಿಜೆಪಿ ಟಿಕೆಟ್ ನೀಡಿದೆ. ಅವರನ್ನು ಗೆಲ್ಲಿಸಿ ಮೇಲ್ಮನೆಗೆ ಕಳುಹಿಸಿ ಎಂದರು.
ಶ್ರೀರಾಮ್ ಸಕ್ಕರೆ ಕಾರ್ಖಾನೆ ಪುನರಾರಂಭ ಸಂಬಂಧ ಎಲ್ಲಾ ಪ್ರಕ್ರಿಯೆಗಳು ಮುಕ್ತಾಯ ಹಂತದಲ್ಲಿದೆ. ಈ ಭಾಗದ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರ ಅವಿರತ ಪ್ರಯತ್ನ ಮಾಡುತ್ತಿದೆ ಎಂದರು.
ರವಿಶಂಕರ್ ಪರ ಪ್ರತಿಯೊಬ್ಬ ಕಾರ್ಯಕರ್ತರು ಇದ್ದಾರೆ. 1.40 ಲಕ್ಷ ಪದವೀಧರರ ನೋಂದಣಿ ಆಗಿದೆ. 60 ಸಾವಿರ ಮೈಸೂರು ಜಿಲ್ಲೆಯಲ್ಲಿ ನೋಂದಣಿ ಆಗಿದೆ. ಸಂಘಟನೆಯಿಂದ ಬಂದ ರವಿಶಂಕರ್ ಅವರಿಗೆ ಶಿಕ್ಷಣ ಮತ್ತು ಪದವೀಧರ ಕ್ಷೇತ್ರದ ಸಮಸ್ಯೆಗಳನ್ನು ಪ್ರಾಮಾಣಿಕವಾಗಿ ಬಗೆಹರಿಸಲಿದ್ದಾರೆ ಎಂದು ಹೇಳಿದರು.