ಬೆಂಗಳೂರು (Bengaluru): ವಿಧಾನ ಪರಿಷತ್‌ನ ವಾಯವ್ಯ ಮತ್ತು ದಕ್ಷಿಣ ಪದವೀಧರರ ಕ್ಷೇತ್ರಗಳು ಹಾಗೂ ವಾಯವ್ಯ ಮತ್ತು ಪಶ್ಚಿಮ ಶಿಕ್ಷಕರ ಕ್ಷೇತ್ರಗಳಿಗೆ ಸೋಮವಾರ ನಡೆದ ಚುನಾವಣೆಯ ಮತಗಳ ಎಣಿಕೆ ಕಾರ್ಯ ಇಂದು ಬೆಳಿಗ್ಗೆ 8 ಗಂಟೆಯಿಂದ ಆರಂಭವಾಗಿದೆ.
ಚುನಾವಣಾ ಕಣದಲ್ಲಿ ನಾಲ್ವರು ಮಹಿಳೆಯರು ಸೇರಿದಂತೆ 49 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ. ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಎಲ್ಲಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೆ. ವಾಯುವ್ಯ ಪದವೀಧರ ಕ್ಷೇತ್ರವೊಂದರಲ್ಲಿ ಮಾತ್ರ ಜೆಡಿಎಸ್ ಸ್ಪರ್ಧೆ ಮಾಡಿಲ್ಲ. 607 ಮತಗಟ್ಟೆಗಳಲ್ಲಿ 2,84,922 ಶಿಕ್ಷಕರು ಮತ್ತು ಪದವೀಧರರು ತಮ್ಮ ಹಕ್ಕು ಚಲಾಯಿಸಿದ್ದರು.
ಮತ ಎಣಿಕೆಗಾಗಿ ಚುನಾವಣಾ ಆಯೋಗ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಎಣಿಕೆ ಕೇಂದ್ರಗಳ ಸುತ್ತಮುತ್ತ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಮತಪತ್ರದಲ್ಲಿ ಚುನಾವಣೆ ನಡೆದಿದೆ. ಜತೆಗೆ ಪ್ರಾಶಸ್ತ್ಯದ ಮತಗಳನ್ನೂ ಎಣಿಕೆ ಮಾಡಬೇಕಾಗಿರುವುದರಿಂದ ಬುಧವಾರ ತಡರಾತ್ರಿ ಹೊತ್ತಿಗೆ ಪೂರ್ಣ ಫಲಿತಾಂಶ ಪ್ರಕಟವಾಗುವ ಸಾಧ್ಯತೆ ಇದೆ.
ಜುಲೈ 4ರಂದು ಬಿಜೆಪಿಯ ಹಣಮಂತ ನಿರಾಣಿ, ಜೆಡಿಎಸ್‌ನ ಕೆ.ಟಿ.ಶ್ರೀಕಂಠೇಗೌಡ, ಬಿಜೆಪಿಯ ಅರುಣ್ ಶಹಾಪುರ ಮತ್ತು ಮತ್ತು ಜೆಡಿಎಸ್ ನ ಬಸವರಾಜ ಹೊರಟ್ಟಿ ಅವರ ಅವಧಿ ಅಂತ್ಯಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಚುನಾವಣೆ ನಡೆದಿತ್ತು. ವಿಧಾನ ಪರಿಷತ್ ನಲ್ಲಿ ಬಹುಮತ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಆಡಳಿತರೂಢ ಬಿಜೆಪಿ ಸರ್ಕಾರಕ್ಕೆ ಈ ಚುನಾವಣೆ ಮಹತ್ವದಾಗಿದೆ. ಬಸವರಾಜ್ ಹೊರಟ್ಟಿ ಈ ಬಾರಿ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದಾರೆ.
ವಾಯವ್ಯ ಶಿಕ್ಷಕ ಕ್ಷೇತ್ರದ ಚುನಾವಣಾ ಕಣದಲ್ಲಿ ಅರುಣ ಶಹಪುರ (ಬಿಜೆಪಿ), ಪ್ರಕಾಶ್ ಹುಕ್ಕೇರಿ (ಕಾಂಗ್ರೆಸ್) ಮತ್ತು ಚಂದ್ರಶೇಖರ್ ಲೋಣ (ಜೆಡಿಎಸ್) ಇದ್ದಾರೆ. ಕ್ಷೇತ್ರ ಅಭ್ಯರ್ಥಿಗಳಾಗಿ ನಿಂಗಪ್ಪ ಬನ್ನೂರು,. ಶ್ರೀಕಾಂತ್ ಪಾಟೀಲ್, ಬಸಪ್ಪ ಮನಿಗಾರ, ಜಯಪಾಲ್ ದೇಸಾಯಿ, ಅಪ್ಪಾಸಾಹೇಬ್ ಕರುಣೆ, ಚಂದ್ರಶೇಖರ್ ಗಡಸಿ, ಸಂಗಮೇಶ್ ಚಿಕ್ಕನರಗುಂದ ಮತ್ತು ಶ್ರೇಣೀಕ್ ಜಾಂಗಟೆ ಕಣದಲ್ಲಿದ್ದಾರೆ.
ದಕ್ಷಿಣ ಪದವೀಧರರ ಕ್ಷೇತ್ರದಲ್ಲಿ ಬಿಜೆಪಿಯಿಂದ ಮಾಜಿ ಎಂಎಲ್ ಸಿ ಎಂವಿ ರವಿಶಂಕರ್, ಕಾಂಗ್ರೆಸ್ ನಿಂದ ಮಧು ಜಿ ಮಾದೇಗೌಡ ಮತ್ತು ಜೆಡಿಎಸ್ ನಿಂದ ಎಚ್ ಕೆ ರಾಮು ಕಣದಲ್ಲಿದ್ದಾರೆ. ಇಂದು ಮತ ಎಣಿಕೆ ಪೂರ್ಣಗೊಂಡು ತಡರಾತ್ರಿ ಹೊತ್ತಿಗೆ ಫಲಿತಾಂಶ ಹೊರಬರುವ ನಿರೀಕ್ಷೆಯಿದೆ.
ದಕ್ಷಿಣ ಪದವೀಧರರ ಕ್ಷೇತ್ರ:
ದಕ್ಷಿಣ ಪದವೀಧರರ ಕ್ಷೇತ್ರದ ಮತ ಎಣಿಕೆ ಕಾರ್ಯ ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ನಡೆಯಲಿದೆ.
ಒಟ್ಟು 28 ಟೇಬಲ್ ಗಳ ಅಳವಡಿಕೆ ಮಾಡಲಾಗಿದ್ದು ಪ್ರತಿ ಟೇಬಲ್ ಗೂ ಇಬ್ಬರು ಮೇಲ್ವಿಚಾರಕರು, ಇಬ್ಬರು ಸಹಾಯಕರಂತೆ 90 ಸಿಬ್ಬಂದಿ ನೇಮಕ ಮಾಡಲಾಗಿದೆ. 245 ಅಂಚೆ ಮತಗಳು ಇದೆ. ಈ ಪೈಕಿ ಎಷ್ಟು ಚಲಾವಣೆ ಆಗಿದೆ ಎಂದು ತಿಳಿದು ಬರಲಿದೆ.
ಅಭ್ಯರ್ಥಿಗಳ ಪರವಾಗಿ ಟೇಬಲ್ ಗೆ ಒಬ್ಬರಂತೆ ಏಜೇಂಟ್ ಗಳನ್ನು ನೇಮಕಗೊಳಿಸಲಾಗಿದೆ. ಮತ ಎಣಿಕೆ ಕಾರ್ಯಕ್ಕೆ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದು, ಒಟ್ಟು 158 ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಮೊದಲ ಹಂತದಲ್ಲಿ ಮತಗಳನ್ನ ಬಂಡಲ್ ಗಳನ್ನಾಗಿ ಮಾಡಿ 25ರಂತೆ ಬೇರ್ಪಡಿಸಲಾಗುವುದು.
ಮತ ಎಣಿಕೆ ಕೇಂದ್ರದಲ್ಲಿ ಬಿಗಿ ಪೊಲೀಸ್ ಬಂದೂಬಸ್ತ್ ಮಾಡಲಾಗಿದ್ದು, ಭದ್ರತೆಗಾಗಿ 158 ಮಂದಿ ಪೊಲೀಸ್ ನಿಯೋಜನೆ ಮಾಡಲಾಗಿದೆ. ಮೂವರು ಎಸಿಪಿ, 8 ಪಿ ಐ, 12 ಪಿ ಎಸ್ ಐ, 15 ಎ ಎಸ್ ಐ, 75 ಹೆಚ್ ಸಿ \ಪಿ ಸಿ, 15 ಮಹಿಳಾ ಪಿ ಸಿ, 10 ಕೆ ಎಸ್ ಆರ್ ಪಿ, 20 ಸಿ ಎ ಆರ್ ಸಿಬ್ಬಂದಿ ನೇಮಕ ಮಾಡಲಾಗಿದೆ.