ಮನೆ ರಾಜಕೀಯ ಮಾಂಸಹಾರಿಗಳು ನಮ್ಮ ಪಕ್ಷಕ್ಕೆ ಓಟು ಹಾಕಬೇಡಿ ಎಂದು ಬಿಜೆಪಿಯವರು ಹೇಳಲಿ: ದಿನೇಶ್ ಗುಂಡೂರಾವ್

ಮಾಂಸಹಾರಿಗಳು ನಮ್ಮ ಪಕ್ಷಕ್ಕೆ ಓಟು ಹಾಕಬೇಡಿ ಎಂದು ಬಿಜೆಪಿಯವರು ಹೇಳಲಿ: ದಿನೇಶ್ ಗುಂಡೂರಾವ್

0

ಬೆಂಗಳೂರು(Bengaluru): ಮಾಂಸಹಾರ ತಿನ್ನುವುದು ತಪ್ಪಾದರೆ, ಮಾಂಸಹಾರಿಗಳು‌ ನಮ್ಮ ಪಕ್ಷಕ್ಕೆ ಓಟು ಹಾಕುವುದು ಬೇಡ ಎಂದು ಬಿಜೆಪಿಯವರು ಹೇಳಲಿ. ಹೀಗೆ ಹೇಳುವ ತಾಕತ್ತು ಬಿಜೆಪಿಯವರಿಗಿದೆಯೇ ಎಂದು ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.

ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾಂಸಾಹಾರ ಸೇವಿಸಿ ದೇಗುಲ ಪ್ರವೇಶಿಸಿದ್ದಾರೆ ಎಂಬ ಆರೋಪ ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು ಸರಣಿ ಟ್ವೀಟ್ ಮಾಡುವ ಮೂಲಕ ಬಿಜೆಪಿ ಶಾಸಕ ಸಿ.ಟಿ. ರವಿ ಹಾಗೂ ಸಂಸದ ಪ್ರತಾಪ್ ಸಿಂಹ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಚಿಕ್ಕಮಗಳೂರು, ಕೊಡಗು ಮತ್ತು ಹಾಸನದ ಸಕಲೇಶಪುರದಲ್ಲಿ‌‌ ಮದುವೆಯ ದಿನವೇ ಮಾಂಸಹಾರ ಮಾಡುತ್ತಾರೆ. ಅದು ಅವರ ಆಹಾರ ಪದ್ದತಿ. ಇನ್ನು ಮಲೆನಾಡಿನ ಕೆಲವು ಕಡೆ ಎಲ್ಲಾ ಹಬ್ಬಗಳಿಗೂ ಮಾಂಸಹಾರ ಮಾಡುತ್ತಾರೆ. ಸಿ.ಟಿ. ರವಿ ಮತ್ತು ಪ್ರತಾಪ ಸಿಂಹ ಮಲೆನಾಡಿನವರು.  ಗಣೇಶನ ಹಬ್ಬದ ದಿವಸ ಅವರ ಭಾಗದಲ್ಲಿ ಮಾಂಸಹಾರ ಮಾಡುವುದನ್ನು ಅವರು ನಿರಾಕರಿಸುತ್ತಾರೆಯೇ  ಎಂದು ಪ್ರಶ್ನಿಸಿದ್ದಾರೆ.

ಬೇಡರ ಕಣ್ಣಪ್ಪ ಶಿವಲಿಂಗಕ್ಕೆ ಮಾಂಸದ ನೈವೇದ್ಯ ಇಟ್ಟ. ಶಿವ ಕಣ್ಣಪ್ಪನಿಗೆ ಒಲಿಯಲಿಲ್ಲವೇ? ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ, ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ, ತನ್ನ ಬಣ್ಣಿಸಬೇಡ, ಇದಿರ ಹಳಿಯಲುಬೇಡ, ಇದೇ ಅಂತರಂಗ-ಶುದ್ಧಿ, ಇದೇ ಬಹಿರಂಗ-ಶುದ್ಧಿ, ಇದೇ ಕೂಡಲಸಂಗಮನೊಲಿಸುವ ಪರಿ! ಎಂದಿದ್ದಾರೆ ಬಸವಣ್ಣ ಎಂದು ಮತ್ತೊಂದು ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಮಾಂಸಹಾರ ಸೇವನೆಗೆ ಸಂಬಂಧಿಸಿದಂತೆ ಬಿಜೆಪಿಯವರು ಕೀಳು ರಾಜಕಾರಣ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಆಗಲಿ ಅಥವಾ ಇನ್ಯಾರೇ ಆಗಿರಲಿ ಏನನ್ನು ತಿನ್ನಬೇಕು? ಏನನ್ನು ತಿನ್ನಬಾರದು ಎಂದು ಬಿಜೆಪಿಯವರು ನಿರ್ಧರಿಸಬೇಕೇ? ನಮ್ಮ ಆಹಾರ, ನಮ್ಮ ಹಕ್ಕು. ಇದನ್ನು ಕೇಳಲು ಬಿಜೆಪಿಯವರಿಗೆ ಅಧಿಕಾರ ಕೊಟ್ಟವರು ಯಾರು? ಊಟ ತನ್ನಿಚ್ಛೆ, ನೋಟ ಪರರಿಚ್ಛೆ ಅಲ್ಲವೇ? ಭಕ್ತಿ ಶುದ್ಧವಾಗಿರಬೇಕು  ಎಂದು ಪ್ರತಿಪಾದಿಸಿದ್ದಾರೆ.

ಸಿದ್ದರಾಮಯ್ಯ ಕಂಡರೆ ಬಿಜೆಪಿಯವರಿಗೆ ನವರಂಧ್ರಗಳಲ್ಲೂ ನಡುಕ ಶುರುವಾಗಿದೆ. ಹಾಗಾಗಿ ಅವರು ಏನು ತಿನ್ನುತ್ತಾರೆ, ಏನು ಉಡುತ್ತಾರೆ ಎಂದು ವಿವಾದ ಸೃಷ್ಟಿಸಿ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಹಿಂದಿನ ಲೇಖನಸಿಇಟಿ ಗೊಂದಲ: ತೀರ್ಪು ಕಾಯ್ದಿರಿಸಿದ ಹೈಕೋರ್ಟ್‌
ಮುಂದಿನ ಲೇಖನಸಂವಿಧಾನ್‌ ಫೆಲೋಶಿಪ್‌: ಅರ್ಜಿ ಸಲ್ಲಿಕೆ ಅವಧಿ ಸೆ.5ರ ವರೆಗೆ ವಿಸ್ತರಣೆ