ಮೈಸೂರು; ಮಾನವನ ಜೀವನದ ಜೊತೆಗೆ ಪಶುಗಳ ಸಾಕಾಣೆ ಹಾಗೂ ಹೈನುಗಾರಿಕೆ ಒಂದಕ್ಕೊಂದು ಬೆಸದುಕೊಂಡಿದೆ. ರಾಷ್ಟ್ರದ ಉತ್ಪಾದನೆಗೆ ಹೈನುಗಾರಿಕೆ ಇನ್ನೂ ಹೆಚ್ಚಿನ ಕೊಡುಗೆ ನೀಡುವಂತಾಗಲಿ ಎಂದು ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ ಅವರು ತಿಳಿಸಿದರು.
ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಮತ್ತು ಕರ್ನಾಟಕ ಪಶುವೈದ್ಯಕೀಯ ಸಂಘದ ವತಿಯಿಂದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಘಟಿಕೋತ್ಸವ ಭವನದಲ್ಲಿ ಶನಿವಾರ ಆಯೋಜಿಸಿದ್ದ “ಪಶುವೈದ್ಯರ ರಾಜ್ಯ ಮಟ್ಟದ ತಾಂತ್ರಿಕ ವಿಚಾರ ಸಂಕಿರಣ ಹಾಗೂ 6ನೇ ಸುತ್ತಿನ ಕಾಲುಬಾಯಿಜ್ವರ ಲಸಿಕಾ ಕಾರ್ಯಕ್ರಮ” ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪಶುಪಾಲನೆಯಿಂದ ಶೇ5 ರಷ್ಟು ಜಿಡಿಪಿ ವೃದ್ಧಿಯಾಗುತ್ತಿರುವುದು ಪ್ರಶಂಸೆಯ ವಿಚಾರ. ಹೆಣ್ಣು ಕರುಗಳೇ ಜನಿಸುವಂತೆ ಗರ್ಭ ಧರಿಸುವಷ್ಟು ತಂತ್ರಜ್ಞಾನ ಮುಂದುವರೆದಿದೆ. ಸಂತಾನಾಭಿವೃದ್ಧಿಯ ಜೊತೆಗೆ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಬೇಕು ಎಂದು ಹೇಳಿದರು.
ಕೃಷಿ ಕ್ಷೇತ್ರದಲ್ಲಿ ಪಶುಗಳಿಗಿಂತ ಯಂತ್ರದ ಬಳಕೆ ಹೆಚ್ಚಾಗಿದೆ. ಪ್ರಾಣಿಗಳ ಗೊಬ್ಬರವನ್ನು ಹೆಚ್ಚು ಬಳಸದೆ, ರಾಸಾಯನಿಕದ ಮೊರೆ ಹೋಗಲಾಗುತ್ತದೆ. ಇದು ಮನುಷ್ಯನ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ಆದಷ್ಟು ಈ ಕ್ರಮವನ್ನು ತಡೆಗಟ್ಟುವಂತೆ ಜಾಗೃತಿ ಮೂಡಿಸಬೇಕು ಎಂದರು.
ಟಿಪ್ಪು ಸುಲ್ತಾನ್ ಕೂಡ ಹಳ್ಳಕಾರ್ ತಳಿಗಳ ಬೆಳವಣಿಗೆಗೆ ಕೊಡುಗೆ ನೀಡಿದ್ದಾರೆ. ನಮ್ಮ ದೊಡ್ಡಪ್ಪ ಏನೂ ಓದಿರಲಿಲ್ಲ. ಅವರು ಕೂಡ ಊರಿನಲ್ಲಿ ಅನಾರೋಗ್ಯಕ್ಕೆ ತುತ್ತಾದ ಪಶುಗಳಿಗೆ ಔಷಧಿ ನೀಡುತ್ತಿದ್ದರು. ಆದರೆ ಇಂದು ವೈಜ್ಞಾನಿಕತೆ ಪರಿಣಾಮಕಾರಿಯಾಗಿ ಬೆಳೆದಿದೆ ಎಂದು ಹೇಳಿದರು.
ಪಶುಸಂಗೋಪನೆ ಸಚಿವರಾದ ಕೆ.ವೆಂಕಟೇಶ್ ಅವರು ಮಾತನಾಡಿ, ಮನುಷ್ಯರಿಗೆ ಕಷ್ಟ ಬಂದರೆ ಹೇಳಿಕೊಳ್ಳುತ್ತಾರೆ. ಆದರೆ ಪ್ರಾಣಿಗಳಿಗೆ ಖಾಯಿಲೆ ಬಂದರೆ ನಾವೇ ಅರ್ಥಮಾಡಿಕೊಂಡು ಚಿಕಿತ್ಸೆ ನೀಡಬೇಕಾಗುತ್ತದೆ. ಈ ಕಾರಣದಿಂದ ಬಹಳ ಜವಾಬ್ದಾರಿ ಇರುವ ಇಲಾಖೆ ಇದಾಗಿದೆ ಎಂದರು.
ಖಾಸಗಿ ಪಶುವೈದ್ಯ ಕಾಲೇಜು ಪ್ರಾರಂಭಿಸಲು ಮನವಿ ಬಂದಿತ್ತು. ಆದರೆ ಮುಖ್ಯಮಂತ್ರಿಗಳ ಸೂಚನೆಯಂತೆ ಅನುಮತಿ ನೀಡದೆ, ಸರ್ಕಾರದಿಂದ ನೂತನವಾಗಿ ಎರಡು ಕಾಲೇಜು ಸ್ಥಾಪಿಸಲು ನಿರ್ಧಿರಿಸಲಾಗಿದೆ ಎಂದು ತಿಳಿಸಿದರು.
ಇಲಾಖೆಯಲ್ಲಿರುವ ಕೊರತೆಗಳನ್ನು ಸರಿಪಡಿಸಬೇಕೆಂಬ ನಿಟ್ಟಿನಲ್ಲಿ 400 ಮಂದಿ ಪಶುವೈದ್ಯರನ್ನು ನೇಮಕಾತಿ ಮಾಡಲಾಗುತ್ತಿದೆ. ಅಲ್ಲದೆ, 700 ಮಂದಿ ‘ಡಿ’ ಗ್ರೂಪ್ ನೌಕರರ ನೇಮಕಕ್ಕೂ ಅನುಮತಿ ನೀಡಲಾಗಿದೆ. ಇಲಾಖೆಯಲ್ಲಿ ನ್ಯೂನ್ಯತೆ ಹಾಗೂ ಕೊರತೆಯನ್ನು ಸರಿಪಡಿಸಲು ಸರ್ಕಾರ ಬದ್ದವಿದೆ. ಸಂಘದಿಂದ ನೀಡಿರುವ ಬೇಡಿಕೆಯನ್ನು ಈಡೇರಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.
ಕಾಲುಬಾಯಿಜ್ವರದ ಲಸಿಕೆಯನ್ನು ತಿಂಗಳಳೊಳಗೆ ಎಲ್ಲಾ ರಾಸುಗಳಿಗೆ ನೀಡಬೇಕು. ರೈತರು ಲಭ್ಯವಿರುವ ಮುಂಜಾನೆ ಸಮಯದಲ್ಲಿ ತೆರಳಿ ಲಸಿಕೆ ಕಾರ್ಯ ಕೈಗೊಳ್ಳಬೇಕು. ರೈತರಿಂದ ಕೆಲವು ದೂರುಗಳು ಬರುತ್ತವೆ. ತಕ್ಷಣವೇ ಸ್ಪಂದಿಸುವ ಕೆಲಸವನ್ನು ವೈದ್ಯರು ಮಾಡಬೇಕು. ರೈತರಿಗೆ ಯಾವುದೇ ಕಾರಣಕ್ಕೂ ತೊಂದರೆ ಉಂಟಾಗಬಾರದು ಎಂದು ಸೂಚಿಸಿದರು.
ಕಾರ್ಯಕ್ರಮದಲ್ಲಿ ಶಾಸಕರಾದ ಹರೀಶ್ ಗೌಡ, ವಿಧಾನ ಪರಿಷತ್ ಸದಸ್ಯರಾದ ಸಿ.ಎನ್.ಮಂಜೇಗೌಡ, ಆಯುಕ್ತರಾದ ರೂಪ, ನಿರ್ದೇಶಕ ಮಂಜುನಾಥ್ ಪಾಳೇಗಾರ್, ಜಂಟಿ ನಿರ್ದೇಶಕ ಶಿವಣ್ಣ, ಉಪ ನಿರ್ದೇಶಕ ನಾಗರಾಜು ಹಾಗೂ ಡಾ.ವೈ.ಡಿ.ರಾಜಣ್ಣ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.