ಭಕ್ತಿಪ್ರಧಾನ ಚಿತ್ರ ಎಂದ ಮೇಲೆ ಅಲ್ಲಿ ದೇವರ ಶಕ್ತಿ, ದುಷ್ಟರನ್ನು ಸಂಹರಿಸಿ ಭಕ್ತರನ್ನು ರಕ್ಷಿಸುವ ರೀತಿ, ಕಷ್ಟ ಎಂದು ಬಂದವರ ಕೈ ಹಿಡಿಯುವ ಮಾರ್ಗಗಳು ಇರುತ್ತವೆ. ಈ ವಾರ ತೆರೆಕಂಡಿರುವ “ಸಿಂಹರೂಪಿಣಿ’ ಕೂಡಾ ಇಂತಹ ಅಂಶಗಳೊಂದಿಗೆ ಮೂಡಿಬಂದಿದೆ. ಇಲ್ಲಿ ರಾಕ್ಷಸರನ್ನು ಸಂಹಾರ ಮಾಡಲು ಪಾರ್ವತಿದೇವಿ ಏಳು ಅವತಾರಗಳಲ್ಲಿ ಬರುತ್ತಾಳೆ. ಅದರಲ್ಲಿ ಕೊನೆಯ ಅವತಾರ ಮಾರಮ್ಮ ದೇವಿ. ಇಂತಹ ಮಾರಮ್ಮ ದೇವಿ ಮಾರಮ್ಮ ಯರಪ್ಪನ ಹಳ್ಳಿಗೆ ಬರಲು ಕಾರಣವೇನು ಸೇರಿದಂತೆ ಹಲವು ಕುತೂಹಲಕರ ಅಂಶದೊಂದಿಗೆ ಈ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ.
ಭಕ್ತಿಪ್ರಧಾನ ಚಿತ್ರವಾದರೂ ಇಲ್ಲೊಂದು ಲವ್ ಸ್ಟೋರಿಯೂ ಇದೆ. ಆದರೆ ಅದು ಸಿನಿಮಾದಿಂದ ಹೊರತಾಗಿ ಕಾಣುವುದಿಲ್ಲ. ಪ್ರೀತಿ ಸನ್ನಿವೇಶಗಳು ಇದ್ದರೂ, ಇಬ್ಬರನ್ನು ದೇವಿಯ ಭಕ್ತರೆಂದು ಬಿಂಬಿಸಲಾಗಿದೆ. ಚಿತ್ರದಲ್ಲಿ ಊರ ಗೌಡನ ಸಂಚು, ದೇವಿಯ ಶಕ್ತಿಯನ್ನು ಮನಮುಟ್ಟುವಂತೆ ಕಟ್ಟಿಕೊಡಲಾಗಿದೆ.
ಕಿನ್ನಾಳ್ ರಾಜ್ ಸಂಭಾಷಣೆ, ಸಾಹಿತ್ಯ ಬರೆದು ನಿರ್ದೇಶನ ಮಾಡಿದ್ದು, ಅಚ್ಚುಕಟ್ಟಾಗಿ ಸಿನಿಮಾ ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ. ನಾಯಕಿಯಾಗಿ ಅಂಕಿತಾ ಗೌಡ ನಟಿಸಿದ್ದಾರೆ. ಮಾರಮ್ಮ ದೇವಿಯಾಗಿ ಯಶಸ್ವಿನಿ ಸುಬ್ಬೆಗೌಡ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಉಳಿದಂತೆ ಸುಮನ್, ಹರೀಶ್, ವಿಜಯ್ ಚೆಡೂರು, ತಬಲ ನಾಣಿ, ದಿವ್ಯಾಆಲೂರು, ಸಾಗರ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಭಕ್ತಿಪ್ರಧಾನ ಚಿತ್ರಗಳ ವೈಭವವನ್ನು ತೆರಮೇಲೆ ನೋಡಬಯಸುವವರು ಸಿಂಹರೂಪಿಣಿಯತ್ತ ಮುಖ ಮಾಡಬಹುದು.