ಬೆಂಗಳೂರು: ಕೇಂದ್ರ ಸರ್ಕಾರದ ಅಧೀನದಲ್ಲಿ ಬರುವ ಹೆಚ್‌ಎಂಟಿಯಿಂದ 5 ಎಕರೆ ಅರಣ್ಯ ಭೂಮಿಯನ್ನು ರ್ನಾಟಕ ಅರಣ್ಯ ಇಲಾಖೆ ವಶಪಡಿಸಿಕೊಂಡಿರುವುದಕ್ಕೆ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಹೆಚ್ ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಹೆಚ್‌ಎಂಟಿಯಿಂದ ಭೂಮಿ ಮರುವಶ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ನಾನು ಕರ್ನಾಟಕ ಅರಣ್ಯ ಸಚಿವ ಈಶ್ವರ್ ಖಂಡ್ರೆಗೆ ಹೇಳುವುದು ಇಷ್ಟೇ, ಕೋಲಾರದಲ್ಲಿ ಸಸಿ ನೆಡುವುದಕ್ಕೆ ಹೋಗಿದ್ದಾರೆ. ಮೊದಲು ಶ್ರೀನಿವಾಸಪುರದಲ್ಲಿ ಒಬ್ಬ ಮಾಜಿ ಸ್ವೀಕರ್ ಸುಮಾರು ನೂರಾರು ಎಕರೆ ಅರಣ್ಯ ಭೂಮಿಯನ್ನು ಲೂಟಿ ಹೊಡೆದಿದ್ದಾರೆ. ಅದನ್ನು ಮೊದಲು ಮರುವಶಪಡಿಸಿಕೊಳ್ಳಲಿ ಎಂದರು.
ತೀರ್ಪು ಬಂದಿರುವುದನ್ನೆಲ್ಲ ಕುರ್ಚಿ ಕೆಳಗೆ ಇಟ್ಟುಕೊಂಡು ಕುಳಿತಿದ್ದಾರೆ. ಮೊದಲು ಅದನ್ನು ನೋಡಲು ಹೇಳಿ. ಎಷ್ಟು ಏಕರೆ ಲೂಟಿಯಾಗಿದೆ ಅಲ್ಲಿ? ಅದರ ಬಗ್ಗೆ ಚರ್ಚೆ ಮಾಡಿದ್ದೀರಾ? ಇಲ್ಲಿ ಕೋರ್ಟ್ ಇದೆ. ಅಲ್ಲಿ ಪೋಲೀಸ್, ಅರಣ್ಯ ಇಲಾಖೆಯವರು ಬಲವಂತವಾಗಿ ಹೋಗಿ ಬೇಲಿ ಹಾಕಿರಬಹುದು. ಅಂತಿಮವಾಗಿ ನ್ಯಾಯಾಲಯದ ತೀರ್ಪುಗಳಿಗೆ ತಲೆಬಾಗಬೇಕಾಗುತ್ತದೆ ಎಂದು ಹೇಳಿದರು.
ಕೇತಗಾನಹಳ್ಳಿ ಭೂ ಒತ್ತುವರಿ ವಿವಾದ ವಿಚಾರವಾಗಿ ಸರ್ಕಾರ ತನಿಖೆಗೆ ಮುಂದಾಗಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಈ ಬಗ್ಗೆ ಕಳೆದ ನಲವತ್ತು ವರ್ಷಗಳಿಂದ ನಡೆಯುತ್ತಿದೆ. ಹಲವು ಹೈಕೋರ್ಟ್ ಆದೇಶಗಳ ಮೇರೆಗೆ ದಾಖಲೆ ನೋಡಿ, ಸರ್ವೆ ಮಾಡಿ ಸುಸ್ತಾಗಿದ್ದಾರೆ. ಕೇತಗಾನಹಳ್ಳಿಯಲ್ಲಿ ಯಾವುದೇ ಒತ್ತುವರಿ ಮಾಡಿದ್ದರೆ ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಲಿ, ನಮ್ಮ ಆಕ್ಷೇಪ ಏನಿಲ್ಲ. ಅಲ್ಲಿ 1980 ರಲ್ಲಿ ಪ್ರಾರಂಭವಾಗಿರುವುದು ಇನ್ನೂ ನಿಂತಿಲ್ಲ. ಸರ್ಕಾರಕ್ಕೆ ಮರ್ಯಾದೆ ಬೇಡವಾ? ಇದು ಕಷ್ಟಪಟ್ಟು ಬೆವರು ಸುರಿಸಿ ಸಂಪಾದಿಸಿದ ಆಸ್ತಿ. ಇನ್ನೊಬ್ಬರ ಥರ ಕಳ್ಳ ಬೇಲಿ ಹಾಕಿಕೊಂಡು ಪಡೆದಿರುವುದಲ್ಲ. ಸರ್ಕಾರ ಯಾವ ತರಹ ಬೇಕಾದರೂ ತನಿಖೆ ಮಾಡಿಕೊಳ್ಳಲಿ, ನಾನು ಸಿದ್ಧವಾಗಿ ಇದ್ದೇನೆ ಎಂದರು.
ಕುಮಾರಸ್ವಾಮಿ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಹೆಚ್ಎಂಟಿ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳುವುದಾಗಿ ಘೋಷಿಸಿದ್ದರು. ಅಲ್ಲದೆ, ಹೆಚ್ಎಂಟಿ ಪರ ಹಲವು ನಿಲುವುಗಳನ್ನೂ ತೆಗೆದುಕೊಂಡಿದ್ದರು. ಮಗ ನಿಖಿಲ್ ಕುಮಾರಸ್ವಾಮಿಗೆ ಹೆಚ್ಎಂಟಿ ವಾಚ್ ಅನ್ನೇ ಉಡುಗೊರೆ ನೀಡಿದ್ದರು. ಅಲ್ಲದೆ, ರಾಜ್ಯದ ಹೆಮ್ಮೆಯ ಬ್ರ್ಯಾಂಡ್ ಆಗಿರುವ ಹೆಚ್ಎಂಟಿ ವಾಚ್ಗಳನ್ನೇ ಉಡುಗೊರೆ ನೀಡುವಂತೆ ಪಕ್ಷದ ಶಾಸಕರು, ಸಂಸದರಿಗೆ ಕರೆ ನೀಡಿದ್ದರು.