ಇತ್ತೀಚೆಗೆ ಜೈಲಿನಿಂದ ಬಿಡುಗಡೆಯಾಗಿದ್ದ ನಟ ಚೇತನ್ ಅಹಿಂಸಾ ತನಗೆ ಜೀವ ಬೆದರಿಕೆ, ಅಭದ್ರತೆ ಇರುವ ಹಿನ್ನೆಲೆಯಲ್ಲಿ ಸರ್ಕಾರದಿಂದ ಗನ್‌ಮ್ಯಾನ್ ನೀಡಲು ಗೃಹ ಸಚಿವ ಆರಗ ಜ್ಞಾನೇಂದ್ರಗೆ ಮನವಿ ಮಾಡಿದ್ದಾರೆ.
ನಂತರ ಮಾತನಾಡಿದ ಚೇತನ್, ‘‘ಗೌರಿ ಲಂಕೇಶ್ ಹತ್ಯೆಯಾದ ಬಳಿಕ ನನಗೆ ನಾಲ್ಕು ವರ್ಷದಿಂದ ಗನ್ ಮ್ಯಾನ್ ಕೊಟ್ಟಿದ್ದರು. ಆದರೆ ಮೊನ್ನೆ ಜೈಲಿಗೆ ಹೋದ ಬಳಿಕ ವಾಪಸ್ ಪಡೆದುಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಬೆದರಿಕೆ ಬರುತ್ತಲೇ ಇದೆ. ಕೋಮುವಾದದ ಪರ ಮಾತನಾಡುವ ಜನಪ್ರತಿನಿಧಿಗಳಿಗೆ ಗನ್ ಮ್ಯಾನ್ ಪ್ರೊಟೆಕ್ಷನ್ ಕೊಡುತ್ತಾರೆ. ಆದರೆ ಸತ್ಯ ವಾಸ್ತವ ಹೇಳುವ ನಮಗೆ ಗನ್ ಮ್ಯಾನ್ ಪ್ರೊಟೆಕ್ಷನ್ ಇಲ್ಲ. ಹೀಗಾಗಿ ಗೃಹ ಸಚಿವರಿಗೆ ಮನವಿ ಮಾಡಿಕೊಂಡಿದ್ದೇನೆ’’ ಎಂದು ಚೇತನ್ ಹೇಳಿದ್ದಾರೆ.
ಇತ್ತೀಚೆಗೆ ಅವರು ಮಾಡಿದ್ದ ಟ್ವೀಟ್ವೊಂದು ವಿವಾದಕ್ಕೆ ಎಡೆಮಾಡಿಕೊಟ್ಟಿತ್ತು. ನ್ಯಾಯಾಧೀಶರನ್ನು ನಿಂದಿಸಿ ಟ್ವೀಟ್ ಮಾಡಿದ ಆರೋಪದಡಿ ಬಂಧನಕ್ಕೊಳಗಾಗಿದ್ದ ನಟ ಚೇತನ್ಗೆ ಫೆಬ್ರವರಿ 28ರಂದು ಪರಪ್ಪನ ಅಗ್ರಹಾರದಿಂದ ಹೊರ ಬಂದಿದ್ದರು. ನಟ ಚೇತನ್ ಮಾಡಿದ್ದ ಟ್ವೀಟ್‌ನಲ್ಲಿ ಆಕ್ಷೇಪಾರ್ಹ ಅಂಶಗಳು ಇದೆ ಎನ್ನುವ ಆರೋಪದ ಮೇಲೆ ಚೇತನ್ ಬಂಧನಕ್ಕೆ ಒಳಗಾಗಿದ್ದರು.
ನಂತರ ಚೇತನ್ ಅವರ ಪತ್ನಿ ಮೇಘಾ ಫೇಸ್ ಬುಕ್ ಲೈವ್ ಬಂದು, ಪೊಲೀಸರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದರು. ಯಾವುದೇ ಮಾಹಿತಿ ನೀಡದೆ, ಅಪಹರಣದ ರೀತಿಯಲ್ಲಿ ಪತಿಯನ್ನು ಕರೆದೊಯ್ಯಲಾಗಿದೆ ಎಂದು ಆರೋಪಿಸಿದ್ದರು.
ಗೃಹ ಮಂತ್ರಿಗೆ ಮನವಿ ಮಾಡಿದ ಬಳಿಕ ಮಾಧ್ಯಮದವರೊಂದಿಗೆ ನಟ ಚೇತನ್ ಮಾತನಾಡಿದ್ದಾರೆ. ನನಗೆ ಕಳೆದ ಕೆಲ ವರ್ಷಗಳಿಂದ ಬೆದರಿಕೆ ಕರೆಗಳು ಬರುತ್ತಲೆ ಇದೆ. ಇವಾಗ ಅದು ಹೆಚ್ಚಾಗಿದೆ. ‘ಯಾರಿಂದ ಈ ಕರೆಗಳು ಬರಿತ್ತಿದೆ ಎಂದು ಗೊತ್ತಾಗುತ್ತಿಲ್ಲ. ಇಂಥದ್ದೇ ಮೂಲದಿಂದ ಎನ್ನಲಾಗುವುದಿಲ್ಲ. ಸಾಮಾಜಿಕ ಜಾಲತಾಣಗಳಿಂದ ಸೇರಿದಂತೆ ಹಲವೆಡೆಯಿಂದ ಬರುತ್ತದೆ. ಇದರ ಒಂದು ಪಟ್ಟಿಯನ್ನು ನೀಡಿದ್ದೇನೆ’ ಎಂದಿದ್ದಾರೆ ಚೇತನ್.