ಮನೆ ಸುದ್ದಿ ಜಾಲ ನಿರ್ಮಲಾನಂದ ಶ್ರೀಗಳ ಬಗ್ಗೆ ಹಗುರ ಮಾತು: ಅಡ್ಡಂಡ ಕಾರ್ಯಪ್ಪ ವಿರುದ್ಧ ಒಕ್ಕಲಿಗ ಸಮುದಾಯದಿಂದ ಪ್ರತಿಭಟನೆ, ರಂಗಾಯಣಕ್ಕೆ...

ನಿರ್ಮಲಾನಂದ ಶ್ರೀಗಳ ಬಗ್ಗೆ ಹಗುರ ಮಾತು: ಅಡ್ಡಂಡ ಕಾರ್ಯಪ್ಪ ವಿರುದ್ಧ ಒಕ್ಕಲಿಗ ಸಮುದಾಯದಿಂದ ಪ್ರತಿಭಟನೆ, ರಂಗಾಯಣಕ್ಕೆ ಮುತ್ತಿಗೆ ಯತ್ನ

0

ಮೈಸೂರು: ನಿರ್ಮಾಲಾನಂದ ಶ್ರೀಗಳ ಬಗ್ಗೆ ಹಗುರವಾಗಿ ಮಾತನಾಡಿದ ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ವಿರುದ್ಧ ಒಕ್ಕಲಿಗ ಸಮುದಾಯದ ಮುಖಂಡರು ದಿಢೀರ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ರಂಗಾಯಣದ ಮುಂಭಾಗ ಜಮಾವಣೆಗೊಂಡ ಪ್ರತಿಭಟನಾಕಾರರು, ರಂಗಾಯಣ ಕಚೇರಿಗೆ  ಮುತ್ತಿಗೆಗೆ  ಯತ್ನಿಸಿ ಅಡ್ಡಂಡ ಕಾರ್ಯಪ್ಪ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಪೊಲೀಸರು ಮೈಸೂರಿನ ಕಲಾಮಂದಿರದ ಎಲ್ಲಾ ಗೇಟ್ ಗಳನ್ನು ಬಂದ್ ಮಾಡಿದರುಲ. ಇದರಿಂದಾಗಿ ಪ್ರತಿಭಟನಾಕಾರರು ಮತ್ತು ಪೊಲೀಸರ ‌ನಡುವೆ ತೀವ್ರ ಮಾತಿನ ಚಕಮಕಿ ನಡೆದು ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ಈ ವೇಳೆ ಮುನ್ನೆಚ್ಚರಿಕೆ ಕ್ರಮವಾಗಿ ಪೋಲಿಸರು ಪ್ರತಿಭಟನಾಕಾರರನ್ನು ಬಂಧಿಸಿದರು.

ಶ್ರೀಗಳ ಬಗೆಗಿನ ಹೇಳಿಕೆಗೆ ಕ್ಷಮೆಯಾಚಿಸಿದ ಅಡ್ಡಂಡ ಕಾರ್ಯಪ್ಪ

ನಿರ್ಮಲಾನಂದನಾಥ ಸ್ವಾಮೀಜಿ ಕೇವಲ ಒಕ್ಕಲಿಗ ಸಮುದಾಯಕ್ಕೆ ಮಾತ್ರ ಸ್ವಾಮೀಜಿ, ಎಲ್ಲಾ ಸಮುದಾಯಕ್ಕೆ ಅಲ್ಲ  ಎಂಬ ಹೇಳಿಕೆ ನೀಡಿದ್ದ ಅಡ್ಡಂಡ ಕಾರ್ಯಪ್ಪ ಶ್ರೀಗಳ ಕ್ಷಮೆಯಾಚಿಸಿದ್ದಾರೆ.

ನಿರ್ಮಲಾನಂದ ಶ್ರಿಗಳು ಈ ನಾಡಿನ ಸಂತ ಅವರ ಬಗ್ಗೆ ನನಗೆ ಬಹಳ ಗೌರವವಿದೆ. ನಾನು ಹೇಳಿರುವ ಹೇಳಿಕೆಯನ್ನ ಮಾಧ್ಯಮಗಳು ಅವರಿಗೆ ಬೇಕಾದ ರೀತಿಯಲ್ಲಿ ತಿರುಚಿದ್ದಾರೆ. ನಾನು ನಿರ್ಮಲಾನಂದ ಶ್ರೀಗಳ ಕ್ಷಮೆಯಾಚಿಸುತ್ತೇನೆ. ನಿರ್ಮಲಾನಂದ ಶ್ರೀಗಳು ನಮ್ಮ ಸಂತರು. ನಾನು ಅವರ ವಿರುದ್ಧ ಯಾವುದೇ ಹೇಳಿಕೆ ನೀಡಿಲ್ಲ. ಅವರಿಗೆ ಅಪಮಾನ ಮಾಡುವಂತಹ ಕೆಲಸ ಮಾಡಿಲ್ಲ. ಆ ಹೇಳಿಕೆಯನ್ನು ರಾಜಕೀಯವಾಗಿ ಬಳಸಿಕೊಂಡಿದ್ದಾರೆ. ನಾನು ಅವರ ಭಕ್ತ ಕೋಟಿಗಳಿಗೆ ಕ್ಷಮೆ ಕೇಳಲ್ಲ. ನಾನು ನಿರ್ಮಲಾನಂದ ಶ್ರೀಗಳಿಗೆ ಮಾತ್ರ ಕ್ಷಮೆಯಾಚಿಸುವೆ ಎಂದರು.

ನನಗೆ ಒಕ್ಕಲಿಗರ ಮೇಲೆ ಅಪಾರ ಪ್ರೀತಿ ಇದೆ. ನಾನು ಎಂದೂ ಒಕ್ಕಲಿಗರ ವಿರೋಧಿಯಲ್ಲ. ಇಲ್ಲಿ ಬಂದು ಪ್ರತಿಭಟನೆ ಮಾಡುವವರಿಗೆ ಕ್ಷಮೆ ಕೇಳುವುದಿಲ್ಲ ಎಂದು ಹೇಳಿದರು.