ಲಂಡನ್(London): ಬ್ರಿಟನ್ ವಿದೇಶಾಂಗ ಸಚಿವೆ ಲಿಜ್ ಟ್ರಸ್ ಅವರು ಕನ್ಸರ್ವೇಟಿವ್ ಪಕ್ಷದ ನೂತನ ನಾಯಕಿಯಾಗಿ ಆಯ್ಕೆಯಾಗಿದ್ದು, ಮಾರ್ಗರೇಟ್ ಥ್ಯಾಚರ್ ಮತ್ತು ಥೆರೆಸಾ ಮೇ ಅವರ ನಂತರ ದೇಶ ಮುನ್ನಡೆಸಿದ ಮೂರನೇ ಮಹಿಳಾ ಪ್ರಧಾನಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.
ಬ್ರಿಟನ್ ಪ್ರಧಾನಿ ಹುದ್ದೆಗೆ ನಡೆದ ಪೈಪೋಟಿಯಲ್ಲಿ ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್ ಅವರು ಭಾರತ ಮೂಲದ ರಿಷಿ ಸುನಕ್ ಅವರನ್ನು ಸೋಲಿಸಿ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ.
ಕನ್ಸರ್ವೇಟಿವ್ ಪಕ್ಷದ ಲಿಜ್ ಟ್ರಸ್ ಇನ್ಫೋಸಿಸ್ನ ನಾರಾಯಣ ಮೂರ್ತಿ ಅವರ ಅಳಿಯ ರಿಷಿ ಸುನಕ್ ಅವರಿಗಿಂತ ಅತಿ ಹೆಚ್ಚು ಮತಗಳನ್ನು ಗಳಿಸಿ ಗೆಲುವು ಸಾಧಿಸಿದರು.
ರಿಷಿ ಸುನಕ್ ಮತ್ತು ಲಿಜ್ ಟ್ರಸ್ ಅವರು ಇಂಗ್ಲೆಂಡ್ ಪ್ರಧಾನ ಮಂತ್ರಿ ಹುದ್ದೆಯ ಅಂತಿಮ ಸ್ಪರ್ಧಿಗಳಾಗಿ ಕನ್ಸರ್ವೇಟಿವ್ ಪಕ್ಷದಿಂದ ಸೆಣಸಾಟ ನಡೆಸಿದ್ದರು. ಆರು ವಾರಗಳ ಸುದೀರ್ಘ ಚುನಾವಣೆಯ ಬಳಿಕ ಲಿಜ್ ಟ್ರಸ್ ಅವರು ಈ ಗೆಲುವು ಪಡೆದರು.
ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ: ಇಂಗ್ಲೆಂಡ್ ನೂತನ ಪ್ರಧಾನಮಂತ್ರಿಯಾದ ಆಯ್ಕೆಯಾದ ಲಿಜ್ ಟ್ರಸ್ ಅವರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.
ಟ್ವೀಟ್ ಮಾಡಿ ಶುಭಾಶಯ ಕೋರಿರುವ ಅವರು, ಬ್ರಿಟನ್ನ ಮುಂದಿನ ಪ್ರಧಾನಮಂತ್ರಿಯಾಗಿ ಆಯ್ಕೆಯಾಗಿದ್ದಕ್ಕಾಗಿ ನಿಮಗೆ ಅಭಿನಂದನೆಗಳು. ನಿಮ್ಮ ನಾಯಕತ್ವದಲ್ಲಿ ಭಾರತ- ಇಂಗ್ಲೆಂಡ್ ಸಂಬಂಧ ಮತ್ತಷ್ಟು ಬಲಗೊಳ್ಳಲಿದೆ ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ.