ನವದೆಹಲಿ: ಲಘು ಮೋಟಾರು ವಾಹನ (ಎಲ್ಎಂವಿ) ಚಾಲನಾ ಪರವಾನಗಿ ಹೊಂದಿರುವ ವ್ಯಕ್ತಿಯು 7,500 ಕೆ.ಜಿ.ಗಿಂತ ಕಡಿಮೆ ತೂಕದ, ಯಾವುದೇ ಭಾರವಾದ ಸರಕು ಹೊಂದಿರದ ಸಾರಿಗೆ ವಾಹನವನ್ನು ಓಡಿಸಬಹುದು ಎಂದು ಸುಪ್ರೀಂ ಕೋರ್ಟ್ ಬುಧವಾರ ಮಹತ್ವದ ತೀರ್ಪು ನೀಡಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಐದು ನ್ಯಾಯಾಧೀಶರ ಸಂವಿಧಾನ ಪೀಠದ ಈ ತೀರ್ಪು ವಿಮಾ ಕಂಪನಿಗಳಿಗೆ ಆಘಾತ ಉಂಟುಮಾಡಿದೆ. ಅಪಘಾತಗಳು ಸಂಭವಿಸಿದಾಗ, ಅಪಘಾತದಲ್ಲಿ ನಿರ್ದಿಷ್ಟ ತೂಕದ ಸಾರಿಗೆ ವಾಹನಗಳ ಕಾರಣ ನೀಡಿ ಮತ್ತು ಕಾನೂನಿನ ಪ್ರಕಾರ ಅವುಗಳನ್ನು ಓಡಿಸಲು ಚಾಲಕರಿಗೆ ಅಧಿಕಾರವಿಲ್ಲವೆಂಬ ಕಾರಣ ನೀಡಿ ವಿಮಾ ಕಂಪನಿಗಳು ಕ್ಲೇಮ್‌ಗಳನ್ನು ತಿರಸ್ಕರಿಸುತ್ತಿದ್ದವು.
“ದೇಶದಲ್ಲಿ ರಸ್ತೆ ಅಪಘಾತಗಳು ಹೆಚ್ಚಾಗಲು ಎಲ್ಎಂವಿ ಡ್ರೈವಿಂಗ್ ಲೈಸೆನ್ಸ್ ಹೊಂದಿರುವವರೇ ಕಾರಣ ಎಂಬುದಕ್ಕೆ ಯಾವುದೇ ಪ್ರಾಯೋಗಿಕ ದತ್ತಾಂಶವಿಲ್ಲ” ಎಂದು ನ್ಯಾಯಪೀಠದ ಸರ್ವಾನುಮತದ ತೀರ್ಪನ್ನು ಬರೆದ ನ್ಯಾಯಮೂರ್ತಿ ಹೃಷಿಕೇಶ್ ರಾಯ್ ಹೇಳಿದರು.
ಸುದೀರ್ಘಾವಧಿಯ ವಾಹನ ಚಾಲನಾ ಅನುಭವವನ್ನು ಹೊಂದಿರುವ ಎಲ್ಎಂವಿ ಚಾಲನಾ ಪರವಾನಗಿ ಹೊಂದಿರುವವರು ನ್ಯಾಯಾಲಯದಿಂದ ತಮ್ಮ ಸಮಸ್ಯೆಗಳಿಗೆ ಪರಿಹಾರ ಬಯಸುತ್ತಿದ್ದಾರೆ ಮತ್ತು ಕೇವಲ ತಾಂತ್ರಿಕ ಕಾರಣಗಳಿಗಾಗಿ ಅವರ ಮನವಿಗಳನ್ನು ತಿರಸ್ಕರಿಸಲಾಗುವುದಿಲ್ಲ ಎಂದು ಅವರು ಹೇಳಿದರು.
ಸಿಜೆಐ ಮತ್ತು ನ್ಯಾಯಮೂರ್ತಿ ರಾಯ್ ಅವರಲ್ಲದೆ, ನ್ಯಾಯಮೂರ್ತಿಗಳಾದ ಪಿ.ಎಸ್.ನರಸಿಂಹ, ಪಂಕಜ್ ಮಿಥಾಲ್ ಮತ್ತು ಮನೋಜ್ ಮಿಶ್ರಾ ಕೂಡ ನ್ಯಾಯಪೀಠದಲ್ಲಿದ್ದರು.
ಮೋಟಾರು ವಾಹನ (ಎಂವಿ) ಕಾಯ್ದೆ, 1988 ಅನ್ನು ತಿದ್ದುಪಡಿ ಮಾಡುವ ಸಮಾಲೋಚನೆಗಳು ಬಹುತೇಕ ಪೂರ್ಣಗೊಂಡಿವೆ ಎಂದು ಕೇಂದ್ರದ ಪರವಾಗಿ ಹಾಜರಾದ ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಸಲ್ಲಿಸಿದ ನಂತರ ನ್ಯಾಯಪೀಠವು ಆಗಸ್ಟ್ 21 ರಂದು ತನ್ನ ತೀರ್ಪನ್ನು ಕಾಯ್ದಿರಿಸಿತ್ತು. ಕಾನೂನನ್ನು ತಿದ್ದುಪಡಿ ಮಾಡುವ ಕಾರ್ಯವನ್ನು ಆದಷ್ಟು ಬೇಗ ಪೂರ್ಣಗೊಳಿಸುವಂತೆ ಉನ್ನತ ನ್ಯಾಯಾಲಯವು ಕೇಂದ್ರಕ್ಕೆ ಸೂಚಿಸಿದೆ.
ಲಘು ಮೋಟಾರು ವಾಹನ (ಎಲ್ಎಂವಿ) ಗಾಗಿ ಚಾಲನಾ ಪರವಾನಗಿ ಹೊಂದಿರುವ ವ್ಯಕ್ತಿಯು 7,500 ಕೆ.ಜಿ.ಗಿಂತ ಕಡಿಮೆ ತೂಕವಿಲ್ಲದ ಸಾರಿಗೆ ವಾಹನವನ್ನು ಓಡಿಸಲು ಅರ್ಹನಾಗಿದ್ದಾನೆಯೇ ಎಂಬ ಪ್ರಶ್ನೆಗೆ ನ್ಯಾಯಾಲಯದಲ್ಲಿ ಕೊನೆಗೂ ಉತ್ತರ ಸಿಕ್ಕಿದೆ. ಎಲ್ಎಂವಿಗಳನ್ನು ಓಡಿಸಲು ಪರವಾನಗಿ ಹೊಂದಿರುವವರು ಚಾಲನೆ ಮಾಡುವ ಸಾರಿಗೆ ವಾಹನಗಳು ಅಪಘಾತಕ್ಕೀಡಾದಾಗ ವಿಮಾ ಕಂಪನಿಗಳು ಕ್ಲೇಮ್ ನಿರಾಕರಿಸುತ್ತಿದ್ದುದರಿಂದ ಈ ವಿಷಯ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಆದರೆ ಸದ್ಯ ಈ ವಿಚಾರದಲ್ಲಿ ನ್ಯಾಯಾಲಯದಿಂದ ಸ್ಪಷ್ಟನೆ ಸಿಕ್ಕಂತಾಗಿದೆ.