ಮಂಡ್ಯ: ಜೆಡಿಎಸ್ ಮುಖಂಡರು, ಸ್ಥಳೀಯ ಕಾರ್ಯಕರ್ತರು ಹಾಗೂ ಬಿಜೆಪಿ ಹೈಕಮಾಂಡ್ ಒತ್ತಡಕ್ಕೆ ಮಣಿದಿರುವ ಎಚ್.ಡಿ.ಕುಮಾರಸ್ವಾಮಿ ಮಂಡ್ಯ ಕ್ಷೇತ್ರದಿಂದ ಕಣಕ್ಕಿಳಿಯಲು ಒಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಶ್ವಾಸಕೋಶದ ಶಸ್ತ್ರಚಿಕಿತ್ಸೆಗಾಗಿ ಮಂಗಳವಾರ ಚೆನ್ನೈ ಆಸ್ಪತ್ರೆಗೆ ತೆರಳುವ ಮುನ್ನ ಅವರನ್ನು ಭೇಟಿಯಾದ ಸ್ಥಳೀಯ ಜೆಡಿಎಸ್ ಮುಖಂಡರ ಬಳಿ ಮಂಡ್ಯದಿಂದ ಸ್ಪರ್ಧಿಸುವ ನಿರ್ಧಾರ ತಿಳಿಸಿದ್ದಾರೆ.
ಆಸ್ಪತ್ರೆಯಿಂದ ಬಿಡುಗಡೆಯಾದ ನಂತರ ಮಾರ್ಚ್ 25 ಅಥವಾ 26ರಂದು ನಗರದಲ್ಲಿ ಬೃಹತ್ ಸಮಾವೇಶ ನಡೆಸಿ ಜನರ ಬಳಿ ತಮ್ಮ ಇಂಗಿತ ವ್ಯಕ್ತಪಡಿಸಲಿದ್ದಾರೆ ಎಂದು ಜೆಡಿಎಸ್ ಮುಖಂಡರು ತಿಳಿಸಿದರು.
ಎಚ್.ಡಿ.ಕುಮಾರಸ್ವಾಮಿ ಅಥವಾ ನಿಖಿಲ್ ಸ್ಪರ್ಧಿಸಬೇಕು ಎಂದು ಸ್ಥಳೀಯ ಕಾರ್ಯಕರ್ತರು ಒತ್ತಾಯಿಸಿದ್ದರು.ಮೈತ್ರಿ ಯಶಸ್ವಿಯಾಗಲು ಎಚ್ಡಿಕೆ ಸ್ಪರ್ಧಿಸಬೇಕು ಎಂದು ಬಿಜೆಪಿ ಹೈಕಮಾಂಡ್ ಕೂಡ ತಿಳಿಸಿತ್ತು.
ಶಸ್ತ್ರಚಿಕಿತ್ಸೆಯ ನಂತರ ಕುಮಾರಸ್ವಾಮಿ ಅವರು ಕ್ಷೇಮವಾಗಿ ಬರಲಿ ಎಂದು ಜಿಲ್ಲೆಯಾದ್ಯಂತ ಪೂಜೆ, ನೆರವೇರಿಸುತ್ತೇವೆ. ಮಂಡ್ಯದಿಂದ ಗೆದ್ದು ಅವರು ಕೇಂದ್ರದಲ್ಲಿ ಕೃಷಿ ಸಚಿವರಾಗುತ್ತಾರೆ ಎಂಬ ವಿಶ್ವಾಸವಿದೆ ಎಂದು ಜೆಡಿಎಸ್ ಮುಖಂಡರೊಬ್ಬರು ತಿಳಿಸಿದರು.