ಮನೆ ರಾಜ್ಯ ಲೋಕಸಮರ: ಮಂಡ್ಯದಿಂದ ಮತ್ತೆ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಫಿಕ್ಸ್!

ಲೋಕಸಮರ: ಮಂಡ್ಯದಿಂದ ಮತ್ತೆ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಫಿಕ್ಸ್!

0

ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದಿಂದ ಮತ್ತೆ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದ್ದು,ಮಾರ್ಚ್ 25ಕ್ಕೆ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಅಧಿಕೃತವಾಗಿ ಘೋಷಣೆ ಮಾಡುವುದಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.


ಮಂಡ್ಯದ ಡಾ.ಅಂಬೇಡ್ಕರ್ ಭವನದಲ್ಲಿ ನಡೆದ ಲೋಕಸಭಾ ಚುನಾವಣೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಕುಮಾರಸ್ವಾಮಿ ಅವರು, ಲೋಕಸಭೆ ಚುನಾವಣೆಗೆ ನಿಲ್ಲಲು ನಿಖಿಲ್​ನನ್ನು ಒಪ್ಪಿಸಲು ಮುಂದಾಗುತ್ತೇನೆ. ನಿಮ್ಮ ಆಸೆಗೆ ನಾವು ಭಂಗತರಲ್ಲ. ಪುತ್ರ ನಿಖಿಲ್ ಕುಮಾರಸ್ವಾಮಿಗೂ ಒಂದು ಮಾತು ಹೇಳುತ್ತೇನೆ. ನಿಮ್ಮ ಭಾವನೆಗಳಿಗೆ ಯಾವುದೇ ಕಾರಣಕ್ಕೂ ನಿರಾಸೆಯಾಗಲ್ಲ.ನಿಮ್ಮ ಆಸೆಯ ಪ್ರಕಾರ ಅದನ್ನು ನೆರವೇರಿಸಿಕೊಳ್ಳುತ್ತೇನೆ. ಮಾರ್ಚ್ 21ಕ್ಕೆ ನನಗೆ ಆಪರೇಷನ್ ಇದೆ.ಆದ್ದರಿಂದ ಮಾರ್ಚ್ 25ರಂದು ಮಂಡ್ಯಕ್ಕೆ ಬಂದು ಅಭ್ಯರ್ಥಿ ಘೋಷಿಸುತ್ತೇನೆ ಎಂದು ಸ್ಪಷ್ಟಪಡಿಸಿದರು.
ಈ ಮೂಲಕ ಪರೋಕ್ಷವಾಗಿ ನಿಖಿಲ್ ಕುಮಾರಸ್ವಾಮಿ ಅವರನ್ನೇ ಮಂಡ್ಯದಿಂದ ಕಣಕ್ಕಿಳಿಸುತ್ತೇನೆ ಎಂದು ಹೇಳಿದರು.ಇದರೊಂದಿಗೆ ಮಂಡ್ಯ ಜೆಡಿಎಸ್​ ಅಭ್ಯರ್ಥಿ ಯಾರು ಎನ್ನುವ ಪ್ರಶ್ನೆಗಳಿಗೆ ಇದೀಗ ಉತ್ತರ ಸಿಕ್ಕಂತಾಗಿದೆ. ಈ ಹಿಂದೆ ನಿಖಿಲ್‌ ಕುಮಾರಸ್ವಾಮಿ ಅವರು ಈ ಬಾರಿಯ ಚುನಾವಣೆಗೆ ನಾನು ಸ್ಪರ್ಧೆ ಮಾಡುವುದಿಲ್ಲ ಎಂದು ಹೇಳಿದ್ದರು.ಆದರೆ ಅಭಿಮಾನಿಗಳು, ನಾಯಕರು ನಿಖಿಲ್‌ ಸ್ಪರ್ಧೆ ಮಾಡಬೇಕೆಂದು ಒಲವು ವ್ಯಕ್ತಪಡಿಸಿದ್ದಾರೆ.ಹೀಗಾಗಿ ಕುಮಾರಸ್ವಾಮಿ, ಪುತ್ರನನ್ನು ಕಣಕ್ಕಿಳಿಸುವ ತೀರ್ಮಾನ ಮಾಡಿದ್ದು, ಅಧಿಕೃತ ಘೋಷಣೆಯೊಂದೇ ಬಾಕಿ ಇದ್ದು, ಮಾರ್ಚ್ 25ರಂದು ಘೋಷಣೆ ಮಾಡಲಿದ್ದಾರೆ.
ಕಾಂಗ್ರೆಸ್‌ನವರಂತೆ ನಾವೂ ‘ನಾಟಿ’ ಶೈಲಿಯಲ್ಲೇ ಚುನಾವಣೆ ನಡೆಸೋಣ ಎಂದು ಅವರು ಹೇಳಿದರು.
ದುಡ್ಡಿನ ಮೇಲೆ ಚುನಾವಣೆ ನಡೆಸಲು ಕಾಂಗ್ರೆಸ್‌ನವರು ಅಭ್ಯರ್ಥಿಯನ್ನು ಕರೆದುಕೊಂಡು ಬಂದಿದ್ದಾರೆ.ಆದರೆ, ಮಂಡ್ಯದಲ್ಲಿ ಅದು ಸಾಧ್ಯವಿಲ್ಲ. ನಮ್ಮಲ್ಲಿ ಹಣವಿಲ್ಲ,ಜನರಿದ್ದಾರೆ. ನಮ್ಮದು ರೈತರ ಪಕ್ಷ, ಗುಲಾಮಗಿರಿಯ ಪಕ್ಷವಲ್ಲ ಎಂದು ಅವರು ಕಾಂಗ್ರೆಸ್ ನಾಯಕರಿಗೆ ಟಾಂಗ್ ನೀಡಿದರು.
ಜಿಲ್ಲೆಯ ಜನತೆ ಎಂದೂ ಜೆಡಿಎಸ್ ಕೈಬಿಟ್ಟಿರಲಿಲ್ಲ.ಆದರೆ, ಕುತಂತ್ರ ರಾಜಕಾರಣದಿಂದಾಗಿ ಕಳೆದ ಬಾರಿಯ ಚುನಾವಣೆಯಲ್ಲಿ ನಿಖಿಲ್ ಸೋಲಬೇಕಾಯಿತು.ಈ ಚುನಾವಣೆಯಲ್ಲಿ ಸೋತರೆ ಬದುಕಿದ್ದೂ ಸತ್ತಂತೆ.ಕುತ್ತಿಗೆ ಕೊಯ್ದವರಿಗೆ ಸರಿಯಾದ ಉತ್ತರ ಕೊಡಬೇಕು ಎಂದು ಅವರು ಕಾರ್ಯಕರ್ತರಿಗೆ ಕರೆ ನೀಡಿದರು.
ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳು ಬೋಗಸ್ ಯೋಜನೆಗಳು. ೫೪ ಸಾವಿರ ಕೋಟಿ ರೂ.ನೀಡಿ ನುಡಿದಂತೆ ನಡೆದಿದ್ದೇವೆ ಎಂದು ಹೇಳುತ್ತಾರೆ. ಜಾಹಿರಾತಿಗೆ ಲಕ್ಷಾಂತರ ರೂ. ವೆಚ್ಚಮಾಡುತ್ತಿ
ದ್ದಾರೆ.ಇದಕ್ಕಾಗಿ ರಾಜ್ಯದ ಮೇಲೆ ೧ ಲಕ್ಷದ ೫ ಸಾವಿರ ಕೋಟಿ ರೂ. ಸಾಲ ಮಾಡಿದ್ದಾರೆ.ಇದನ್ನು ತೀರಿಸುವವರು ಯಾರು? ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಸುಮಲತಾ ಅವರು ನನ್ನ ಸ್ವಂತ ಅಕ್ಕನಿದ್ದಂತೆ ಅಂಬರೀಶ್ ಅವರೂ ನಾವೆಲ್ಲ ಒಟ್ಟಾಗಿ ಪ್ರೀತಿಯಿಂದ ಬೆಳೆದವರು. ನಮ್ಮ ಪಕ್ಷದಿಂದಲೇ ಅಂಬರೀಶ್ ಅವರು ಪಾರ್ಲಿಮೆಂಟ್ ಪ್ರವೇಶ ಮಾಡಿದ್ದರು.ವಿಧಿ ಆಟವೋ ಏನೋ ನಾನು ಮುಖ್ಯಮಂತ್ರಿ ಆಗಿದ್ದಾಗಲೇ ಡಾ.ರಾಜಕುಮಾರ್ ಅವರು, ಅಂಬರೀಶ್ ಅವರು ನಿಧನರಾದರು. ಕಂಠೀರವ ಸ್ಟುಡಿಯೋದಲ್ಲಿ ರಾಜ್ ಅವರ ಸ್ಮಾರಕಕ್ಕೆ ಸ್ಥಳ ನೀಡಿದ್ದು ನಾನೇ.ಆ ಮೇರುನಟನ ಸ್ಮಾರಕದ ಸಮೀಪದಲ್ಲಿಯೇ ಅಂಬರೀಶ್ ಅವರ ಸ್ಮಾರಕಕ್ಕೂ ಜಾಗ ಗುರುತಿಸಿ, ಗೌರವ ಕೊಟ್ಟೆ.ಇದೆಲ್ಲವನ್ನೂ ಆ ದೇವರೇ ನನ್ನಿಂದ ಮಾಡಿಸಿದ್ದಾನೆ ಎಂದು ನಂಬಿದ್ದೇನೆ.ವಿಷ್ಣುವರ್ಧನ್ ಅವರ ಸ್ಮಾರಕ ಸಮಸ್ಯೆ ಇನ್ನೂ ಬಗೆಹರಿದಿಲ್ಲ ಎಂದು ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿಗಳು ಸ್ಮರಣೆ ಮಾಡಿಕೊಂಡರು.
ರಾಜಕಾರಣದಲ್ಲಿ ಟೀಕೆ ಪ್ರತಿ ಟೀಕೆಗಳು ಇರುತ್ತವೆ.ಸುಮಲತಾ ಅವರು ನಾವು ಪರಸ್ವರ ಟೀಕೆ ಟಿಪ್ಪಣಿ ಮಾಡಿಕೊಂಡಿದ್ದೇವೆ.ಅದು ಮುಗಿದ ಅಧ್ಯಾಯ. ಅದು ಸಂಬಂಧಗಳಿಗೆ ಧಕೆ ತರುವಂಥದ್ದು ಬೇಡ.ಸುಮಲತಾ ಅವರು ನನ್ನ ಸ್ವಂತ ಅಕ್ಕ ಇದ್ದಂತೆ.ಸಂಘರ್ಷವನ್ನು ಮುಂದುವರಿಸಿಕೊಂಡು ಹೋಗಲ್ಲ. ಅದರ ಅಗತ್ಯವೂ ಇಲ್ಲ ಎಂದು ಕುಮಾರಸ್ವಾಮಿ ನೇರ ಮಾತುಗಳಲ್ಲಿ ಹೇಳಿದರು.
ಪಕ್ಷದ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ, ಶಾಸಕ ಎಚ್.ಟಿ.ಮಂಜು, ಮಾಜಿ ಶಾಸಕರಾದ ಸಿ.ಎಸ್.ಪುಟ್ಟರಾಜು, ಡಿ.ಸಿ.ತಮ್ಮಣ್ಣ, ರವೀಂದ್ರ ಶ್ರೀಕಂಠಯ್ಯ, ಕೆ.ಸುರೇಶಗೌಡ, ಡಾ.ಅನ್ನದಾನಿ, ಜಿ.ಬಿ.ಶಿವಕುಮಾರ್, ಕೆ.ಟಿ.ಶ್ರೀಕಂಠೇಗೌಡ, ಪಕ್ಷದ ಜಿಲ್ಲಾಧ್ಯಕ್ಷ ಡಿ.ರಮೇಶ್, ಅಂಬುಜಮ್ಮ, ಬಿ.ಆರ್.ರಾಮಚಂದ್ರು, ಎಸ್.ಗುರುಚರಣ್, ಇತರ ಮುಖಂಡರು ಉಪಸ್ಥಿತರಿದ್ದರು.

ಹಿಂದಿನ ಲೇಖನಉದ್ಯಮಿ ಹತ್ಯೆ ಪ್ರಕರಣ: ಆರೋಪಿ ಬಂಧನ
ಮುಂದಿನ ಲೇಖನಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ 152 ಹುದ್ದೆಗಳಿಗೆ ನೇರ ನೇಮಕಾತಿ