ಮನೆ ಕಾನೂನು ಕೆ‌ಆರ್‌ ಐಡಿಎಲ್ ವಿಭಾಗೀಯ ಕಚೇರಿ ಮೇಲೆ ಲೋಕಾಯುಕ್ತ ದಾಳಿ

ಕೆ‌ಆರ್‌ ಐಡಿಎಲ್ ವಿಭಾಗೀಯ ಕಚೇರಿ ಮೇಲೆ ಲೋಕಾಯುಕ್ತ ದಾಳಿ

0

ರಾಮನಗರ: ನಗರದ ವಿವೇಕಾನಂದ ನಗರದಲ್ಲಿರುವ ಕೆ‌ಆರ್‌ ಐಡಿಎಲ್ ವಿಭಾಗೀಯ ಕಚೇರಿ ಮೇಲೆ ಲೋಕಾಯುಕ್ತ ಪೊಲೀಸರು, ಮಂಗಳವಾರ ದಾಳಿ ನಡೆಸಿದ್ದಾರೆ.

ಘೋಷಿತ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದ ಮೇಲೆ ಕಚೇರಿಯ ಕಾರ್ಯನಿರ್ವಾಹಕ ಎಂಜಿನಿಯರ್ ಸೈಯದ್ ಮುನೀರ್ ಅಹಮದ್ ಅವರ ಕೊಠಡಿಯಲ್ಲಿ ಶೋಧ ಕಾರ್ಯ ನಡೆಸಿದ್ದಾರೆ.

ಬೆಳಿಗ್ಗೆ 10.15ರ ಸುಮಾರಿಗೆ ಬೆಂಗಳೂರಿನ ಲೋಕಾಯುಕ್ತ ಇನ್ಸ್‌ ಪೆಕ್ಟರ್ ಮಂಜು ಬಿ.ಪಿ ನೇತೃತ್ವದ ನಾಲ್ವರು ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಈ ವೇಳೆ ಕಚೇರಿಯಲ್ಲಿ ಒಬ್ಬರಷ್ಟೇ ಇದ್ದರು. ದಾಳಿಯ ವಿಷಯ ತಿಳಿದು ಕೆಲವರು 11 ಗಂಟೆ ನಂತರ ಕಚೇರಿಗೆ ಬಂದಿದ್ದಾರೆ.

ವರ್ಷದ ಹಿಂದೆ ರಾಮನಗರಕ್ಕೆ ವರ್ಗಾವಣೆಯಾಗಿದ್ದ ಮುನೀರ್ ಅವರ ವಿರುದ್ಧ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪ ಕೇಳಿ ಬಂದಿತ್ತು. ಹೀಗಾಗಿ ಬೆಂಗಳೂರಿನ ಆರ್.ಟಿ. ನಗರದಲ್ಲಿರುವ ಅವರ ಮನೆ ಮೇಲೆ ಲೋಕಾಯುಕ್ತ ಪೊಲೀಸರ ತಂಡವೊಂದು ದಾಳಿ ನಡೆಸಿತ್ತು. ಮತ್ತೊಂದು ತಂಡ, ಮುನೀರ್ ಕಾರ್ಯನಿರ್ವಹಿಸುವ ರಾಮನಗರದ ಕಚೇರಿ ಮೇಲೆ ದಾಳಿ ನಡೆಸಿದೆ.

ಕಚೇರಿಯಲ್ಲಿ ಮುನೀರ್ ಅವಧಿಯಲ್ಲಿ ಆಗಿರುವ ಕಾಮಗಾರಿಗಳಿಗೆ ಸಂಬಂಧಿಸಿದ ಕಡತಗಳನ್ನು ಪರಿಶೀಲನೆ ನಡೆಸಲಾಗಿದೆ. ಅವರಿಗೆ ಆಪ್ತರಾದ ಕೆಲ ಸಿಬ್ಬಂದಿಯನ್ನು ವಿಚಾರಣೆ ನಡೆಸಲಾಗಿದೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.