ಮನೆ ಅಪರಾಧ ಬಿಡಿಎ ಕೇಂದ್ರ ಕಚೇರಿ ಮೇಲೆ ಲೋಕಾಯುಕ್ತ ದಾಳಿ ಪರಿಶೀಲನೆ

ಬಿಡಿಎ ಕೇಂದ್ರ ಕಚೇರಿ ಮೇಲೆ ಲೋಕಾಯುಕ್ತ ದಾಳಿ ಪರಿಶೀಲನೆ

0

ಬೆಂಗಳೂರು: ವ್ಯಾಪಕ ಅವ್ಯವಹಾರ ನಡೆಯುತ್ತಿರುವ ಕುರಿತು ದೂರು ಬಂದ ಹಿನ್ನಲೆಯಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಕೇಂದ್ರ ಕಚೇರಿ ಮೇಲೆ ಲೋಕಾಯುಕ್ತ ಪೊಲೀಸರು ಶುಕ್ರವಾರ ದಾಳಿ ನಡೆಸಿ, ಶೋಧ ನಡೆಸುತ್ತಿದ್ದಾರೆ.

ನಿವೇಶನ ಹಂಚಿಕೆ, ಬದಲಿ ನಿವೇಶನ ಹಂಚಿಕೆ, ಸ್ವಾಧೀನಪಡಿಸಿಕೊಂಡ ಜಮೀನುಗಳ ಮಾಲೀಕರಿಗೆ ಪರಿಹಾರ ವಿತರಣೆಯಲ್ಲಿ ಅವ್ಯವಹಾರ ನಡೆಸುತ್ತಿರುವ ಕುರಿತು ದೂರುಗಳು ಕೇಳಿಬಂದಿದ್ದವು.

ಲೋಕಾಯುಕ್ತದ ಬೆಂಗಳೂರು ನಗರ ಪೊಲೀಸ್‌ ಘಟಕದ 35 ಅಧಿಕಾರಿಗಳು ಆರು ತಂಡಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಎಸ್‌’ಪಿ ಕೆ.ವಿ. ಅಶೋಕ್‌ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದಾರೆ. ಕುಮಾರ ಪಾರ್ಕ್‌ನಲ್ಲಿರುವ ಬಿಡಿಎ ಕೇಂದ್ರ ಕಚೇರಿಯ ಎಲ್ಲ ಪ್ರವೇಶ ದ್ವಾರಗಳನ್ನು ಮುಚ್ಚಿ ಶೋಧ ನಡೆಸಲಾಗುತ್ತಿದೆ.

ನಿವೇಶನ ಹಂಚಿಕೆ, ಬದಲಿ ನಿವೇಶನ ಹಂಚಿಕೆ, ಜಮೀನು ಮಾಲೀಕರಿಗೆ ಪರಿಹಾರ ನೀಡುವುದರಲ್ಲಿ ದೊಡ್ಡ ಪ್ರಮಾಣದ ಭ್ರಷ್ಟಾಚಾರ ನಡೆಯುತ್ತಿರುವ ಕುರಿತು ಹಲವರು ಲೋಕಾಯುಕ್ತರಿಗೆ ದೂರು ನೀಡಿದ್ದರು.

ನಿರಂತರವಾಗಿ ದೂರುಗಳು ಬರುತ್ತಿರುವ ಕಾರಣದಿಂದ ದಿಢೀರ್‌ ಶೋಧ ನಡೆಸುವಂತೆ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್‌. ಪಾಟೀಲ ಸಂಸ್ಥೆಯ ಪೊಲೀಸ್‌ ವಿಭಾಗಕ್ಕೆ ನಿರ್ದೇಶನ ನೀಡಿದ್ದರು.

ಲೋಕಾಯುಕ್ತರು ನೀಡಿರುವ ಶೋಧನಾ ವಾರೆಂಟ್‌ ಆಧರಿಸಿ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ತನಿಖಾ ತಂಡದ ಮೂಲಗಳು ತಿಳಿಸಿವೆ.ತನಿಖಾ ತಂಡಗಳು ಬಿಡಿಎ ಕೇಂದ್ರ ಕಚೇರಿಯ ಎಲ್ಲ ವಿಭಾಗಗಳಲ್ಲಿ ಕಡತಗಳನ್ನು ಪರಿಶೀಲನೆ ನಡೆಸುತ್ತಿವೆ.

ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಸ್ತಿತ್ವದಲ್ಲಿದ್ದಾಗಲೂ ಬಿಡಿಎ ಮೇಲೆ ದಾಳಿ ನಡೆಸಲಾಗಿತ್ತು. ಬಳಿಕ ಬಿಡಿಎ ಅಧಿಕಾರಿಗಳ ವಿರುದ್ಧ ಹಲವು ಕ್ರಿಮಿನಲ್‌ ಪ್ರಕರಣಗಳನ್ನು ದಾಖಲಿಸಲಾಗಿತ್ತು.

ಹಿಂದಿನ ಲೇಖನಬೇಸಿಗೆಯಲ್ಲಿ ಬಾಡಿಹೀಟ್ ಕಡಿಮೆ ಮಾಡುವ ಪಾನೀಯಗಳು
ಮುಂದಿನ ಲೇಖನವಾಲ್ಮೀಕಿ ಜಾತ್ರೆಗೆ ಆಹ್ವಾನ ಇರಲಿಲ್ಲ: ನಟ ಸುದೀಪ್ ಸ್ಪಷ್ಟನೆ