ಶಿವಮೊಗ್ಗ : ತೀರ್ಥಹಳ್ಳಿ – ಕೋಣಂದೂರು – ಅನಂತಪುರ ಮಾರ್ಗದ ಹಿರೇಸರ ಸಮೀಪ ರಸ್ತೆಯಲ್ಲಿ ಬೃಹತ್ ಕಾಳಿಂಗ ಸರ್ಪ ಅಡ್ಡ ಬಂದ ಪರಿಣಾಮ, ಚಾಲಿ ಅಡಿಕೆ ತುಂಬಿದ್ದ ವಾಹನವೊಂದು ನಿಯಂತ್ರಣ ತಪ್ಪಿ ರಸ್ತೆಯಲ್ಲೇ ಪಲ್ಟಿಯಾಗಿದೆ.
ಸಾಗರದಿಂದ ಕಾರ್ಕಳದತ್ತ ಸಾಗುತ್ತಿದ್ದ ಈ ವಾಹನಕ್ಕೆ ಗುಡ್ಡೆಕೊಪ್ಪ ಸಮೀಪದ ಹಿರೇಸರದಲ್ಲಿ ಇದ್ದಕ್ಕಿದ್ದಂತೆ ಕಾಳಿಂಗ ಸರ್ಪ ಎದುರಾಗಿದೆ. ಹಾವನ್ನು ಕಂಡು ಆತಂಕಗೊಂಡ ಚಾಲಕ, ಹಾವಿನ ಜೀವ ಉಳಿಸುವ ಧಾವಂತದಲ್ಲಿ ಒಮ್ಮೆಲೇ ಬ್ರೇಕ್ ಹಾಕಿದ್ದಾನೆ.
ಈ ವೇಳೆ ಭಾರೀ ಪ್ರಮಾಣದ ಅಡಿಕೆ ಲೋಡ್ ಇದ್ದ ಕಾರಣ ಚಾಲಕನ ನಿಯಂತ್ರಣ ತಪ್ಪಿ ಲಾರಿ ರಸ್ತೆಯಲ್ಲೇ ಉರುಳಿ ಬಿದ್ದಿದೆ. ಅದೃಷ್ಟವಶಾತ್ ಈ ಘಟನೆಯಲ್ಲಿ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದು, ಕಾಳಿಂಗ ಸರ್ಪಕ್ಕೂ ಯಾವುದೇ ಹಾನಿಯಾಗಿಲ್ಲ ಎಂದು ತಿಳಿದುಬಂದಿದೆ.
ಅದೇ ಸಮಯದಲ್ಲಿ ಕಾರ್ಯನಿಮಿತ್ತ ಆ ಮಾರ್ಗವಾಗಿ ಪ್ರಯಾಣಿಸುತ್ತಿದ್ದ ಶಾಸಕ ಆರಗ ಜ್ಞಾನೇಂದ್ರ ಕೂಡಲೇ ತಮ್ಮ ಕಾರನ್ನು ನಿಲ್ಲಿಸಿ ಸ್ಥಳಕ್ಕೆ ಧಾವಿಸಿದರು. ಅಪಘಾತದ ತೀವ್ರತೆ ಕಂಡು ಆತಂಕಗೊಂಡಿದ್ದ ಲಾರಿ ಚಾಲಕನನ್ನು ಮಾತನಾಡಿಸಿ ಧೈರ್ಯ ತುಂಬಿದ್ದಾರೆ.















