ನವದೆಹಲಿ: ನೌಕರರ ಪಿಂಚಣಿ ಯೋಜನೆ (ಇಪಿಎಸ್) ಗಾಗಿ ಕೇಂದ್ರೀಕೃತ ಪಿಂಚಣಿ ಪಾವತಿ ವ್ಯವಸ್ಥೆ (ಸಿಪಿಪಿಎಸ್) ಪ್ರಸ್ತಾಪಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಈ ವ್ಯವಸ್ಥೆಯ ಮೂಲಕ ಪಿಂಚಣಿದಾರರು 2025 ರ ಜನವರಿ 1 ರಿಂದ ಭಾರತದ ಯಾವುದೇ ಬ್ಯಾಂಕಿನಿಂದ ಪಿಂಚಣಿ ಪಡೆಯಲು ಸಾಧ್ಯವಾಗಲಿದೆ.
ಭಾರತದಾದ್ಯಂತದ ಯಾವುದೇ ಬ್ಯಾಂಕ್, ಯಾವುದೇ ಶಾಖೆಯ ಮೂಲಕ ಪಿಂಚಣಿ ಪಡೆಯಲು ಸಾಧ್ಯವಾಗಲಿದೆ ಎಂದು ಸರ್ಕಾರ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಬಗ್ಗೆ ಮಾಹಿತಿ ನೀಡಿದ ಕೇಂದ್ರ ಕಾರ್ಮಿಕ ಸಚಿವ ಡಾ.ಮನ್ಸುಖ್ ಮಾಂಡವಿಯಾ, “ಕೇಂದ್ರೀಕೃತ ಪಿಂಚಣಿ ಪಾವತಿ ವ್ಯವಸ್ಥೆ (ಸಿಪಿಪಿಎಸ್) ಅನುಮೋದನೆಯು ಇಪಿಎಫ್ಒ ಆಧುನೀಕರಣದಲ್ಲಿ ಮಹತ್ವದ ಮೈಲಿಗಲ್ಲಾಗಿದೆ. ಪಿಂಚಣಿದಾರರು ಇನ್ನು ಮುಂದೆ ತಮ್ಮ ಪಿಂಚಣಿಯನ್ನು ದೇಶದ ಯಾವುದೇ ಭಾಗದಲ್ಲಿನ ಯಾವುದೇ ಬ್ಯಾಂಕ್, ಯಾವುದೇ ಶಾಖೆಯಿಂದ ಪಡೆಯಬಹುದಾಗಿದೆ. ಹೊಸ ವ್ಯವಸ್ಥೆಯು ಪಿಂಚಣಿದಾರರು ಎದುರಿಸುತ್ತಿರುವ ದೀರ್ಘಕಾಲದ ಸಮಸ್ಯೆಗಳನ್ನು ಪರಿಹರಿಸಲಿದೆ ಮತ್ತು ತಡೆರಹಿತ ಹಾಗೂ ಪರಿಣಾಮಕಾರಿ ಪಿಂಚಣಿ ವಿತರಣೆಗೆ ಅನುವು ಮಾಡಿಕೊಡಲಿದೆ. ಇಪಿಎಫ್ಒ ಅನ್ನು ಹೆಚ್ಚು ದೃಢವಾದ, ಸ್ಪಂದಿಸುವ ಮತ್ತು ತಂತ್ರಜ್ಞಾನ – ಶಕ್ತ ಸಂಸ್ಥೆಯಾಗಿ ಪರಿವರ್ತಿಸುವ ನಮ್ಮ ನಿರಂತರ ಪ್ರಯತ್ನಗಳಲ್ಲಿ ಇದು ನಿರ್ಣಾಯಕ ಹೆಜ್ಜೆಯಾಗಿದೆ.” ಎಂದು ಹೇಳಿದರು.
78 ಲಕ್ಷಕ್ಕೂ ಹೆಚ್ಚು ಪಿಂಚಣಿದಾರರಿಗೆ ಅನುಕೂಲ: ಸಿಪಿಪಿಎಸ್ ಇಪಿಎಫ್ಒನ 78 ಲಕ್ಷಕ್ಕೂ ಹೆಚ್ಚು ಇಪಿಎಸ್ ಪಿಂಚಣಿದಾರರಿಗೆ ಅನುಕೂಲವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಸುಧಾರಿತ ಐಟಿ ಮತ್ತು ಬ್ಯಾಂಕಿಂಗ್ ತಂತ್ರಜ್ಞಾನಗಳನ್ನು ಬಳಸಿಕೊಳ್ಳುವ ಮೂಲಕ, ಇದು ಪಿಂಚಣಿದಾರರಿಗೆ ಹೆಚ್ಚು ಪರಿಣಾಮಕಾರಿ, ತಡೆರಹಿತ ಮತ್ತು ಬಳಕೆದಾರ ಸ್ನೇಹಿ ಅನುಭವವನ್ನು ನೀಡುತ್ತದೆ ಎಂದು ಸರ್ಕಾರ ಹೇಳಿದೆ.
ಪಿಂಚಣಿದಾರನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸ್ಥಳಾಂತರಗೊಂಡಾಗ ಅಥವಾ ತನ್ನ ಬ್ಯಾಂಕ್ ಅಥವಾ ಶಾಖೆ ಬದಲಾಯಿಸಿದಾಗಲೂ ಸಹ ಪಿಂಚಣಿ ಪಾವತಿ ಆದೇಶಗಳನ್ನು (ಪಿಪಿಒ) ಒಂದು ಕಚೇರಿಯಿಂದ ಇನ್ನೊಂದಕ್ಕೆ ವರ್ಗಾಯಿಸುವ ಅಗತ್ಯವಿಲ್ಲದೇ ಭಾರತದಾದ್ಯಂತ ಪಿಂಚಣಿ ಪಡೆಯುವಿಕೆಯನ್ನು ಸಾಧ್ಯವಾಗಿಸುತ್ತದೆ ಎಂದು ಅದು ಹೇಳಿದೆ. ನಿವೃತ್ತಿಯ ನಂತರ ಬೇರೆ ಊರುಗಳಿಗೆ ತೆರಳುವ ಪಿಂಚಣಿದಾರರಿಗೆ ಇದು ಬಹಳ ಅನುಕೂಲ ಒದಗಿಸಲಿದೆ.
2025 ರ ಜನವರಿ 1 ರಿಂದ ಇಪಿಎಫ್ಒನ ಐಟಿ ಆಧುನೀಕರಣ ಯೋಜನೆ ಕೇಂದ್ರೀಕೃತ ಐಟಿ ಎನೇಬಲ್ಡ್ ಸಿಸ್ಟಮ್ (ಸಿಟಿಇಎಸ್ 2.01) ಭಾಗವಾಗಿ ಈ ಸೌಲಭ್ಯವನ್ನು ಪ್ರಾರಂಭಿಸಲಾಗುವುದು. ಮುಂದಿನ ಹಂತದಲ್ಲಿ, ಸಿಪಿಪಿಎಸ್ ಆಧಾರ್ ಆಧಾರಿತ ಪಾವತಿ ವ್ಯವಸ್ಥೆಗೆ (ಎಬಿಪಿಎಸ್) ಸುಗಮವಾಗಿ ಬದಲಾವಣೆ ಮಾಡುವುದು ಇದರಿಂದ ಸಾಧ್ಯವಾಗಲಿದೆ.