ಮನೆ ರಾಷ್ಟ್ರೀಯ ನೌಕಾಪಡೆಯ ಬೆಂಗಾವಲಿನೊಂದಿಗೆ ಹಾರ್ಮುಜ್ ಜಲಸಂಧಿ ದಾಟಿ, ಭಾರತದತ್ತ ಬರುತ್ತಿದೆ ಎಲ್‌ಪಿಜಿ ಟ್ಯಾಂಕರ್‌..!

ನೌಕಾಪಡೆಯ ಬೆಂಗಾವಲಿನೊಂದಿಗೆ ಹಾರ್ಮುಜ್ ಜಲಸಂಧಿ ದಾಟಿ, ಭಾರತದತ್ತ ಬರುತ್ತಿದೆ ಎಲ್‌ಪಿಜಿ ಟ್ಯಾಂಕರ್‌..!

0

ನವದೆಹಲಿ : ಭಾರತೀಯ ನೌಕಾ ಪಡೆಯ ಬೆಂಗಾವಲಿನೊಂದಿಗೆ 40,000 ಮೆಟ್ರಿಕ್ ಟನ್‌ಗಳಿಗೂ ಹೆಚ್ಚು ದ್ರವೀಕೃತ ಪೆಟ್ರೋಲಿಯಂ ಅನಿಲವನ್ನು ಹೊತ್ತ ಭಾರತೀಯ ಶಿವಾಲಿಕ್ ಹಡಗು ಹಾರ್ಮುಜ್ ಜಲಸಂಧಿಯನ್ನು ಯಶಸ್ವಿಯಾಗಿ ದಾಟಿದೆ. ಇರಾನ್‌ ಬಂದ್‌ ಮಾಡಿರುವ ಹಾರ್ಮುಜ್ ಜಲಸಂಧಿಯಲ್ಲಿ ನೌಕಾಪಡೆಯ ಬೆಂಗಾವಲಿನಲ್ಲಿ ಶಿವಾಲಿಕ್‌ ಸಂಚರಿಸಿ ನಂತರ ಮುಕ್ತ ಸಮುದ್ರಕ್ಕೆ ಯಶಸ್ವಿಯಾಗಿ ಸಾಗಿದೆ ಎಂದು ವರದಿಯಾಗಿದೆ. ಈ ಹಡಗು ಎರಡು ದಿನಗಳ ಒಳಗಡೆ ಮುಂಬೈ ಅಥವಾ ಕಾಂಡ್ಲಾ ಬಂದರಿನಲ್ಲಿ ಡಾಕಿಂಗ್ ಆಗುವ ಸಾಧ್ಯತೆಯಿದೆ.

ಮತ್ತೊಂದು ಎಲ್‌ಪಿಜಿ ಹೊತ್ತ ಹಡಗು ನಂದಾದೇವಿಯೂ ನೌಕಾಪಡೆಯ ಬೆಂಗಾವಲಿನಲ್ಲಿ ಇಂದು ಬೆಳಗ್ಗೆ ಜಲಸಂಧಿಯಯನ್ನು ದಾಟಿದ್ದು ಎರಡು ದಿನದ ಒಳಗಡೆ ಭಾರತದ ಬಂದರು ತಲುಪುವ ಸಾಧ್ಯತೆಯಿದೆ. ಭಾರತೀಯ ಧ್ವಜ ಹೊಂದಿರುವ ಹಡಗುಗಳ ಸಂಚಾರಕ್ಕೆ ಹಾರ್ಮುಜ್ ಜಲಸಂಧಿಯನ್ನು ತೆರೆಯಬೇಕು ಎಂದು ಭಾರತ ಇರಾನಿಗೆ ಮನವಿ ಮಾಡಿತ್ತು. ಈ ಮನವಿಗೆ ಇರಾನ್‌ ಸ್ಪಂದಿಸಿದ್ದು ಭಾರತದ ಹಡುಗಳ ಸಂಚಾರಕ್ಕೆ ಅನುಮತಿ ನೀಡಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಹಡಗುಗಳು ಈ ದಾರಿಯ ಮೂಲಕ ಭಾರತಕ್ಕೆ ಬರಲಿದೆ ಎಂದು ಮೂಲಗಳು ತಿಳಿಸಿವೆ.

ಸರ್ಕಾರಿ ಮೂಲಗಳು ಹೇಳುವಂತೆ ಅಧಿಕಾರಿಗಳು ಹಡಗುಗಳ ಚಲನವಲನವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಭಾರತೀಯ ಹಡಗುಗಳು ಹೆಚ್ಚಿನ ಅಪಾಯದ ವಲಯದಿಂದ ಸುರಕ್ಷಿತವಾಗಿ ನಿರ್ಗಮಿಸುವವರೆಗೆ ಈ ಪ್ರದೇಶದಲ್ಲಿ ಸಂಚರಿಸಲು ನೌಕಾ ಬೆಂಗಾವಲು ಮುಂದುವರಿಯಲಿದೆ ಹಾರ್ಮುಜ್ ಜಲಸಂಧಿಯು ವಿಶ್ವದ ಪ್ರಮುಖ ಕಡಲ ಚಾಕ್‌ಪಾಯಿಂಟ್‌ಗಳಲ್ಲಿ ಒಂದಾಗಿದೆ, ಇದು ಜಾಗತಿಕ ತೈಲ ಮತ್ತು ಅನಿಲ ಸಾಗಣೆಯ ಸರಿಸುಮಾರು 20 ಪ್ರತಿಶತವನ್ನು ನಿರ್ವಹಿಸುತ್ತದೆ. ಅಮೆರಿಕ, ಇಸ್ರೇಲ್‌ ಮತ್ತು ಈ ದೇಶಗಳಿಗೆ ಬೆಂಬಲ ನೀಡುವ ಯಾವುದೇ ಹಡಗುಗಳು ಹಾರ್ಮುಜ್ ಜಲಸಂಧಿಯ ಪ್ರವೇಶಿಸಿದರೆ, ಹೊಡೆದು ಹಾಕುತ್ತೇವೆ ಎಂದು ಇರಾನ್‌ ಎಚ್ಚರಿಕೆ ನೀಡಿದೆ. ಸದ್ಯ ಇರಾನ್‌ ಭಾರತ ಸೇರಿದಂತೆ ರಷ್ಯಾ, ಚೀನಾ, ಟರ್ಕಿ, ಪಾಕಿಸ್ತಾನದ ಕಂಟೈನರ್‌ ಹಡಗುಗಳ ಸಂಚಾರಕ್ಕೆ ಮಾತ್ರ ಅನುಮತಿ ನೀಡಿದೆ.