ಕೇರಳದ ಪ್ರಥಮ ಭದ್ರಕಾಳಿ ಕ್ಷೇತ್ರವು ಕೊಡುಂಗಲ್ಲೂರು ಮತ್ತು ಎರಡನೇ ಕ್ಷೇತ್ರವು ಮಾಡಾಯಿಕಾವ್ ನಲ್ಲಿರುವುದಾಗಿದೆ. ಉತ್ತರ ಕೇರಳದಲ್ಲಿ ಸುಮಾರು 360ಕ್ಕಿಂತಲೂ ಅಧಿಕ ಭಗವತಿ ಕ್ಷೇತ್ರಗಳಿದ್ದು, ಇಲ್ಲೆಲ್ಲ ಆರಾಧಿಸಲ್ಪಡುವ ದೇವಿಯು ಮಾಡಾಯಿಕಾವ್ ನ ಅಂಶಗಳಾಗಿವೆಯೆಂದು ತಿಳಿಯಬಹುದಾಗಿದೆ. ಕಣ್ಣೂರು ಪೇಟೆಯಿಂದ ಸುಮಾರು 22 ಕಿ.ಮೀ. ಬಡಗು ದಿಕ್ಕಿಗೆ ಪಾಯಂಗಡಿ ಪೇಟೆಗೆ ಇರುವ ರಾಜ ರಸ್ತೆಯಲ್ಲಿ ಎರಿಪ್ಪುರಂ ಎಂಬಲ್ಲಿ ಮಾಡಾಯಿಕಾವ್ ಕ್ಷೇತ್ರವಿದೆ. ಕಣ್ಣೂರು ಮತ್ತು ಪಯ್ಯಂನ್ನೂರು ಪೇಟೆಗಳಿಂದ ಈ ಕ್ಷೇತ್ರಕ್ಕೆ ಧಾರಾಳ ಬಸ್ಸುಗಳ ಸೌಕರ್ಯವಿದೆ. ಕಾಸರಗೋಡು ಭಾಗದಿಂದ ಕ್ಷೇತ್ರಕ್ಕೆ ಯಾತ್ರಿಸುವವರು ಪಾಯಂಗಡಿ ಯನ್ನೂರಿನಿಂದಾಗಿ ಹೋಗಬೇಕಾಗಿದೆ. ರೈಲಿನಲ್ಲಿ ತೆರಳುವವರು ಪಾಯಂಗಡಿ ರೈಲ್ವೆ ನಿಲ್ದಾಣದಲ್ಲಿಳಿಯಬೇಕಾಗಿದೆ. ರೈಲ್ವೆ ನಿಲ್ದಾಣದಿಂದ ಕ್ಷೇತ್ರಕ್ಕೆ ಕೇವಲ 1. ಕಿಲೋಮೀಟರ್ ದೂರವಿರುವಾಗಿದೆ.
ಶತಮಾನಗಳ ಇತಿಹಾಸವಿರುವ ಮಾಡಾಯಿಕಾವ್ ಭಗವತಿ ಕ್ಷೇತ್ರವು ಟಿಪ್ಪು ಸುಲ್ತಾನನ ಆಕ್ರಮಣದಲ್ಲಿ ಭಾಗಶಃ ಹಾಳುಗೆಡಹಲ್ಪಟ್ಟಿತು. ʼಕೂನನ್ʼ ಎಂಬ ಕೋಲತ್ತೀರಿ ರಾಜನು ದೇಗುಲವನ್ನು ನವೀಕರಿಸಿ, ತುಕಲಶ್ಶೇರಿ ಕುರಿಕಾಟ್ ತಂತ್ರಿ ಮನೆತನದ ಮಹೇಶ್ವರ ಭಟ್ಟಾತಿರಿಪ್ಪಾಡ್ ರ ನೇತೃತ್ವದಲ್ಲಿ ಚೈತನ್ಯಮೂರ್ತಿಗಳಿಗೆ ಕಡುಶರ್ಕರ ಬಿಂಬಗಳನ್ನಾಗಿಸಿ ಪ್ರತಿಷ್ಠೆಯನ್ನು ನೆರವೇರಿಸಿದರು ಎಂದು ತಿಳಿದು ಬರುತ್ತದೆ.
ದೇಗುಲ ಕೊಳ :-
ಈ ಕ್ಷೇತ್ರದ ಎದುರಿಗೆ ಸುಮಾರು 200 ಮೀಟರ್ ದೂರವಿರುವ ತಗ್ಗು ಪ್ರದೇಶದಲ್ಲಿ ದೇಗುಲ ಕೊಳವಿದೆ. ಇದಕ್ಕೆ ನಾಲ್ಕು ಬದಿಗಳಿಂದಲೂ ಕೆಂಗಲ್ಲುಗಳಿಂದ ನಿರ್ಮಿಸಲಾಗಿದೆ. ದೇಗುಲ ವಾಸಿಗಳು ಇಲ್ಲಿ ಸ್ನಾನವನ್ನು ಪೂರೈಸುವುದಾಗಿದೆ.
ಅಶ್ವತ್ಥ ಕಟ್ಟೆ :-
ದೇಗುಲದ ಎದುರಿಗೆ ಇದ್ದಂತಹ ಪ್ರಾಚೀನವಾದ ಅಶ್ವತ್ಥಕಟ್ಟೆಯನ್ನು ಇದೀಗ ನವೀಕರಿಸಲಾಗಿದೆ. ʼಪೂರಂ ಉತ್ಸವʼದ 9 ದಿನಗಳಲ್ಲೂ ಭಗವತಿಯ ಮೆರವಣಿಗೆಯು ಅಲಂಕಾರಿಸಲ್ಪಟ್ಟ ಈ ಅಶ್ವತ್ಥಕಟ್ಟೆಗೆ ಮೂರುಸುತ್ತು ಪ್ರದಕ್ಷಿಣೆ ಬಂದು ಸಾಗುವುದಾಗಿದೆ.
ಕ್ಷೇತ್ರದ ಹೊರಾಂಗಣ :-
ಕ್ಷೇತ್ರದ ಪ್ರವೇಶ ದ್ವಾರಕ್ಕೆ ತಾಗಿಕೊಂಡು ಹೊರಾಂಗಣವಿದೆ. ಆದರೆ ಹೊರಾಂಗಣದಲ್ಲಿ ಪ್ರದಕ್ಷಿಣೆ ಬರುವ ಕ್ರಮವಿಲ್ಲ. ಹೊರಾಂಗಣದಲ್ಲಿ ದೇಗುಲ ಮುಂಭಾಗದಲ್ಲಿ ಕಛೇರಿ ಮತ್ತು ಸರಸ್ವತಿ ಮಂಟಪವಿದೆ.
ಸರಸ್ವತಿ ಮಂಟಪ :-
ಕ್ಷೇತ್ರದ ಹೊರಾಂಗಣದಲ್ಲಿ ಬಡಗು ಮುಖವಾಗಿ ಸರಸ್ವತಿ ಮಂಟಪವಿದೆ. ಇಲ್ಲಿ ಮಕ್ಕಳಿಗೆ ವಿದ್ಯಾರಂಭ ಮಾಡುವುದಲ್ಲದೆ, ಸಾಂಸ್ಕೃತ ಮತ್ತು ಧಾರ್ಮಿಕ ಕಾರ್ಯಕ್ರಮಗಳನ್ನು, ಕಲಾಪ್ರತಿಭೆಗಳ ಪ್ರಥಮ ರಂಗಪ್ರವೇಶ (ಅರಂಗೆಟ್ಟಂ) ವಿಧಿಯನ್ನು ನಿರ್ವಹಿಸಲಾಗುತ್ತದೆ.
ಕಣಿಯಂಬಳ್ಳಿ ಮಾಡ :-
ಕ್ಷೇತ್ರದ ಹೊರಾಂಗಣದ ಬಡಗು ಭಾಗದಲ್ಲಿ ಕಾವ್ ಇದೆ. ಇಲ್ಲಿಗೆ ಕಣಿಯಂಬಳ್ಳಿ (ಬಡಕ್ಕೆಂಬಾದಿಲ್) ಮಾಡ ಎಂದು ಹೆಸರು. ಇಲ್ಲಿ ಕೆಂಗಲ್ಲುಗಳ ಆವರಣವಿರುವ ಸಣ್ಣ ತೆರೆಯಿದೆ. ತೆರೆಯಲ್ಲಿ ಭಗವತಿಯ ಸಂಕಲ್ಪದ ಪ್ರತಿಷ್ಠೆಯ ಶೀಲಾಬಿಂಬವಿದೆ. ಇಲ್ಲಿ ಭಗವತಿಗೆ ಶಾಕ್ತೇಯವಾಗಿ ಕೋಳಿ ಕೋಯ್ದು ಬಲಿಯನ್ನ ಅರ್ಪಿಸುವುದಾಗಿದೆ. ವರ್ಷಾವಧಿಯಾಗಿ ವೃಷಬ ಮಾಸದಲ್ಲಿ ಜರಗಿಸಲಾಗುವ ತೆಯ್ಯಂಕೆಟ್ಟು ಮಹೋತ್ಸವವು ಕಣಿಯಂಪಳ್ಳಿಯ ತೆಂಗು ಭಾಗಕ್ಕೆ ಹೊರಾಂಗಣದಲ್ಲಿ ಜರುಗುದಾಗಿದೆ.
ಮುಖಮಂಟಪ (ವಲಿಯವಾದಿರ್ ಮಾಡ) :-
ಶ್ರೀ ಕ್ಷೇತ್ರವು ಪೂರ್ವಭಿಮುಖವಾಗಿ ದೇಗುಲ ಪ್ರವೇಶ ದ್ವಾರವಿದೆ. ಈ ಪ್ರವೇಶ ದ್ವಾರವನ್ನು ಪ್ರವೇಶಿಸಲು ಪ್ರವೇಶ ಮಂಟಪವಿದೆ. ಈ ಮಂಟಪದ ಮಧ್ಯದಲ್ಲಿ ದೇಗುಲದ ಮಾತೃ ಬಲಿಕಲ್ಲು ಇದೆ. ಇದನ್ನು ಮಂಟಪ ಎಂದು ಹೇಳಲಾಗುತ್ತಿದ್ದರೂ, ಉತ್ತರ-ದಕ್ಷಿಣ ದಿಕ್ಕುಗಳಿಗೆ ಹಿಂದಿನ ಮಾಡುಗಳಿದ್ದು ಎದುರಿಗೆ ಕೀರ್ತಿಮುಖವಿದೆ. ಕೀರ್ತಿಮುಖದ ಎಡ-ಬಲ, ಮೇಲೆ-ಕೆಳಗೆ ಭಾಗದಲ್ಲಿ ಭಗವತಿಯ ಮಹತ್ವಗಳನ್ನು ರೂಪಿಸಲಾಗಿದೆ.
ಭಗವತಿ ಮಂಟಪ :-
ಕ್ಷೇತ್ರದ ಒಳಾಂಗಣಕ್ಕೆ ಪ್ರವೇಶಿಸುವಾಗ ಪ್ರಥಮತಃ ಎದುರಿಗೆ ನಮಸ್ಕಾರ ಮಂಟಪವಿದೆ. ಬ್ರಾಹ್ಮಣರು ಮಾತ್ರ ಸಾಷ್ಟಾಂಗ ನಮಸ್ಕರಿಸುವ ಈ ಮಂಟಪವು ಭಗವತಿ ಮಂಟಪವೆಂದೆ ಕರೆಯಲ್ಪಡುತ್ತದೆ. ಈ ಮಂಟಪದ ಪಡು-ಬಡಗು ಮೂಲೆಯಲ್ಲಿ ಒಂದು ದಾರುಪೀಠವಿದೆ. ಬೆಳಿಗ್ಗೆ ಕ್ಷೇತ್ರದ ಬಾಗಿಲು ತೆರೆದಾಗ ಪ್ರಥಮತಃ ಭಗವತಿ ಗುಡಿಯಲ್ಲಿರುವ ಭಗವತಿಯ ತಿರುವಾಯುಧವನ್ನು ಪ್ರಧಾನ ಅರ್ಚಕರು ಪೂಜಿಸಿ ತಂದು ಈ ದಾರು ಪೀಠದಲ್ಲಿ ಇಡುವುದಾಗಿದೆ. ಆನಂತರವೇ ಭಕ್ತರಿಗೆ ಶ್ರೀ ದೇವರು ದರ್ಶನಕ್ಕೆ ಅವಕಾಶವಿರುವುದಾಗಿದೆ. ಅದೇ ರೀತಿ ಸಂಧ್ಯಾಪೂಜೆಯ ನಂತರ ಈ ಆಯುಧವನ್ನು ಪುನಃ ದೇವಿ ಗುಡಿಯಲ್ಲಿರಿಸುವುದಾಗಿದೆ.
ಮುಂದುವರೆಯುತ್ತದೆ……………….