ಮನೆ ಅಪರಾಧ ಮಾಡಾಳ್ ವಿರೂಪಾಕ್ಷಪ್ಪ 5 ದಿನಗಳ ಕಾಲ ಲೋಕಾಯುಕ್ತ ವಶಕ್ಕೆ: ನ್ಯಾಯಾಲಯ ಆದೇಶ

ಮಾಡಾಳ್ ವಿರೂಪಾಕ್ಷಪ್ಪ 5 ದಿನಗಳ ಕಾಲ ಲೋಕಾಯುಕ್ತ ವಶಕ್ಕೆ: ನ್ಯಾಯಾಲಯ ಆದೇಶ

0

ಬೆಂಗಳೂರು: ಲಂಚ ಪ್ರಕರಣದ ಪ್ರಮುಖ ಆರೋಪಿ, ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಐದು ದಿನಗಳ ಕಾಲ ಲೋಕಾಯುಕ್ತ ವಶಕ್ಕೆ ನೀಡಿ ಮಂಗಳವಾರ ಆದೇಶ ನೀಡಿದೆ.

ವಿರೂಪಾಕ್ಷಪ್ಪರನ್ನು 10 ದಿನಗಳ ಕಾಲ ಕಸ್ಟಡಿಗೆ ನೀಡಬೇಕು ಎಂದು ಲೋಕಾಯುಕ್ತ ಪರ ವಕೀಲರು ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನ್ಯಾಯಾಧೀಶರಿಗೆ ಮನವಿ ಮಾಡಿದರು. ಇದಕ್ಕೆ ಮಾಡಾಳ್ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದರು. ಈಗಾಗಲೇ ಸಾಕಷ್ಟು ಬಾರಿ ವಿಚಾರಣೆಗೆ ಹಾಜರಾಗಿದ್ದಾರೆ. ಜತೆಗೆ ಮಾಡಾಳ್ ವಿರೂಪಾಕ್ಷಪ್ಪ ಅನಾರೋಗ್ಯ ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಜಾಮೀನು ನೀಡಬೇಕು ಎಂದು ಅರ್ಜಿ ಸಲ್ಲಿಸಿದರು. ಅಂತಿಮವಾಗಿ ಜಡ್ಜ್ ಬಿ.ಜಯಂತ್ ಕುಮಾರ್ ಐದು ದಿನಗಳ ಕಾಲ ಲೋಕಾಯುಕ್ತ ವಶಕ್ಕೆ ಒಪ್ಪಿಸಿ ಆದೇಶಿಸಿದರು.

ದಾವಣಗೆರೆ ಜಿಲ್ಲೆ ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ಲೋಕಾಯುಕ್ತ ಪೊಲೀಸರು ಸೋಮವಾರ ಸಂಜೆ ತುಮಕೂರಿನ ಕ್ಯಾತ್ಸಂದ್ರ ಟೋಲ್ ಬಳಿ ಬಂಧಿಸಿದ್ದರು. ಮಾಡಾಳ್ ವಿರೂಪಾಕ್ಷಪ್ಪ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ತಿರಸ್ಕರಿಸಿದ ಬೆನ್ನಲ್ಲೇ ಲೋಕಾಯುಕ್ತ ಪೊಲೀಸರು ಮಾಡಾಳ್ ಬಂಧನಕ್ಕೆ ಬಲೆ ಬೀಸಿದ್ದರು.

ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕೃತಗೊಂಡ ಬೆನ್ನಲ್ಲೇ ದಾವಣಗೆರೆಯ ಚನ್ನಗಿರಿ ತಾಲೂಕಿನ ಚನ್ನೇಶಪುರ ಗ್ರಾಮದಲ್ಲಿರುವ ಮಾಡಾಳ್ ಅವರ ನಿವಾಸಕ್ಕೆ ಲೋಕಾಯುಕ್ತ ಅಧಿಕಾರಿಗಳು ಧಾವಿಸಿದ್ದರು. ಆರು ಜನ ಲೋಕಾಯುಕ್ತ ಡಿವೈಎಸ್ಪಿ ಹಾಗೂ ಇನ್ಸ್ಪೆಕ್ಟರ್ ಹುದ್ದೆಯ ಅಧಿಕಾರಿಗಳು ಮನೆಗೆ ತೆರಳಿದ್ದರು. ಅಷ್ಟರಲ್ಲಿ ಬಿಳಿ ಇನ್ನೋವಾ ಕಾರಿನಲ್ಲಿ ಮಾಡಾಳ್ ಬೆಂಗಳೂರು ಕಡೆ ತೆರಳಿದ್ದಾರೆ ಎಂಬ ಮಾಹಿತಿ ದೊರೆತಿತ್ತು. ಅದರಂತೆಯೇ ತುಮಕೂರಿನ ಕ್ಯಾತಸಂದ್ರ ಟೋಲ್ ಬಳಿ ಲೋಕಾಯುಕ್ತ ಪೊಲೀಸರು ಅರೆಸ್ಟ್ ಮಾಡಿ ಬೆಂಗಳೂರಿಗೆ ಕರೆದೊಯ್ದಿದ್ದರು. ನಂತರ ಅವರ ವೈದ್ಯಕೀಯ ತಪಾಸಣೆ ನಡೆಸಲಾಗಿತ್ತು. ಆರೋಗ್ಯ ತಪಾಸಣೆ ಮಾಡಿದ್ದ ವೈದ್ಯರು ಮಾಡಾಳ್ ಆರೋಗ್ಯ ಸ್ಥಿರವಾಗಿದೆ ಎಂದು ವರದಿ ನೀಡಿದ ಬಳಿಕ ಅವರನ್ನು ಲೋಕಾಯುಕ್ತ ಕಚೇರಿಗೆ ಕರೆದೊಯ್ಯಲಾಗಿತ್ತು. ಸೋಮವಾರ ರಾತ್ರಿಯನ್ನು ಲೋಕಾಯುಕ್ತ ಕಚೇರಿಯಲ್ಲೇ ಕಳೆದಿದ್ದ ಮಾಡಾಳ್ ಅವರನ್ನು ಇಂದು (ಮಂಗಳವಾರ) ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಹಿಂದಿನ ಲೇಖನಕಾಂತಿಯುತ ಚರ್ಮಕ್ಕಾಗಿ ಬೇಸಿಗೆಯಲ್ಲಿ ಈ ಹಣ್ಣುಗಳನ್ನು ಸೇವಿಸಿ
ಮುಂದಿನ ಲೇಖನಚಿತ್ರರಂಗಕ್ಕೆ ಕಾಲಿಟ್ಟ ನಟ ವಜ್ರಮುನಿ ಮೊಮ್ಮಗ