ಬೆಂಗಳೂರು: ಲಂಚ ಸ್ವೀಕಾರ ಪ್ರಕರಣದಲ್ಲಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರನ ಬಂಧನ ಪ್ರಕರಣದ ತನಿಖೆ ಚುರುಕುಗೊಳ್ಳುತ್ತಿದ್ದಮತೆ ಇಬ್ಬರು ತನಿಖಾಧಿಕಾರಿಗಳನ್ನು ಬದಲಾವಣೆ ಮಾಡಲಾಗಿದೆ.
ಪ್ರಕರಣ ದಾಖಲಾದಾಗಿನಿಂದ ತನಿಖೆ ಕೈಗೊಂಡಿದ್ದ ಡಿವೈಎಸ್ಪಿ ಪ್ರಮೋದ್ ಕುಮಾರ್ ಹಾಗೂ ಇನ್ಸ್’ಪೆಕ್ಟರ್ ಕುಮಾರಸ್ವಾಮಿ ಅವರ ಸ್ಥಾನಕ್ಕೆ ಡಿವೈಎಸ್ಪಿ ಆಂಥೋನಿ ಜಾನ್ ಹಾಗೂ ಇನ್ಸ್’ಪೆಕ್ಟರ್ ಬಾಲಾಜಿ ಬಾಬು ನೇಮಿಸಲಾಗಿದೆ.
40 ಲಕ್ಷ ರೂ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಅಧಿಕಾರಿಗಳಿಂದ ಶಾಸಕರ ಪುತ್ರ ಪ್ರಶಾಂತ್ ಮಾಡಾಳ್ ಬಂಧನವಾಗಿತ್ತು. ಮುಂದುವರೆದ ಪರಿಶೀಲನೆಯಲ್ಲಿ ಪ್ರಶಾಂತ್ ಮಾಡಾಳ್ ಮನೆಯಲ್ಲಿಯೂ ನಗದು ಪತ್ತೆಯಾಗಿತ್ತು. ಲೋಕಾಯುಕ್ತರು ತನಿಖೆ ಚುರುಕುಗೊಳಿಸುತ್ತಿದ್ದಂತೆ ಇದೀಗ ಇಬ್ಬರು ತನಿಖಾಧಿಕಾರಿಗಳು ಬದಲಾಗಿದ್ದಾರೆ.
ಪ್ರಕರಣದ ಹಿನ್ನೆಲೆ: ಚನ್ನಗಿರಿ ಕ್ಷೇತ್ರ ಶಾಸಕರೂ ಆಗಿರುವ ಮಾಡಾಳ್ ವಿರೂಪಾಕ್ಷಪ್ಪ ಕೆಎಸ್‌ಡಿಎಲ್‌ನ ಅಧ್ಯಕ್ಷರಾಗಿದ್ದಾರೆ. ಇದಕ್ಕೆ ರಾಸಾಯನಿಕಗಳ ಪೂರೈಕೆಗಾಗಿ ಗುತ್ತಿಗೆ ಪಡೆದಿದ್ದ ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿತ್ತು. ಮಾಡಾಳ್ ಪ್ರಶಾಂತ್ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದರು.
ಇದಾದ ಬಳಿಕ ವಿರೂಪಾಕ್ಷಪ್ಪ ಮತ್ತವರ ಪುತ್ರನ ಬೆಂಗಳೂರಿನ ಕಚೇರಿಗಳು ಹಾಗೂ ಮನೆ ಮತ್ತು ಚೆನ್ನಗಿರಿಯ ಮನೆಗಳ ಮೇಲೆ ದಾಳಿ ನಡೆಸಿದ್ದ ಲೋಕಾಯುಕ್ತ ಪೊಲೀಸರು ನಗದು ಜಪ್ತಿ ಮಾಡಿ ತನಿಖೆ ಮುಂದುವರೆಸಿದ್ದಾರೆ. ಈ ಎಲ್ಲ ಬೆಳವಣಿಗೆಗಳ ಮಧ್ಯೆ ಕೆಎಸ್‌ಡಿಎಲ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ರವಾನಿಸಿದ್ದ ಮಾಡಾಳ್ ವಿರೂಪಾಕ್ಷಪ್ಪ ನಿರೀಕ್ಷಣಾ ಜಾಮೀನಿಗೂ ಕೋರ್ಟ್’ಗೆ ಅರ್ಜಿ ಸಲ್ಲಿಸಿದ್ದರು.