ಮನೆ ಮನರಂಜನೆ ವಿನಯ್ ರಾಜ್‌ಕುಮಾರ್ ಸಿನಿಮಾದಲ್ಲಿ ರವಿಚಂದ್ರನ್ ನಟನೆ

ವಿನಯ್ ರಾಜ್‌ಕುಮಾರ್ ಸಿನಿಮಾದಲ್ಲಿ ರವಿಚಂದ್ರನ್ ನಟನೆ

0

‘ಕ್ರೇಜಿ ಸ್ಟಾರ್’ ರವಿಚಂದ್ರನ್‌ ಅವರು ಈಚೆಗೆ ಹೆಚ್ಚೆಚ್ಚು ಪೋಷಕ ಪಾತ್ರಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ‘ಅಂದೊಂದಿತ್ತು ಕಾಲ’ ಎಂಬ ಸಿನಿಮಾದಲ್ಲಿಯೂ ಒಂದು ಪಾತ್ರ ಮಾಡಿದ್ದು, ಇದು ವಿಶೇಷ ಪಾತ್ರ ಎಂದಿದ್ದಾರೆ ಅವರು. ವಿನಯ್‌ ರಾಜ್‌ಕುಮಾರ್‌ ನಾಯಕರಾಗಿರುವ ಈ ಸಿನಿಮಾದಲ್ಲಿ ಅದಿತಿ ಪ್ರಭುದೇವ ನಾಯಕಿ. ಬುಧವಾರ ಚಿತ್ರೀಕರಣ ಮುಗಿದಿದ್ದು, ಚಿತ್ರೀಕರಣ ಸೆಟ್‌ನಲ್ಲಿ ಮಾತಿಗೆ ಸಿಕ್ಕ ರವಿಚಂದ್ರನ್‌ ತಮ್ಮ ಪಾತ್ರದ ಬಗ್ಗೆ ಸೊಗಸಾಗಿ ವಿವರಿಸಿದರು.

‘ಅಂದೊಂದಿತ್ತು ಕಾಲ’ ಸಿನಿಮಾದಲ್ಲಿ ನನ್ನ ಪಾತ್ರ ವಿಶೇಷವಾಗಿದೆ. ಈ ಚಿತ್ರದ ಪಾತ್ರದಲ್ಲಿ ನಾನು ರಮೇಶ್‌ ಅರವಿಂದ್‌ಗೆ ಡ್ಯೂಪ್‌ ಆಗಿ ನಟಿಸಿದ್ದೇನೆ ಎನ್ನಬಹುದು. ರಮೇಶ್‌ ‘ವೀಕೆಂಡ್‌ ವಿತ್‌ ರಮೇಶ್‌’ ಎಂಬ ಕಾರ್ಯಕ್ರಮ ನಡೆಸಿಕೊಡುವಂತೆ ನಾನಿಲ್ಲಿ ‘ಮೆಮೊರೀಸ್‌ ವಿತ್‌ ರವಿಚಂದ್ರನ್‌’ ಎಂಬ ಕಾರ್ಯಕ್ರಮವನ್ನು ನಡೆಸಿಕೊಡುತ್ತಿರುತ್ತೇನೆ. ಅಲ್ಲಿ ನಾಯಕನ ಬದುಕಿನ ಕಥೆಯನ್ನು ನನ್ನ ಮೂಲಕ ನಿರ್ದೇಶಕರು ಹೇಳುತ್ತಾರೆ. ವಿನಯ್‌ ರಾಜ್‌ಕುಮಾರ್‌ ನಮ್ಮ ಕುಟುಂಬದ ಹುಡುಗ ಇದ್ದ ಹಾಗೆ. ಆತನ ಸಿನಿಮಾದಲ್ಲಿ ನಟಿಸುವಂತೆ ಕೇಳಿದಾಗ ಇಲ್ಲ ಎನ್ನಲಾಗಲಿಲ್ಲ. ಮೊದಲ ಬಾರಿಗೆ ನಿರೂಪಕನಾಗಿ ನಟಿಸುತ್ತಿದ್ದೇನೆ’ ಎಂದು ಹೇಳಿದರು .

ಪೋಷಕ ಕಲಾವಿದರಾಗುವುದು ಒಂದರ್ಥದಲ್ಲಿ ಒಳ್ಳೆಯ ದುಡಿಮೆ. ಕಡಿಮೆ ಕೆಲಸ ಹೆಚ್ಚು ಹಣ. ಹಾಗಂತ ಬರೀ ಹಣಕ್ಕೆ ನಾನು ಸಿನಿಮಾ ಮಾಡುವುದಿಲ್ಲ. ಬದಲಿಗೆ, ನಾನು ನಿರ್ವಹಿಸುವ ಪಾತ್ರ ನಿರ್ದೇಶಕರು ಬರೆದುಕೊಂಡ ಕಥೆಗೆ ಏನಾದರೂ ಉಪಯೋಗವಾಗುವುದಾದರೆ ಮಾಡುತ್ತೇನೆ’ ಎಂದು ಹೇಳಿದರು.

ಇನ್ನು, ಈ ಸಿನಿಮಾವನ್ನು ಭುವನ್ ಸಿನಿಮಾಸ್ ಲಾಂಛನದಡಿಯಲ್ಲಿ ಸುರೇಶ್ ನಿರ್ಮಿಸುತ್ತಿದ್ದಾರೆ. ‘ಅಂದೊಂದಿತ್ತು ಕಾಲ’ ಚಿತ್ರದ ಚಿತ್ರೀಕರಣವು ಬಹುತೇಕ ಸಂಪೂರ್ಣಗೊಂಡಿದೆ. ಈ ಹಿಂದೆ ಡಾ. ರಾಜ್‌ಕುಮಾರ್ ಕುಟುಂಬದ ಡಾ. ಶಿವರಾಜ್‌ಕುಮಾರ್ ಅವರು ‘ಕೊದಂಡರಾಮ’ ಚಿತ್ರದಲ್ಲಿ ರವಿಚಂದ್ರನ್ ಒಟ್ಟಿಗೆ ನಟಿಸಿದ್ದರು. ಈಗ ಡಾ. ರಾಜ್‌ ಕುಟುಂಬದ ಮತ್ತೋರ್ವ ನಟ ವಿನಯ್ ರಾಜ್‌ಕುಮಾರ್ ಜೊತೆ ರವಿಚಂದ್ರನ್ ನಟಿಸಿದ್ದಾರೆ.

ಈ ಚಿತ್ರಕ್ಕೆ ಅರಸು ಅಂತಾರೆ, ಸಂತೋಷ್ ಮುಂದಿನಮನೆ ಸಂಭಾಷಣೆ ಬರೆದಿದ್ದು, ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದಾರೆ. ಅಭಿಷೇಕ್ ಕಾಸರಗೋಡು ಅವರ ಛಾಯಾಗ್ರಹಣ ಇದ್ದು, ವಿ. ರಾಘವೇಂದ್ರ ಸಂಗೀತ ನೀಡಿದ್ದಾರೆ. ಎ.ಆರ್. ಕೃಷ್ಣ ಸಂಕಲನ ಮಾಡಿದ್ದು, ಆರ್.ಜೆ. ರಘು ನೃತ್ಯ ನಿರ್ದೇಶನ ಮಾಡಿದ್ದಾರೆ. ಹಲವಾರು ಯಶಸ್ವಿ ಚಿತ್ರಗಳ ನಿರ್ದೇಶಕರ ಜೊತೆ ಕೆಲಸ ಮಾಡಿದ ಕೀರ್ತಿ ಈ ಚಿತ್ರ ನಿರ್ದೇಶಿಸುವುದರ ಮೂಲಕ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ವಿನಯ್ ರಾಜ್‌ಕುಮಾರ್, ಅದಿತಿ ಪ್ರಭುದೇವ ಜೊತೆಗೆ ನಿಶಾ ಮಿಲನ, ಅರುಣಾ ಬಾಲರಾಜ್, ಮೋಹನ್ ಜುನೇಜಾ, ಕಡ್ಡಿಪುಡಿ ಚಂದ್ರು, ಮಜಾ ಭಾರತ ಜಗ್ಗಪ್ಪ, ಧರ್ಮೆಂದ್ರ ಅರಸ್, ಹಿರಿಯ ಸಾಹಿತಿ ಪ್ರೊ. ದೊಡ್ಡರಂಗೇಗೌಡ, ಗೋವಿಂದೇಗೌಡ ಮುಂತಾದವರಿದ್ದಾರೆ.

ಹಿಂದಿನ ಲೇಖನಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ಅಲ್ಪಸಂಖ್ಯಾತರಿಗೆ ತಲುಪಿಸಿ: ರಿಚನ್ ಲ್ಯಾಮೋ
ಮುಂದಿನ ಲೇಖನಶುಂಠಿಯ ಪ್ರಯೋಜನಗಳು