ಚೆನ್ನೈ (Chennai)- ತುರ್ತು ಸನ್ನಿವೇಶವೊಂದರಲ್ಲಿ ನ್ಯಾಯಮೂರ್ತಿಯೊಬ್ಬರು ವಾಟ್ಸ್‌ಆ್ಯಪ್ ಮೂಲಕ ರಿಟ್ ಅರ್ಜಿಯ ವಿಚಾರಣೆ ನಡೆಸಿ, ನಿರ್ದೇಶನ ನೀಡಿದ ಪ್ರಸಂಗ ತಮಿಳುನಾಡಿನಲ್ಲಿ ನಡೆದಿದೆ.
ವಿವಾಹ ಸಮಾರಂಭದಲ್ಲಿ ಭಾಗವಹಿಸುವುದಕ್ಕಾಗಿ ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿ ಜಿ.ಆರ್. ಸ್ವಾಮಿನಾಥನ್ ಭಾನುವಾರ ನಾಗರಕೊಯಿಲ್‌ಗೆ ತೆರಳಿದ್ದರು. ಅದೇ ಸಂದರ್ಭದಲ್ಲಿ ಧರ್ಮಪುರಿಯ ‘ಶ್ರೀ ಅಭೀಷ್ಟ ವರದರಾಜ ಸ್ವಾಮಿ ದೇಗುಲದ ಅನುವಂಶಿಕ ಟ್ರಸ್ಟಿ ಪಿ.ಆರ್. ಶ್ರೀನಿವಾಸನ್ ಪರ ವಕೀಲರು ರಿಟ್ ಅರ್ಜಿ ಸಲ್ಲಿಸಿದ್ದರು.
ದೇಗುಲದ ರಥೋತ್ಸವ ಸೋಮವಾರ ನಡೆಯಬೇಕಿದ್ದು, ಸರ್ಕಾರ ಅನುಮತಿ ನೀಡುತ್ತಿಲ್ಲ. ಉತ್ಸವ ನಡೆಯದಿದ್ದರೆ ಗ್ರಾಮಸ್ಥರು ದೇವರ ಕೋಪಕ್ಕೆ ಗುರಿಯಾಗಬೇಕಾಗುತ್ತದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು.
ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳು ಹಿಂದು ಧಾರ್ಮಿಕ ದತ್ತಿ ಇಲಾಖೆ ಇನ್‌ಸ್ಪೆಕ್ಟರ್‌ಗೆ ರಥೋತ್ಸವ ನಿಲ್ಲಿಸುವಂತೆ ದೇಗುಲದ ಅನುವಂಶಿಕ ಟ್ರಸ್ಟಿಗೆ ನಿರ್ದೇಶನ ನೀಡುವ ಅಧಿಕಾರವಿಲ್ಲ ಎಂದು ಹೇಳಿದ್ದಾರೆ.
ಇದಕ್ಕೆ ಸ್ಪಷ್ಟನೆ ನೀಡಿದ ಅಡ್ವೊಕೇಟ್ ಜನರಲ್, ಉತ್ಸವವನ್ನು ತಡೆಯಬೇಕೆಂಬ ಉದ್ದೇಶ ಸರ್ಕಾರಕ್ಕಿಲ್ಲ. ಆದರೆ ಸಾರ್ವಜನಿಕರ ಸುರಕ್ಷತೆಯೇ ಪ್ರಮುಖ ಕಳಕಳಿಯಾಗಿದೆ. ಸುರಕ್ಷತಾ ಮಾನದಂಡಗಳನ್ನು ಪಾಲಿಸದಿದ್ದರೆ ತಂಜಾವೂರು ಜಿಲ್ಲೆಯ ದೇಗುಲದ ಉತ್ಸವದ ವೇಳೆ ಇತ್ತೀಚೆಗೆ ಸಂಭವಿಸಿದಂಥ ದುರಂತಕ್ಕೆ ಸಾಕ್ಷಿಯಾಗಬೇಕಾಗಬಹುದು. ಅಂಥ ಅವಘಡಗಳು ಸಂಭವಿಸಬಾರದು. ಲೋಪದೋಷಗಳನ್ನು ಸರಿಪಡಿಸಿಕೊಂಡ ಬಳಿಕ ರಥೋತ್ಸವ ನಡೆಸುವುದಕ್ಕೆ ಸರ್ಕಾರದ ಅಭ್ಯಂತರವಿಲ್ಲ ಎಂದು ಹೇಳಿದ್ದಾರೆ.
ಇದನ್ನು ಪುರಸ್ಕರಿಸಿದ ನ್ಯಾಯಮೂರ್ತಿಗಳು, ಸರ್ಕಾರವು ರೂಪಿಸಿರುವ ಕಾನೂನು ಮತ್ತು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ದೇಗುಲದ ಆಡಳಿತ ಮಂಡಳಿಗೆ ಸೂಚಿಸಿದ್ದಾರೆ. ಅಲ್ಲದೆ, ರಥೋತ್ಸವ ಆರಂಭವಾಗಿ ಕೊನೆಗೊಳ್ಳುವವರೆಗೆ ಆ ಪ್ರದೇಶದಲ್ಲಿ ಕೆಲವು ಗಂಟೆಗಳ ಕಾಲ ವಿದ್ಯುತ್ ಸಂಪರ್ಕ ಕಡಿತಗೊಳಿಸಬೇಕು ಎಂದು ರಾಜ್ಯ ಸರ್ಕಾರದ ಅಧೀನದಲ್ಲಿರುವ ಡಿಸ್ಕಾಂ ಕಂಪನಿ ಟಿಎಎನ್‌ಜಿಇಡಿಸಿಒಗೆ ನಿರ್ದೇಶನ ನೀಡಿದ್ದಾರೆ.
ಏಪ್ರಿಲ್ 27ರಂದು ತಮಿಳುನಾಡಿನ ತಂಜಾವೂರು ಜಿಲ್ಲೆಯ ಕಳಿಮೆಡುವಿನ ಅಪ್ಪಾರ್ ಮಡಂ ದೇವಸ್ಥಾನದ ರಥೋತ್ಸವದ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ ಮೂವರು ಮಕ್ಕಳು ಸೇರಿ 11 ಮಂದಿ ಮೃತಪಟ್ಟಿದ್ದರು. 17 ಮಂದಿ ಗಾಯಗೊಂಡಿದ್ದರು. ರಥಕ್ಕೆ ಹೈವೋಲ್ಟೇಜ್ ವಿದ್ಯುತ್ ತಂತಿ ತಗುಲಿದ ಪರಿಣಾಮ ಅದು ಹೊತ್ತಿ ಉರಿದಿತ್ತು. ರಥದ ಸಮೀಪ ನಿಂತಿದ್ದ 11 ಮಂದಿ ಸ್ಥಳದಲ್ಲೇ ಸುಟ್ಟು ಕರಕಲಾಗಿದ್ದರು.
ರಿಟ್ ಅರ್ಜಿದಾರರ ಶ್ರದ್ಧಾಪೂರ್ವಕ ಮನವಿಯ ಮೇರೆಗೆ ನಾಗರಕೊಯಿಲ್‌ನಿಂದಲೇ ವಾಟ್ಸ್‌ಆ್ಯಪ್ ಮೂಲಕ ವಿಚಾರಣೆ ನಡೆಸಬೇಕಾದ ಅನಿವಾರ್ಯತೆಗೆ ನನ್ನನ್ನು ದೂಡಿತು ಎಂದು ನ್ಯಾಯಮೂರ್ತಿ ಹೇಳಿದ್ದಾರೆ. ವಾಟ್ಸ್‌ಆ್ಯಪ್ ಮೂಲಕ ನಡೆದ ವಿಚಾರಣೆಯಲ್ಲಿ ಅರ್ಜಿದಾರರ ಪರ ವಕೀಲ ವಿ. ರಾಘವಾಚಾರಿ, ಅಡ್ವೊಕೇಟ್ ಜನರಲ್ ಆರ್. ಷಣ್ಮುಗಸುಂದರಂ ವಾದ, ಪ್ರತಿವಾದ ಮಂಡಿಸಿದ್ದಾರೆ.