ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ (ಇಪಿಎಸ್) ಮತ್ತು ಎಐಎಡಿಎಂಕೆಯ ಓ ಪನ್ನೀರ್‌ಸೆಲ್ವಂ (ಓಪಿಎಸ್) ನಡುವಿನ ವ್ಯಾಜ್ಯ ಪರಿಹರಿಸಲು ಮದ್ರಾಸ್ ಹೈಕೋರ್ಟ್ ಭಾನುವಾರ ವಿಶೇಷ ಕಲಾಪ ನಡೆಸಿತು. ವಿಚಾರಣೆ ವೇಳೆ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಚುನಾವಣೆಗೆ ತಡೆ ನೀಡಲು ನ್ಯಾಯಾಲಯ ಸಮ್ಮತಿ ಸೂಚಿಸಲಿಲ್ಲ.
ಮಾರ್ಚ್ 24ರವರೆಗೆ ಪಕ್ಷದ ಪ್ರಧಾನ ಕಾರ್ಯದರ್ಶಿ ಚುನಾವಣೆಯ ಫಲಿತಾಂಶಗಳನ್ನು ಪ್ರಕಟಿಸುವುದಿಲ್ಲ ಎಂದು ಎಐಎಡಿಎಂಕೆ ಸಾಮಾನ್ಯ ಸಮಿತಿ ಮತ್ತು ಪಳನಿಸ್ವಾಮಿ ವಿಚಾರಣೆಯ ಕೊನೆಯಲ್ಲಿ ನ್ಯಾಯಾಲಯಕ್ಕೆ ಭರವಸೆ ನೀಡಿದರು.
ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಮಧ್ಯಂತರ ಅರ್ಜಿಗಳನ್ನು ಮಾರ್ಚ್ 22ರಂದು ಆಲಿಸಿ ಮಾರ್ಚ್ 24ರಂದು ಆದೇಶ ನೀಡಲು ನ್ಯಾಯಮೂರ್ತಿ ಕೆ ಕುಮಾರೇಶ್ ಬಾಬು ಅವರು ಒಪ್ಪಿಗೆ ನೀಡಿದ ಬಳಿಕ ಕ್ರಮವಾಗಿ ಇಪಿಎಸ್ ಮತ್ತು ಪಕ್ಷದ ಜನರಲ್ ಕೌನ್ಸಿಲ್ ಪರ ಹಾಜರಿದ್ದ ಹಿರಿಯ ನ್ಯಾಯವಾದಿಗಳಾದ ಎಸ್‌ಐಎಸ್ ವೈದ್ಯನಾಥನ್ ಮತ್ತು ವಿಜಯ್ ನಾರಾಯಣ್ ಅವರು ಈ ಆಶ್ವಾಸನೆ ನೀಡಿದರು.
ಪಕ್ಷ ಮಾರ್ಚ್ 26ರಂದು ಘೋಷಿಸಿರುವ ಪ್ರಧಾನ ಕಾರ್ಯದರ್ಶಿ ಚುನಾವಣೆಗೆ ತಡೆ ನೀಡುವಂತೆ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ ಓಪಿಎಸ್ ಬಣಕ್ಕೆ ಸೇರಿದ ಎಐಎಡಿಎಂಕೆಯ ಉಚ್ಚಾಟಿತ ಮೂವರು ಸದಸ್ಯರಾದ ಮನೋಜ್ ಪಾಂಡಿಯನ್, ಆರ್ ವೈತಿಲಿಂಗಂ ಹಾಗೂ ಜೆಸಿಡಿ ಪ್ರಭಾಕರ್ ಅವರು ತುರ್ತು ವಿಚಾರಣೆಗೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಭಾನುವಾರ ನ್ಯಾ. ಬಾಬು ಅವರಿದ್ದ ಪೀಠ ಆಲಿಸಿತು.
ಕಳೆದ ವರ್ಷ ಜುಲೈ 11ರಂದು ನಡೆದ ಪಕ್ಷದ ಸಾಮಾನ್ಯ ಸಮಿತಿ ಸಭೆಯಲ್ಲಿ ಅಂಗೀಕರಿಸಿದ ನಿರ್ಣಯಗಳು ಮತ್ತು ಪಕ್ಷ ಚುನಾವಣೆ ನಡೆಸದಂತೆ ಮಾಡಲಾದ ಮನವಿ ಹಾಗೂ ತಮ್ಮನ್ನು ಉಚ್ಛಾಟಿಸಿರುವುದನ್ನು ಪ್ರಶ್ನಿಸಿ ಈ ಮೂವರೂ ಸಲ್ಲಿಸಿದ್ದ ಮತ್ತೊಂದು ಅರ್ಜಿಯನ್ನು ಮಾರ್ಚ್ 17ರಂದು ನಡೆದಿದ್ದ ವಿಚಾರಣೆ ವೇಳೆ ನ್ಯಾಯಾಲಯ ಏಪ್ರಿಲ್ 11ಕ್ಕೆ ಮುಂದೂಡಿತ್ತು. ಆದರೆ, ಶುಕ್ರವಾರ ಪಕ್ಷದ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಆಸಕ್ತರಿಂದ ನಾಮಪತ್ರ ಕೋರಲಾಗಿತ್ತು..
ಶನಿವಾರ ಇಪಿಎಸ್ ಅವರು ನಾಮಪತ್ರ ಸಲ್ಲಿಸಿದರು. ಆ ಬಳಿಕ ಅರ್ಜಿದಾರರು ತುರ್ತು ವಿಚಾರಣೆ ಕೋರಿ ಹೈಕೋರ್ಟ್ ಮೊರೆ ಹೋಗಿದ್ದರು. ಭಾನುವಾರ ಮಧ್ಯಾಹ್ನ 3 ಗಂಟೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಅಲ್ಲಿಯವರೆಗೆ ಪಕ್ಷ ಇಪಿಎಸ್ ಅವರ ಏಕೈಕ ನಾಮಪತ್ರ ಸ್ವೀಕರಿಸಲಾಗಿದೆ.
ಪಾಂಡಿಯನ್ ಪರ ವಾದ ಮಂಡಿಸಿದ ಹಿರಿಯ ವಕೀಲ ಪಿ ಎಸ್ ರಾಮನ್, ಪ್ರಕರಣ ನ್ಯಾಯಾಲಯದಲ್ಲಿರುವಾಗ ಪಕ್ಷ ಚುನಾವಣೆ ನಡೆಸಲು ಧಾವಿಸಿದ್ದು ಏಕೆ ಎಂದು ಪ್ರಶ್ನಿಸಿದರು. ಇದು ಕಾನೂನು ಪ್ರಕ್ರಿಯೆಯ ದುರುಪಯೋಗ ಎಂದ ಅವರು ಮಧ್ಯಂತರ ಪರಿಹಾರಕ್ಕೆ ಒತ್ತಾಯಿಸಿದರು. ಮಾರ್ಚ್ 26ರ ಚುನಾವಣೆಗೆ ತಡೆ ನೀಡುವಂತೆ ವಿನಂತಿಸಿದರು.
ಆದರೆ ಪಕ್ಷದ ಆಂತರಿಕ ವಿಚಾರಗಳಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದು ಎಐಎಡಿಎಂಕೆ ಮತ್ತು ಇಪಿಎಸ್ ತಿಳಿಸಿದರು. ಮತದಾನಕ್ಕೆ ಪೂರಕವಾದ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು ನಡಾವಳಿ ಪ್ರಕಾರ ಚುನಾವಣೆ ಪೂರ್ಣಗೊಳಿಸಬೇಕಿದೆ. ಮಿಗಿಲಾಗಿ ಚುನಾವಣೆಯ ಫಲಿತಾಂಶ ನ್ಯಾಯಾಲಯದ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ. ಆದ್ದರಿಂದ ಚುನಾವಣೆಗೆ ತಡೆ ನೀಡಲು ಅವಕಾಶವಿಲ್ಲ ಎಂದರು.
ಪ್ರಕರಣ ನ್ಯಾಯಾಲಯದಲ್ಲಿರುವಾಗ ಚುನಾವಣೆ ನಡೆಸುವ ಆತುರ ಏನಿತ್ತು ಎಂದು ನ್ಯಾ. ಬಾಬು ಪ್ರಶ್ನಿಸಿದರು. ಅಲ್ಲದೆ ಫಲಿತಾಂಶ ವಿಳಂಬಗೊಳಿಸಲು ಸಾಧ್ಯವೇ ಎಂದು ಅವರು ಕೇಳಿದರು. ಬಳಿಕ “ನಾನು ಚುನಾವಣೆಗೆ ತಡೆ ನೀಡಲು ಹೋಗುವುದಿಲ್ಲ. ಆದರೆ ಮುಂದಿನ ವಿಚಾರಣೆಯವರೆಗೆ ಫಲಿತಾಂಶ ಪ್ರಕಟಿಸುವಂತಿಲ್ಲ” ಎಂದು ಅವರು ತಿಳಿಸಿದರು.