ಒಂದು ಸರಳವಾದ ಕಥೆಯನ್ನು ನೀವು ಎಷ್ಟು ಸುಂದರವಾಗಿ, ಮನಮಟ್ಟುವಂತೆ ಕಟ್ಟಿಕೊಡುತ್ತೀರಿ ಎಂಬುದರ ಮೇಲೆ ಒಂದು ಸಿನಿಮಾದ ಓಟ ನಿಂತಿರುತ್ತದೆ. ಆ ವಿಚಾರದಲ್ಲಿ ಈ ವಾರ ತೆರೆಕಂಡಿರುವ “ಮಗಳೇ’ ಒಂದು ಉತ್ತಮ ಪ್ರಯತ್ನದ ಸಿನಿಮಾ. ಸಣ್ಣ ಬಜೆಟ್ನಲ್ಲಿ, ಕಡಿಮೆ ಪಾತ್ರಗಳ ನ್ನಿಟ್ಟುಕೊಂಡು, ಎಲ್ಲೂ ಗೊಂದಲವಿಲ್ಲದಂತೆ ಹೇಳಬೇಕಾದ ವಿಚಾರವನ್ನು ಸ್ಪಷ್ಟವಾಗಿ ಹೇಳುತ್ತಾ, ಪ್ರೇಕ್ಷಕರಿಗೆ ಹತ್ತಿರವಾಗುವ ಸಿನಿಮಾ “ಮಗಳೇ’.
ಸಿನಿಮಾದ ಹೆಸರೇ ಸೂಚಿಸುವಂತೆ “ಮಗಳೇ’ ರೆಗ್ಯುಲರ್ ಕಮರ್ಷಿಯಲ್ ಅಂಶಗಳಿಂದ ಮುಕ್ತವಾಗಿರುವ ಸಿನಿಮಾ. ಒಂದು ಗಟ್ಟಿ ಕಥಾಹಂದರದೊಂದಿಗೆ “ಮಗಳೇ’ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಸೋಮು ಕೆಂಗೇರಿ. ಸಿನಿಮಾದ ಕಥೆಯನ್ನು ಯಾವ ರೀತಿ ಕಟ್ಟಿಕೊಡಬೇಕು ಎಂಬ ಸ್ಪಷ್ಟತೆ ನಿರ್ದೇಶಕರಲ್ಲಿ ಇದೆ. ಈ ಮೂಲಕ ಮೊದಲ ಚಿತ್ರದಲ್ಲೇ ನಿರ್ದೇಶಕರು ಭರವಸೆ ಮೂಡಿಸಿದ್ದಾರೆ.
ಕೆಲವೇ ಕೆಲವು ಪಾತ್ರಗಳನ್ನಿಟ್ಟುಕೊಂಡು, ಯಾವುದೇ ಅಬ್ಬರವಿಲ್ಲದೇ, ಕಥೆಯ ಆಶಯಕ್ಕೆ ತಕ್ಕಂತೆ ಚಿತ್ರವನ್ನು ಕಟ್ಟಿಕೊಡಲಾಗಿದೆ. ಹೆತ್ತವರ ಹಾಗೂ ಮಕ್ಕಳ ನಡುವಿನ ಬಾಂಧ್ಯವದ ಕಥಾಹಂದರದೊಂದಿಗೆ ತಯಾರಾಗಿರುವ ಈ ಸಿನಿಮಾದಲ್ಲಿ ಇವತ್ತಿನ ಪಾಲಕರು ಮಗಳ ಜೊತೆ ಹೇಗಿರಬೇಕು, ಎಷ್ಟು ಸೂಕ್ಷ್ಮವಾಗಿರಬೇಕು ಎಂಬ ಅಂಶವನ್ನು ಹೇಳಲಾಗಿದೆ.ಈ ಚಿತ್ರದ ಹೈಲೈಟ್ಗಳಲ್ಲಿ ಸಿನಿಮಾ ಸಾಗುವ ರೀತಿ ಹಾಗೂ ಅಲ್ಲಲ್ಲಿ ಬರುವ ಟ್ವಿಸ್ಟ್ ಪ್ರಮುಖವಾಗಿದೆ. ಮೊದಲರ್ಧ ಸಿನಿಮಾದ ಪಾತ್ರ ಪರಿಚಯ ಸೇರಿದಂತೆ ಇತರ ಅಂಶಗಳೊಂದಿಗೆ ಸಾಗಿದರೆ, ಸಿನಿಮಾದ ನಿಜವಾದ ಟ್ವಿಸ್ಟ್ ತೆರೆದುಕೊಳ್ಳುವುದು ದ್ವಿತೀಯಾರ್ಧದಲ್ಲಿ. ಪ್ರೇಕ್ಷಕನ ಊಹೆಗೆ ನಿಲುಕದಂತೆ ಸಿನಿಮಾ ಸಾಗುವುದು ಈ ಸಿನಿಮಾದ ಪ್ಲಸ್ ಪಾಯಿಂಟ್ಗಳಲ್ಲಿ ಒಂದು.
ಚಿತ್ರದಲ್ಲಿ ಗುರುರಾಜಶೆಟ್ಟಿ, ಬಿಂದು ರಕ್ಷಿಧಿ, ಸುಪ್ರಿತಾ ರಾಜ್, ಗ್ರೀಷ್ಮ ಶ್ರೀಧರ್, ಬಿಷನ್ ಶೆಟ್ಟಿ, ನೀನಾಸಂ ನವೀನ್ ಕುಮಾರ್ ಮುಂತಾದವರು ಅಭಿನಯಿಸಿದ್ದು, ಪ್ರತಿಯೊಬ್ಬರು ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಅದರಲ್ಲೂ ಬಿಂದು ರಕ್ಷಿಧಿ ಗಮನ ಸೆಳೆಯುತ್ತಾರೆ. ಬಿ.ಎಸ್.ಕೆಂಪರಾಜು ಅವರ ಸಂಕಲನ ಕೂಡಾ ಚಿತ್ರ ತೆರೆಮೇಲೆ ಅಚ್ಚುಕಟ್ಟಾಗಿ ಮೂಡಿಬರುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಒಂದು ಪ್ರಯತ್ನವಾಗಿ “ಮಗಳೇ’ ಇಷ್ಟವಾಗುತ್ತದೆ.