ಮುಂಬೈ(Mumbai): ಮಹಾರಾಷ್ಟ್ರದಲ್ಲಿ ಮಹಾ ವಿಕಾಸ ಅಘಾಡಿ ಸರ್ಕಾರದ ವಿರುದ್ಧ ಬಂಡಾಯವೆದ್ದಿರುವ ಶಿವಸೇನೆಯ ಶಾಸಕರನ್ನು ಅನರ್ಹಗೊಳಿಸದಂತೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದೆ.
ಬಂಡಾಯ ನಾಯಕ ಏಕನಾಥ್ ಶಿಂಧೆ ಸಲ್ಲಿಸಿದ ಅರ್ಜಿಯನ್ನು ಸೋಮವಾರ ವಿಚಾರಣೆ ನಡೆಸಿದ ಕೋರ್ಟ್, ಅನರ್ಹತೆಯ ಕ್ರಮವನ್ನು ತೆಗೆದುಕೊಳ್ಳದಂತೆ ಸೂಚನೆ ನೀಡಿದ್ದು, ಮುಂದಿನ ವಿಚಾರಣೆಯನ್ನು ಜುಲೈ 11ಕ್ಕೆ ಮುಂದೂಡಿದೆ.
ಕಳೆದ ವಾರ ಏಕನಾಥ್ ಶಿಂಧೆ ಮತ್ತು ಇತರ 15 ಬಂಡಾಯ ಶಾಸಕರಿಗೆ ನೀಡಲಾದ ಅನರ್ಹತೆ ನೋಟಿಸ್ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಉಪ ಸ್ಪೀಕರ್ ನರಹರಿ ಜಿರ್ವಾಲ್, ಮುಖ್ಯ ಸಚೇತಕ ಸುನಿಲ್ ಪ್ರಭು, ಶಾಸಕಾಂಗ ಪಕ್ಷದ ನಾಯಕ ಅನಿಲ್ ಚೌಧರಿ ಮತ್ತು ಕೇಂದ್ರಕ್ಕೆ ನೋಟಿಸ್ ಜಾರಿ ಮಾಡಿದೆ.
ಮಹಾ ವಿಕಾಸ್ ಅಘಾಡಿ ಸರ್ಕಾರಕ್ಕಿಲ್ಲ ಬಹುಮತ ಎಂದು ಉಲ್ಲೇಖ ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿ ಮೈತ್ರಿಕೂಟವು ಶಾಸಕರ ಬೆಂಬಲವನ್ನು ಕಳೆದುಕೊಂಡಿದೆ. ಶಿವಸೇನೆಯ 55 ಶಾಸಕರಲ್ಲಿ 38 ಶಾಸಕರು ಮೈತ್ರಿಕೂಟಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆ ಮೂಲಕ ಸರ್ಕಾರಕ್ಕೆ ನೀಡಿರುವ ಬೆಂಬಲವನ್ನು ವಾಪಸ್ ಪಡೆದುಕೊಂಡಿದ್ದಾರೆ. ಈಗ ಮೈತ್ರಿ ಸರ್ಕಾರವು ಸದನದಲ್ಲಿ ಬಹುಮತ ಕಳೆದುಕೊಂಡಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ನೀವು ಬಾಂಬೆ ಹೈಕೋರ್ಟ್ ಅನ್ನು ಮೊದಲು ಏಕೆ ಸಂಪರ್ಕಿಸಲಿಲ್ಲ? ಎಂದು ಬಂಡಾಯ ಶಾಸಕರ ಪರ ವಕೀಲರಿಗೆ ಸುಪ್ರೀಂಕೋರ್ಟ್ ಪ್ರಶ್ನೆ ಮಾಡಿತು. ಈ ವೇಳೆ ಉತ್ತರ ನೀಡಿದ ವಕೀಲ ಎನ್. ಕೆ. ಕೌಲ್, ಬಂಡಾಯ ಶಾಸಕರ ಮನೆ ಮತ್ತು ಆಸ್ತಿಗಳಿಗೆ ತೀವ್ರ ಬೆದರಿಕೆ ಒಡ್ಡಲಾಗುತ್ತಿದೆ. ಈ ಹಂತದಲ್ಲಿ ಬಾಂಬೆಯಲ್ಲಿನ ವಾತಾವರಣವು ಶಾಸಕರ ಹಕ್ಕು ಮಂಡನೆಗೆ ಪೂರಕವಾಗಿಲ್ಲ ಎಂದಿದ್ದಾರೆ. ಸೋಮವಾರ ಸುಪ್ರೀಂ ಕೋರ್ಟ್ನಲ್ಲಿ ಸಲ್ಲಿಸಲಾದ ಪ್ರತ್ಯೇಕ ಅರ್ಜಿಯಲ್ಲಿ ಏಕನಾಥ್ ಶಿಂಧೆ ತಮ್ಮ ಬಣದ ಶಾಸಕರ ಜೀವಕ್ಕೆ “ಬೆದರಿಕೆ” ಇರುವ ಬಗ್ಗೆ ದೂಷಿಸಲಾಗಿದೆ. ಈ ಅರ್ಜಿಯಲ್ಲಿ ಸಂಜಯ್ ರಾವತ್ ನೀಡಿರುವ ಮೃತ ದೇಹ ಎಂಬ ಹೇಳಿಕೆಯನ್ನು ಉಲ್ಲೇಖಿಸಲಾಗಿದೆ. ಇದರ ಬಗ್ಗೆ ಸ್ಪಷ್ಟನೆ ನೀಡಿರುವ ಸಂಸದರು, ತಾವು ಸತ್ತ ಆತ್ಮಸಾಕ್ಷಿಯ ಬಗ್ಗೆ ಮಾತನಾಡಿರುವುದಾಗಿ ಹೇಳಿದ್ದಾರೆ.
ಬಂಡಾಯ ಶಾಸಕರನ್ನು ಅನರ್ಹಗೊಳಿಸುವ ಅರ್ಜಿಗೆ ಸಂಬಂಧಿಸಿದಂತೆ ಯಾವುದೇ ಕ್ರಮವನ್ನು ತೆಗೆದುಕೊಳ್ಳದಂತೆ ಉಪ ಸ್ಪೀಕರ್ ಗೆ ಆದೇಶ ನೀಡಲು ಬಂಡಾಯ ಶಾಸಕರು ಸುಪ್ರೀಂ ಕೋರ್ಟ್ ಗೆ ಮನವಿ ಮಾಡಿದ್ದರು. ಇದರ ಜೊತೆಗೆ ತಮ್ಮ ಕುಟುಂಬಗಳಿಗೆ ಭದ್ರತೆ ಒದಗಿಸಲು ಮಹಾರಾಷ್ಟ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆಯೂ ನ್ಯಾಯಾಲಯವನ್ನು ಕೋರಿದ್ದರು. ಈ ವಾರದ ಆರಂಭದಲ್ಲಿ 16 ಬಂಡಾಯ ಶಾಸಕರನ್ನು ಅನರ್ಹಗೊಳಿಸುವಂತೆ ಶಿವಸೇನೆ ಉಪ ಸ್ಪೀಕರ್ ಗೆ ಮನವಿ ಸಲ್ಲಿಸಿತ್ತು. ಏಕನಾಥ್ ಶಿಂಧೆ ಪಾಳಯ ಕ್ರಮವು ಕಾನೂನುಬಾಹಿರ ಎಂದು ಪ್ರತಿಪಾದಿಸಿದೆ, ಏಕೆಂದರೆ ಅನರ್ಹತೆಯು ವಿಧಾನಸಭೆಯಲ್ಲಿನ ವಿಷಯಗಳಿಗಾಗಿ ಮಾತ್ರ ಸಂಬಂಧಿಸಿದೆಯೇ ವಿನಃ ಪಕ್ಷದ ಸಭೆಗೆ ಗೈರು ಹಾಜರಾಗುವುದಕ್ಕೆ ಅಲ್ಲ ಎಂದು ವಾದಿಸಿದೆ.